ವಾಷಿಂಗ್ಟನ್, ಜೂ.20-ಇರಾನ್‌ನೊಂದಿಗೆ ನಡೆಯುತ್ತಿರುವ ಮಾತುಕತೆ ಒಪ್ಪಂದವು 60 ದಿನಗಳೊಳಗೆ ಅಂತಿಮಗೊಳ್ಳದಿದ್ದರೆ, ಹೋರ್ಮುಜ್ ಜಲಸಂಧಿಯಲ್ಲಿ ಸಂಚರಿಸುವ ಹಡಗುಗಳ ಮೇಲೆ ಅಮೆರಿಕವೇ ಶುಲ್ಕ (ಟೋಲ್) ವಿಧಿಸಬಹುದು ಎಂದು ಅಮೆರಿಕ ಅಧ್ಯಕ್ಷ ಟಂಪ್‌ಎಚ್ಚರಿಕೆ ನೀಡಿದ್ದಾರೆ. ವಾರಾಂತ್ಯವನ್ನು ಕ್ಯಾಂಪ್ ಡೇವಿ ನಲ್ಲಿ ಕಳೆಯುತ್ತಿದ್ದ ಟ್ರಂಪ್, ಇರಾನ್‌ನೊಂದಿಗೆ ಯುದ್ಧ ಅಂತ್ಯಗೊಳಿಸಲು ಮಾಡಿಕೊಂಡಿರುವ ಪ್ರಾಥಮಿಕ ಒಪ್ಪಂದದ ಪ್ರಕಾರ ಮಹತ್ವದ ಹೋರ್ಮುಜ್ ಜಲಸಂಧಿಯಲ್ಲಿ 60 ದಿನಗಳ ಕಾಲ ಯಾವುದೇ ಶುಲ್ಕವಿಲ್ಲದೆ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದ್ದಾರೆ.
ಆದರೆ, 60 ದಿನಗಳ ಅವಧಿ ಮುಗಿದ ಬಳಿಕ ಅಂತಿಮ ಒಪ್ಪಂದ ಪೂರ್ಣಗೊಳ್ಳದಿದ್ದರೆ ಪರಿಸ್ಥಿತಿ ಬದಲಾಗಬಹುದು ಎಂದು ಅವರು ಎಚ್ಚರಿಸಿದರು. ಒಪ್ಪಂದ ಪೂರ್ಣಗೊಳ್ಳದಿದ್ದರೆ, ಅಮೆರಿಕ ಸಂಯುಕ್ತ ಸಂಸ್ಥಾನವೇ ತನ್ನ ಪರವಾಗಿ ಹಾಗೂ ತನ್ನ ಹಿತಾಸಕ್ತಿಗಾಗಿ ಶುಲ್ಕ ವಿಧಿಸಬಹುದು ಎಂದು ಟ್ರಂಪ್ ಹೇಳಿದ್ದಾರೆ. ಮಧ್ಯಪ್ರಾಚ್ಯ ರಾಷ್ಟ್ರಗಳಿಗೆ ಭೂತ, ವರ್ತಮಾನ ಮತ್ತು ಭವಿಷ್ಯದಲ್ಲಿ ಭದ್ರತಾ ರಕ್ಷಕನಾಗಿ (ಗಾರ್ಡಿಯನ್ ಏಂಜೆಲ್) ಅಮೆರಿಕ ನೀಡಿರುವ ಸೇವೆಗಳ ವೆಚ್ಚ ಮರುಪಾವತಿಗಾಗಿ ಈ ಹಣವನ್ನು ಬಳಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಹೋರ್ಮುಜ್ ಜಲಸಂಧಿಯಲ್ಲಿ ಶುಲ್ಕದ ವಿಷಯವನ್ನು ಇರಾನ್‌ನೊಂದಿಗೆ ಮಾಡಿಕೊಂಡಿರುವ ತಿಳಿವಳಿಕೆ ಒಪ್ಪಂದ ಹೇಗೆ ನಿರ್ವಹಿಸಿದೆ ಎಂಬುದರ ಬಗ್ಗೆ ಟ್ರಂಪ್ ದೇಶೀಯ ಮಟ್ಟದಲ್ಲಿ ಟೀಕೆಗೆ ಗುರಿಯಾಗಿದ್ದಾರೆ.
ಏಕೆಂದರೆ ಈ ಒಪ್ಪಂದವು ಕೇವಲ 60 ದಿನಗಳವರೆಗೆ ಮಾತ್ರ ಶುಲ್ಕಮುಕ್ತ ಸಂಚಾರವನ್ನು ಖಾತರಿಪಡಿಸಿದ್ದು, ನಂತರದ ಅವಧಿಯಲ್ಲಿ ಶುಲ್ಕ ವಿಧಿಸುವ ಸಾಧ್ಯತೆಯನ್ನು ಸಂಪೂರ್ಣವಾಗಿ ತಳ್ಳಿಹಾಕಿಲ್ಲ.
ವಿಶ್ವದ ತೈಲ ಮತ್ತು ಅನಿಲ ಸಾಗಣೆಗೆ ಅತ್ಯಂತ ಪ್ರಮುಖ ಮಾರ್ಗವಾಗಿರುವ ಕುರಿತ ಈ ಹೇಳಿಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದೆ.
