ಚಿಕ್ಕಮಗಳೂರು,ಸೆ.21-ಜಿಲ್ಲೆಯ ಶೃಂಗೇರಿ ಪಟ್ಟಣದಲ್ಲಿ ಕಸ್ತೂರಿ ರಂಗನ್ ವರದಿ ವಿರೋಧಿಸಿ ಇಂದು ಕರೆನೀಡಲಾಗಿದ್ದ ಬಂದ್ ಯಶಸ್ವಿಯಾಗಿದೆ.ಬೆಳಗ್ಗೆ 6 ಗಂಟೆಯಿಂದಲೇ ಅಂಗಡಿ ಮುಂಗಟ್ಟು, ವಾಹನ ಸಂಚಾರ ಸಂಪೂರ್ಣ ಬಂದ್ ಆಗಿದ್ದವು. ಇದರ ಪರಿಣಾಮ ಪ್ರವಾಸಿಗರಿಗೆ ಬಂದ್ ಬಿಸಿ ತಟ್ಟಿದೆ.
ಇಂದು ನಡೆಯಲಿರುವ ವಿಶೇಷ ಅಧಿವೇಶನದಲ್ಲಿ ಮಲೆನಾಡಿನ ರೈತರು, ಕಷಿಕರು, ಸ್ಥಳೀಯ ಜನರ ಹಿತಾಸಕ್ತಿಗೆ ಧಕ್ಕೆಯಾಗದಂತೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಕಸ್ತೂರಿ ರಂಗನ್ ವರದಿಯನ್ನು ತಿರಸ್ಕರಿಸಬೇಕೆಂಬ ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಮಲೆನಾಡಿನ ರೈತರು, ಸಾರ್ವಜನಿಕರು, ವಿವಿಧ ಸಂಘಟನೆಗಳ ಪ್ರತಿನಿಧಿಗಳು ಕರೆ ನೀಡಲಾಗಿದ್ದ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಕಸ್ತೂರಿ ರಂಗನ್ ವರದಿ ಜಾರಿಗೆ ಬಂದರೆ ಪಶ್ಚಿಮಘಟ್ಟದ ಪ್ರದೇಶಗಳಲ್ಲಿ ವಾಸಿಸುವ ಶ್ರೀ ಸಾಮಾನ್ಯರ ಜೀವನಕ್ಕೆ ಹೊಡೆತ ಬೀಳಲಿದೆ ಎಂಬ ಆತಂಕ ಸ್ಥಳೀಯರಲ್ಲಿ ಮೂಡಿದೆ. ಹಾಗಾಗಿ ಈ ವರದಿಯನ್ನು ಜಾರಿಗೊಳಿಸಬಾರದೆಂದು ಮಲೆನಾಡಿನ ರೈತರು ಪಟ್ಟು ಹಿಡಿದಿದ್ದಾರೆ.
ಬಂದ್ ಪರಿಣಾಮ ಪಟ್ಟಣದ ಅಂಗಡಿ ಮುಂಗಟ್ಟುಗಳು ತೆರೆದಿರಲಿಲ್ಲ. ವಾಹನ ಸಂಚಾರ ವಿರಳವಾಗಿತ್ತು. ಪಟ್ಟಣದಲ್ಲಿ ಬಿಗಿ ಪೊಲೀಸ್ ಬಂದೋಬ್ತ್ ಏರ್ಪಡಿಸಲಾಗಿತ್ತು. ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಆಟೋರಿಕ್ಷಾಗಳು ರಸ್ತೆಗೆ ಇಳಿಯಲಿಲ್ಲ.
ಕೆಲ ಮುಖಂಡರು ಬ್ಯಾಂಕುಗಳಿಗೆ ತೆರಳಿ ಬ್ಯಾಂಕ್ ವಹಿವಾಟು ಬಂದ್ ಮಾಡಿಸಿದರು.
ಪೆಟ್ರೋಲ್ ಬಂಕ್ , ತರಕಾರಿ ಮಳಿಗೆಗಳು, ಜವಳಿ ಅಂಗಡಿಗಳು ಇನ್ನಿತರ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದವು. ಬಂದ್ ಪರಿಣಾಮ ರಸ್ತೆಗಳೆಲ್ಲಾ ಜನ ಜಂಗುಳಿ ಇಲ್ಲದೇ ಬಿಕೋ ಎನ್ನುತ್ತಿದ್ದವು.
