Homeರಾಜ್ಯಗೃಹಲಕ್ಷ್ಮೀ, ಜ್ಯೋತಿ ಫಲಾನುಭವಿಗಳ ಮನೆ ಬಾಗಿಲಿಗೆ ತೆರಳಿ ಸರ್ವೇ

ಗೃಹಲಕ್ಷ್ಮೀ, ಜ್ಯೋತಿ ಫಲಾನುಭವಿಗಳ ಮನೆ ಬಾಗಿಲಿಗೆ ತೆರಳಿ ಸರ್ವೇ

ಬೆಂಗಳೂರು, ಜೂ.20- ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮಿ ಮತ್ತು ಗೃಹಜ್ಯೋತಿ ಫಲಾನುಭವಿಗಳ ಮರುಪರಿಶೀಲನೆಗೆ ಸರ್ಕಾರ ಸಿದ್ಧತೆ ನಡೆಸಿದೆ. ಅನರ್ಹ ಫಲಾನುಭವಿಗಳನ್ನು ಗುರುತಿಸಿ ಯೋಜನೆಗಳ ದುರುಪಯೋಗಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಅಧಿಕಾರಿಗಳ ಮೂಲಕ ಮನೆ-ಮನೆಗೆ ತೆರಳಿ ಕೆವೈಸಿ ಹಾಗೂ ಸರ್ವೇ ನಡೆಸಲು ಸರ್ಕಾರ ತೀರ್ಮಾನಿಸಿದೆ.
ಹೊಸ ಅರ್ಜಿಗಳನ್ನು ಆಹ್ವಾನಿಸುವ ಬದಲಿಗೆ ಮರುಪರಿಶೀಲನೆ ಎಂಬ ಹೆಸರಿನಲ್ಲಿ ಪ್ರಕ್ರಿಯೆ ನಡೆಸಲು ಅಧಿಕಾರಿಗಳು ಮಾದರಿ ಅರ್ಜಿಯನ್ನು ಸಿದ್ಧಪಡಿಸಿದ್ದು, ಅದನ್ನು ಇಂದು ನಡೆದ ಗ್ಯಾರಂಟಿ ಯೋಜನೆಗಳ ಪರಿಶೀಲನಾ ಸಭೆಯಲ್ಲಿ ಮುಖ್ಯಮಂತ್ರಿ ಹಾಗೂ ಸಚಿವರಿಗೆ ಪ್ರದರ್ಶಿಸಿದರು. ಈ ಕುರಿತು ಅಂತಿಮ ತೀರ್ಮಾನ ಸಚಿವ ಸಂಪುಟ ಸಭೆಯಲ್ಲಿ ಕೈಗೊಳ್ಳುವ ಸಾಧ್ಯತೆ ಇದೆ.

ಮರುಪರಿಶೀಲನೆ ವೇಳೆ ಆಧಾರ್‌ ಜೊತೆಗೆ ಮತದಾರರ ಗುರುತಿನ ಚೀಟಿ ಸಂಖ್ಯೆ ಮತ್ತು ಪಡಿತರ ಚೀಟಿ ವಿವರಗಳನ್ನು ಕಡ್ಡಾಯವಾಗಿ ಪಡೆಯಲಾಗುತ್ತದೆ. ಪ್ರತಿಯೊಬ್ಬ ಫಲಾನುಭವಿಯ ಮನೆಗೆ ತೆರಳಿ ದಾಖಲೆ ಪರಿಶೀಲನೆ, ಸ್ಥಳ ಪರಿಶೀಲನೆ ಮತ್ತು ಕೆವೈಸಿ ನಡೆಸಿ ವರದಿ ಸಿದ್ಧಪಡಿಸಲಾಗುತ್ತದೆ.

ದುರುಪಯೋಗಕ್ಕೆ ಬ್ರೇಕ್‌: ಹೊರ ರಾಜ್ಯದವರು, ಆರ್ಥಿಕವಾಗಿ ಸಬಲರು, ಅಧಿಕಾರಿಗಳು, ವ್ಯಾಪಾರಿಗಳು ಸೇರಿದಂತೆ ಅನರ್ಹರು ಯೋಜನೆಗಳ ಲಾಭ ಪಡೆಯುತ್ತಿರುವ ಆರೋಪಗಳ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಸರ್ಕಾರ ಮುಂದಾಗಿದೆ. ಮೃತ ಫಲಾನುಭವಿಗಳ ಖಾತೆಗಳಿಗೆ ಹಣ ಜಮೆಯಾಗುತ್ತಿರುವುದು, ಒಂದೇ ಖಾತೆಗೆ ಹಲವು ಫಲಾನುಭವಿಗಳ ಹಣ ವರ್ಗಾವಣೆಯಾಗಿರುವುದು ಹಾಗೂ ಒಬ್ಬರೇ ಹಲವು ಖಾತೆಗಳನ್ನು ನೋಂದಾಯಿಸಿರುವುದು ಆಡಿಟರ್‌ ಜನರಲ್‌ ವರದಿಯಲ್ಲಿ ಉಲ್ಲೇಖವಾಗಿರುವುದರಿಂದ ಸರ್ಕಾರ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಒಬ್ಬ ಅರ್ಹ ಫಲಾನುಭವಿಗೂ ತೊಂದರೆಯಾಗಬಾರದು. ಅನರ್ಹರನ್ನು ಮಾತ್ರ ಗುರುತಿಸಿ ಯೋಜನೆಯ ದುರುಪಯೋಗ ತಡೆಯಬೇಕು ಎಂದು ಅಧಿಕಾರಿಗಳಿಗೆ ಸಿಎಂ ಸೂಚಿಸಿದ್ದಾರೆ.ಬ್ಯಾಂಕ್‌ ಸಾಲದ ಖಾತೆಗೆ ಗೃಹಲಕ್ಷ್ಮಿ ಹಣ ಜಮೆಯಾಗುತ್ತಿದ್ದ ಕಾರಣ ಖಾತೆ ಬದಲಾಯಿಸಿಕೊಂಡಿರುವ ಮಹಿಳೆಯರಿಗೂ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಲಾಗಿದೆ.


ವಾಯ್‌್ಸ ಮೆಸೇಜ್‌ ವ್ಯವಸ್ಥೆ; ಗೃಹಲಕ್ಷ್ಮಿ ಹಣ ಖಾತೆಗೆ ಜಮೆಯಾದ ಕೂಡಲೇ ಫಲಾನುಭವಿಗಳ ಮೊಬೈಲ್‌ಗೆ ವಾಯ್‌್ಸ ಮೆಸೇಜ್‌ ಮೂಲಕ ಮಾಹಿತಿ ತಲುಪಿಸುವ ವ್ಯವಸ್ಥೆ ಜಾರಿಗೊಳಿಸುವ ಬಗ್ಗೆಯೂ ಚರ್ಚೆ ನಡೆಯಿತು. ಗೃಹಜ್ಯೋತಿ ಯೋಜನೆಯಡಿ 1.65 ಕೋಟಿ ಫಲಾನುಭವಿಗಳಿಗೆ ಲಾಭ.ಹೊರ ರಾಜ್ಯದವರು ಗೃಹಜ್ಯೋತಿ ಸೌಲಭ್ಯ ಪಡೆಯುತ್ತಿರುವ ಕುರಿತು ಮಾಹಿತಿ ಸಂಗ್ರಹಿಸಲು ಸೂಚನೆ.ಮತದಾರರ ಪಟ್ಟಿಯಲ್ಲಿರುವ ಅರ್ಹರೇ ಸರ್ಕಾರದ ಯೋಜನೆಗಳ ಫಲಾನುಭವಿಗಳಾಗುವಂತೆ ಪರಿಶೀಲನೆ.ಅನ್ನಭಾಗ್ಯ ಯೋಜನೆಯಡಿ ಇದುವರೆಗೆ 11,561.05 ಕೋಟಿ ಡಿಬಿಟಿ ಮೂಲಕ ವರ್ಗಾವಣೆ.
ಅನ್ನಭಾಗ್ಯ ಅಕ್ಕಿಯ ಕಾಳಸಂತೆ ತಡೆಯಲು ಕಟ್ಟುನಿಟ್ಟಿನ ಕ್ರಮಕ್ಕೆ ಸೂಚನೆ; ಸ್ವಯಂಪ್ರೇರಿತವಾಗಿ ಗ್ಯಾರಂಟಿ ಯೋಜನೆ ತ್ಯಜಿಸುವ ಆರ್ಥಿಕವಾಗಿ ಸಬಲ ಫಲಾನುಭವಿಗಳನ್ನು ಪ್ರೋತ್ಸಾಹಿಸುವ ಕುರಿತು ಚರ್ಚೆ.ಗ್ಯಾರಂಟಿ ಯೋಜನೆಗಳ ದುರುಪಯೋಗ ತಡೆದು ನಿಜವಾದ ಅರ್ಹರಿಗೆ ಮಾತ್ರ ಸೌಲಭ್ಯ ತಲುಪಿಸುವ ಉದ್ದೇಶದಿಂದ ಸರ್ಕಾರ ರಾಜ್ಯವ್ಯಾಪಿ ಮರುಪರಿಶೀಲನೆಗೆ ಮುಂದಾಗಿದೆ.

RELATED ARTICLES
spot_img

Latest News