ಹನೂರು,ಸೆ.21- ಮಲೆ ಮಹದೇಶ್ವರ ವನ್ಯಧಾಮದಲ್ಲಿ ತಾಯಿಯಿಂದ ಬೇರ್ಪಟ್ಟ ಮರಿ ಆನೆಯೊಂದು ತಾಯಿಯನ್ನು ಹುಡುಕಿಕೊಂಡು ಓಡಾಡುತ್ತಿದ್ದ ಮನಕಲಕುವ ದೃಶ್ಯ ಕಂಡುಬಂದಿತು.
ತಾಲ್ಲೂಕಿನ ಬಫರ್ ವಲಯದ ಕಣಿವೆ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ನಿನ್ನೆ ಸಂಜೆ 7 ಗಂಟೆ ಸುಮಾರಿಗೆ ಮರಿಯಾನೆ ಅರಕನ ಹಳ್ಳಕ್ಕೆ ತಾಯಿ ಜೊತೆ ನೀರು ಕುಡಿಯಲು ಬಂದ ಸಂದರ್ಭದಲ್ಲಿ ಅಥವಾ ರಸ್ತೆ ದಾಟುವ ಧಾವಂತದಲ್ಲಿ ಮರಿ ಆನೆ ತಾಯಿಯಿಂದ ಬೇರ್ಪಟ್ಟಿರಬಹುದು ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.
ಅರಣ್ಯ ಇಲಾಖೆ ಈ ಮರಿಯಾನೆಯನ್ನು ಮತ್ತೆ ಅದರ ತಾಯಿಯ ಬಳಿ ಸೇರಿಸಲು ಪ್ರಯತ್ನ ಮಾಡಲಾಗುತ್ತಿದೆ. ಆನೆ ಕಾರ್ಯ ಪಡೆ ಸಿಬ್ಬಂದಿಯು ಅದರ ಚಲನವಲನಗಳನ್ನು ಗಮನಿಸುತ್ತಿದ್ದು ಮತ್ತೆ ಅದು ತಾಯಿಯ ಜೊತೆ ಸೇರುವವರೆಗೂ ನಮ ಸಿಬ್ಬಂದಿ ಅದನ್ನು ಹಿಂಬಾಲಿಸಲಿದ್ದಾರೆ ಎಂದು ಮಲೆ ಮಹದೇಶ್ವರ ವನ್ಯಾಧಾಮದ ಪ್ರಭಾರ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿರಾಜ್ ಹೊಸೂರು ತಿಳಿಸಿದರು.
