Homeರಾಜ್ಯವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆ ಆಡಳಿತ-ವಿಪಕ್ಷಗಳ ನಡುವೆ 'ವಂದೇ ಮಾತರಂ' ವಾಗ್ವಾದ

ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆ ಆಡಳಿತ-ವಿಪಕ್ಷಗಳ ನಡುವೆ ‘ವಂದೇ ಮಾತರಂ’ ವಾಗ್ವಾದ

ಬೆಂಗಳೂರು, ಸೆ.21- ವಂದೇ ಮಾತರಂ ಕುರಿತ ಗದ್ದಲ ವಿಧಾನಸಭೆಯ ಕಲಾಪದ ಆರಂಭದಲ್ಲೇ ಪ್ರತಿಧ್ವನಿಸಿದ್ದು, ವಿರೋಧ ಪಕ್ಷ ಮತ್ತು ಆಡಳಿತ ಪಕ್ಷಗಳ ನಡುವೆ ತಾಳಮೇಳ ಇಲ್ಲಂದಂತಹ ವಾತಾವರಣ ನಿರ್ಮಾಣವಾಯಿತು. ಕಸ್ತೂರಿ ರಂಗನ್‌ ವರದಿ ಮತ್ತು ಬರ ಪರಿಸ್ಥಿತಿಯ ಕುರಿತು ಚರ್ಚೆಗಾಗಿ ಕರೆದಿರುವ ವಿಶೇಷ ಅಧಿವೇಶನದ ಮೊದಲನೇ ದಿನವಾದ ಇಂದು ಅರ್ಧ ಗಂಟೆ ತಡವಾಗಿ ಕಲಾಪ ಆರಂಭವಾಯಿತು.

ಎಂದಿನಂತೆ ವಂದೇ ಮಾತರಂ ಗೀತೆಯನ್ನು ಪ್ರಸಾರ ಮಾಡಲಾಯಿತು. ರಾಜ್ಯ ಸರ್ಕಾರದ ಆದೇಶದಂತೆ ಎರಡು ಚರಣಗಳ ಬಳಿಕ ವಂದೇಮಾತರಂ ನಿಲ್ಲಿಸಲಾಯಿತು. ಆದರೆ ಬಿಜೆಪಿ ಮತ್ತು ಜೆಡಿಎಸ್‌‍ನ ಶಾಸಕರು ತಮ ಕೈಯಲ್ಲಿ ವಂದೇ ಮಾತರಂ ಗೀತೆಯ ಮುದ್ರಿತ ಪ್ರತಿಯನ್ನು ಹಿಡಿದು ಬಾಕಿ ಉಳಿದ ಚರಣಗಳ ಗಾಯನವನ್ನು ಮುಂದುವರೆಸಿದರು.

ಈ ಮಧ್ಯೆ ಸಭಾಧ್ಯಕ್ಷ ಜಿ.ಎಸ್‌‍.ಪಾಟೀಲ ನಿಗದಿತ ವೇಳಾಪಟ್ಟಿಯಂತೆ ಕಲಾಪ ಮುಂದುವರೆಸಿದರು. ವಂದೇ ಮಾತರಂ ಗೀತೆಯ ಪ್ರಸಾರ ನಿಂತ ಬಳಿಕ ಸಂವಿಧಾನದ ಪೀಠಿಕೆಯನ್ನು ಬೋಧಿಸಿದರು. ನಂತರ ಸಂತಾಪ ಸೂಚನೆಯನ್ನು ಕೈಗೆತ್ತಿಕೊಂಡರು. ಇತ್ತ ಬಿಜೆಪಿಯ ಶಾಸಕರು ಪೂರ್ಣ ಚರಣಗಳನ್ನು ಹಾಡಿದ ಬಳಿಕ ತಾವಾಗಿಯೇ ಸಂವಿಧಾನದ ಪೀಠಿಕೆಯನ್ನು ಓದಿದರು.

ಬಳಿಕ ಭಾರತ್‌ ಮಾತಾಕೀ ಜೈ, ವಂದೇಮಾತರಂ, ಜೈಭೀಮ್‌ ಘೋಷಣೆಗಳನ್ನು ಕೂಗಿದರು. ಆದರೆ ಇದ್ಯಾವುದನ್ನು ಕೇಳಿಸಿಕೊಳ್ಳದಂತೆ ಆಡಳಿತ ಪಕ್ಷದ ಕಡೆಯಿಂದ ಮುಂದುವರೆದ ಕಲಾಪಗಳು ನಡೆಯುತ್ತಿದ್ದವು. ವಂದೇ ಮಾತರಂ ವಿಚಾರವಾಗಿ ವಿಧಾನಪರಿಷತ್‌ನಲ್ಲಾದಂತೆ ಯಾವುದೇ ಚರ್ಚೆ, ಗದ್ದಲಗಳು ನಡೆಯಲಿಲ್ಲ. ಆಡಳಿತ ಪಕ್ಷ ಕಾಂಗ್ರೆಸ್‌‍ನವರು ತಮ ನಿಲುವಿಗೆ ಬದ್ಧರಾಗಿ ಎರಡು ಚರಣಗಳನ್ನು ಹಾಡಿದರೆ, ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್‌‍ ಸದಸ್ಯರು ಪೂರ್ಣ ಚರಣಗಳನ್ನು ಹಾಡಿ, ಮುಂದುವರೆದ ಕಲಾಪದಲ್ಲಿ ಭಾಗವಹಿಸಿದರು.

RELATED ARTICLES
spot_img

Latest News