Homeಬೆಂಗಳೂರುಬೆಂಗಳೂರಿಗೆ ಅಗತ್ಯವಿರುವ 9.56 ಟಿಎಂಸಿ ನೀರು ಕಾಯ್ದಿರಿಸಿ : ಕಾವೇರಿ ನಿಗಮಕ್ಕೆ ಪತ್ರ ಬರೆದ ಜಲಮಂಡಳಿ

ಬೆಂಗಳೂರಿಗೆ ಅಗತ್ಯವಿರುವ 9.56 ಟಿಎಂಸಿ ನೀರು ಕಾಯ್ದಿರಿಸಿ : ಕಾವೇರಿ ನಿಗಮಕ್ಕೆ ಪತ್ರ ಬರೆದ ಜಲಮಂಡಳಿ

ಬೆಂಗಳೂರು, ಜೂ. 20- ಮುಂಗಾರು ಆರಂಭದಲ್ಲೇ ನಿರೀಕ್ಷಿತ ಮಳೆಯಾಗದ ಹಿನ್ನೆಲೆಯಲ್ಲಿ ರಾಜ್ಯ ರಾಜಧಾನಿ ಬೆಂಗಳೂರಿಗೆ ಮುಂದಿನ ತಿಂಗಳುಗಳಲ್ಲಿ ಕುಡಿಯುವ ನೀರಿನ ಕೊರತೆ ಎದುರಾಗುವ ಆತಂಕ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಬೆಂಗಳೂರು ಜಲಮಂಡಳಿಯು ಕಾವೇರಿ ನೀರಾವರಿ ನಿಗಮಕ್ಕೆ 9.56 ಟಿಎಂಸಿ ನೀರನ್ನು ಬೆಂಗಳೂರಿನ ಕುಡಿಯುವ ನೀರಿನ ಅಗತ್ಯಕ್ಕಾಗಿ ಕಾಯ್ದಿರಿಸುವಂತೆ ಪತ್ರ ಬರೆದು ಮನವಿ ಮಾಡಿದೆ.

ಪ್ರಸ್ತುತ ಸುಮಾರು 1.50 ಕೋಟಿ ಜನಸಂಖ್ಯೆ ಹೊಂದಿರುವ ಬೆಂಗಳೂರಿನಲ್ಲಿ 11.50 ಲಕ್ಷಕ್ಕೂ ಹೆಚ್ಚು ನೀರಿನ ಸಂಪರ್ಕಗಳಿದ್ದು, ಜಲಮಂಡಳಿ ಪ್ರತಿದಿನ 2,225 ಎಂಎಲ್‌ಡಿ ನೀರು ಪೂರೈಸುತ್ತಿದೆ. ಇದರಲ್ಲಿ ಕಾವೇರಿ 5ನೇ ಹಂತದ 775 ಎಂಎಲ್‌ಡಿ ನೀರು ಸಹ ಸೇರಿದೆ.ಆದರೆ, ಈ ಬಾರಿ ಮುಂಗಾರು ಆರಂಭದಲ್ಲೇ ಮಳೆ ಕೊರತೆಯಾಗಿರುವುದು ಹಾಗೂ ಜಲಾಶಯಗಳಲ್ಲಿ ನೀರಿನ ಸಂಗ್ರಹ ಕಳೆದ ವರ್ಷಕ್ಕೆ ಹೋಲಿಸಿದರೆ ಕಡಿಮೆಯಾಗಿರುವುದು ಅಧಿಕಾರಿಗಳ ಆತಂಕಕ್ಕೆ ಕಾರಣವಾಗಿದೆ.

ಜುಲೈ ಮತ್ತು ಆಗಸ್ಟ್‌ ತಿಂಗಳಲ್ಲಿ ಸಮರ್ಪಕ ಮಳೆಯಾಗದಿದ್ದರೆ ಸೆಪ್ಟೆಂಬರ್‌ನಿಂದಲೇ ಬೆಂಗಳೂರಿನಲ್ಲಿ ನೀರಿನ ಅಭಾವ ಎದುರಾಗುವ ಸಾಧ್ಯತೆ ಇದೆ ಎಂದು ಜಲಮಂಡಳಿ ಅಂದಾಜಿಸಿದೆ. ಕಳೆದ ವರ್ಷದ ಜೂನ್‌ 16ರಂದು ಕೆಆರ್‌ಎಸ್‌‍ ಜಲಾಶಯದಲ್ಲಿ 22.943 ಟಿಎಂಸಿ ಹಾಗೂ ಕಬಿನಿಯಲ್ಲಿ 5.610 ಟಿಎಂಸಿ ನೀರು ಸಂಗ್ರಹವಿತ್ತು. ಆದರೆ ಈ ವರ್ಷದ ಜೂನ್‌ 16ಕ್ಕೆ ಕೆಆರ್‌ಎಸ್‌‍ನಲ್ಲಿ ಕೇವಲ 11.394 ಟಿಎಂಸಿ ಮತ್ತು ಕಬಿನಿಯಲ್ಲಿ 4.923 ಟಿಎಂಸಿ ನೀರು ಮಾತ್ರ ಲಭ್ಯವಿದೆ.

ಈ ಹಿನ್ನೆಲೆ ಬೆಂಗಳೂರಿನ ಕುಡಿಯುವ ನೀರಿನ ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ಅಗತ್ಯ ಪ್ರಮಾಣದ ನೀರನ್ನು ಕಾಯ್ದಿರಿಸುವಂತೆ ಜಲಮಂಡಳಿ ಮನವಿ ಮಾಡಿದೆ.ಜಲಮಂಡಳಿ ಅಧಿಕಾರಿಗಳ ಪ್ರಕಾರ, ಮುಂದಿನ ಮೂರು ತಿಂಗಳಲ್ಲಿ ಉತ್ತಮ ಮಳೆಯಾದರೆ ಆತಂಕ ಕಡಿಮೆಯಾಗಲಿದೆ. ಆದರೆ ಮಳೆ ಕೊರತೆ ಮುಂದುವರಿದರೆ ರಾಜಧಾನಿಯಲ್ಲಿ ನೀರಿನ ನಿರ್ವಹಣೆ ದೊಡ್ಡ ಸವಾಲಾಗುವ ಸಾಧ್ಯತೆ ಇದೆ. ಹೀಗಾಗಿ ಈಗಿನಿಂದಲೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯವಾಗಿದೆ.

RELATED ARTICLES
spot_img

Latest News