ನವದೆಹಲಿ, ಜೂನ್ 18: ಭಾರತದ ಮಾಜಿ ಪ್ರಧಾನಿ ಇಂದರ್ ಕುಮಾರ್ ಗುಜ್ರಾಲ್ ಅವರ ಪುತ್ರ ಹಾಗೂ ಮಾಜಿ ರಾಜ್ಯಸಭಾ ಸದಸ್ಯ ನರೇಶ್ ಗುಜ್ರಾಲ್ ಅವರು 7.8 ಕೋಟಿ ಸೈಬರ್ ವಂಚನೆಗೆ ಒಳಗಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ವಂಚಕರು ಆನ್‌ಲೈನ್ ಸಂದೇಶ ಕಳುಹಿಸುವ ಅಪ್ಲಿಕೇಶನ್‌ನಲ್ಲಿ ನರೇಶ್ ಗುಜ್ರಾಲ್ ಅವರ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿಸಿ, ಅವರ ಕಂಪನಿಯ ಹಣಕಾಸು ಸಿಬ್ಬಂದಿಯನ್ನು ಮೋಸಗೊಳಿಸಿ ಹಣ ವರ್ಗಾಯಿಸುವಂತೆ ಸೂಚನೆ ನೀಡಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರಲ್ಲಿ ಇ-ಎಫ್‌ಐಆರ್ ದಾಖಲಾಗಿದ್ದು, ತನಿಖೆ ಆರಂಭಿಸಲಾಗಿದೆ. ಪೊಲೀಸರ ಪ್ರಕಾರ, ಇದೇ ಜೂನ್ 12ರಿಂದ 16ರವರೆಗೆ ಈ ವಂಚನೆ ನಡೆದಿದೆ. ಆರೋಪಿಗಳು ನರೇಶ್ ಗುಜ್ರಾಲ್ ಅವರ ಛಾಯಾಚಿತ್ರವನ್ನು ಬಳಸಿ ಸಂದೇಶ ಅಪ್ಲಿಕೇಶನ್‌ನಲ್ಲಿ ನಕಲಿ ಖಾತೆ ತೆರೆದು ಅವರಂತೆ ನಟಿಸಿದ್ದಾರೆ. ನಂತರ ಕಂಪನಿಯ ಉದ್ಯೋಗಿಯೊಬ್ಬರಿಗೆ ತುರ್ತು ವ್ಯವಹಾರಿಕ ಅಗತ್ಯಕ್ಕಾಗಿ ನಿರ್ದಿಷ್ಟ ಬ್ಯಾಂಕ್ ಖಾತೆಗೆ ರಿಯಲ್ ಟೈಮ್ ಗ್ರಾಸ್ ಸೆಟಲ್‌ಮೆಂಟ್ ಮೂಲಕ ಹಣ ವರ್ಗಾಯಿಸುವಂತೆ ಸಂದೇಶ ಕಳುಹಿಸಿದ್ದಾರೆ.
ಸೂಚನೆಗಳು ನಿಜವಾಗಿಯೂ ಗುಜ್ರಾಲ್ ಅವರಿಂದ ಬಂದಿವೆ ಎಂದು ನಂಬಿದ ಉದ್ಯೋಗಿ, ಅವರಿಗೆ ನೀಡಲಾಗಿದ್ದ ಹಣಕಾಸು ಅಧಿಕಾರದ ಆಧಾರದ ಮೇಲೆ ನಾಲ್ಕು ದಿನಗಳ ಅವಧಿಯಲ್ಲಿ ನಾಲ್ಕು ಪ್ರತ್ಯೇಕ ವಹಿವಾಟುಗಳನ್ನು ನಡೆಸಿದ್ದಾರೆ. ಇದರ ಪರಿಣಾಮ 7.8 ಕೋಟಿ ಹಣ ವಂಚಕರ ಖಾತೆಗಳಿಗೆ ವರ್ಗಾವಣೆಯಾಗಿದೆ. ಜೂನ್ 16ರಂದು ಈ ವಹಿವಾಟುಗಳ ಬಗ್ಗೆ ಗುಜ್ರಾಲ್ ಅವರ ಪುತ್ರಿಗೆ ಮಾಹಿತಿ ದೊರೆತಿದ್ದು, ಅವರು ತಕ್ಷಣ ತಂದೆಯೊಂದಿಗೆ ಪರಿಶೀಲನೆ ನಡೆಸಿದ್ದಾರೆ.
ಆ ವೇಳೆ ನರೇಶ್ ಗುಜ್ರಾಲ್ ಅವರು ಇಂತಹ ಯಾವುದೇ ಸೂಚನೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದರಿಂದ ಕುಟುಂಬದವರು ಹಾಗೂ ಕಂಪನಿಯ ಸಿಬ್ಬಂದಿ ತಾವು ನಕಲಿ ಗುರುತು ಬಳಸಿ ನಡೆಸಿದ ಸೈಬರ್ ವಂಚನೆಗೆ ಬಲಿಯಾಗಿರುವುದು ಅರಿವಿಗೆ ಬಂದಿದೆ. ತನಿಖಾಧಿಕಾರಿಗಳ ಪ್ರಕಾರ, ತಕ್ಷಣ ಕೈಗೊಂಡ ಕ್ರಮದಿಂದ ವಂಚನೆಗೊಂಡ ಮೊತ್ತದ ಸುಮಾರು 70 ಪ್ರತಿಶತದಷ್ಟು ಹಣವನ್ನು ರಕ್ಷಿಸಲು ಸಾಧ್ಯವಾಗಿದೆ.
ವಂಚನೆಗೆ ಸಂಬಂಧಿಸಿದ ಹಲವು ಬ್ಯಾಂಕ್ ಖಾತೆಗಳ ಮೇಲೆ ನಿರ್ಬಂಧ ವಿಧಿಸುವ ಮೂಲಕ ಸುಮಾರು 4 ಕೋಟಿ ಹಣವನ್ನು ಸ್ಥಗಿತಗೊಳಿಸಲಾಗಿದೆ.
ಪ್ರಸ್ತುತ ಪೊಲೀಸರು ಹಣದ ಹರಿವಿನ ಮಾರ್ಗವನ್ನು ಪತ್ತೆಹಚ್ಚುವ ಹಾಗೂ ಹಣದ ಅಂತಿಮ ಫಲಾನುಭವಿಗಳನ್ನು ಗುರುತಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಈ ಘಟನೆ, ಉನ್ನತ ಮಟ್ಟದ ವ್ಯಕ್ತಿಗಳ ಹೆಸರನ್ನು ದುರುಪಯೋಗಪಡಿಸಿಕೊಂಡು ನಡೆಯುತ್ತಿರುವ ಸೈಬರ್ ವಂಚನೆಗಳ ಬಗ್ಗೆ ಮತ್ತೊಮೆ ಎಚ್ಚರಿಕೆಯ ಗಂಟೆ ಮೊಳಗಿಸಿದ್ದು, ಯಾವುದೇ ಹಣಕಾಸು ಸೂಚನೆಯನ್ನು ಅನುಷ್ಠಾನಗೊಳಿಸುವ ಮುನ್ನ ನೇರ ದೃಢೀಕರಣ ಮಾಡಿಕೊಳ್ಳುವ ಅಗತ್ಯವನ್ನು ಒತ್ತಿ ಹೇಳಿದೆ.
