ಬೆಂಗಳೂರು, ಜೂ. 23- ಹೊಸದಾಗಿ ನಿರ್ಮಿಸಿರುವ ಮನೆಗಳಿಗೆ ಸ್ವಾಧೀನ ಪ್ರಮಾಣಪತ್ರ (ಓಸಿ) ಇಲ್ಲದೆ ಶಾಶ್ವತ ವಿದ್ಯುತ್ ಸಂಪರ್ಕ ಪಡೆಯಲು ಕಾಯುತ್ತಿದ್ದ ಸಾರ್ವಜನಿಕರಿಗೆ ರಾಜ್ಯ ಸರ್ಕಾರ ಮಹತ್ವದ ಸಡಿಲಿಕೆ ನೀಡಿದೆ. ಮೇ 31, 2026ರೊಳಗೆ ಪೂರ್ಣಗೊಂಡ ವಸತಿ ಕಟ್ಟಡಗಳಿಗೆ ಒಂದು ಬಾರಿಯ ವಿಶೇಷ ವಿನಾಯಿತಿ ನೀಡಿ ಶಾಶ್ವತ ವಿದ್ಯುತ್ ಸಂಪರ್ಕ ಕಲ್ಪಿಸಲು ಸರ್ಕಾರ ಆದೇಶ ಹೊರಡಿಸಿದೆ.
ಯೋಜನೆಯ ಅನುಷ್ಠಾನಕ್ಕಾಗಿ ಇಂಧನ ಇಲಾಖೆ ರಾಜ್ಯದ ಎಲ್ಲಾ ಎಸ್ಕಾಂಗಳಿಗೆ ವಿವರವಾದ ಮಾರ್ಗಸೂಚಿಗಳನ್ನು ಜಾರಿ ಮಾಡಿದೆ.ಸರ್ಕಾರದ ಆದೇಶದಂತೆ, ಓಸಿ ಇಲ್ಲದಿದ್ದರೂ ಅರ್ಹ ಕಟ್ಟಡಗಳಿಗೆ
ಶಾಶ್ವತ ವಿದ್ಯುತ್ ಸಂಪರ್ಕ ನೀಡಬಹುದಾಗಿದೆ. ಆದರೆ ಈ ಸೌಲಭ್ಯವು 2026ರ ಮೇ 31ರೊಳಗೆ ಪೂರ್ಣಗೊಂಡಿರುವ ಕಟ್ಟಡಗಳಿಗೆ ಮಾತ್ರ ಅನ್ವಯವಾಗುತ್ತದೆ. ಆದೇಶ ಪ್ರಕಟವಾದ ದಿನಾಂಕದಿಂದ 15 ದಿನಗಳೊಳಗೆ ಅರ್ಜಿಗಳನ್ನು ಸ್ವೀಕರಿಸಿ ವಿಲೇವಾರಿ ಮಾಡಬೇಕು ಎಂದು ಎಸ್ಕಾಂಗಳಿಗೆ ಸೂಚಿಸಲಾಗಿದೆ.ಈಗಾಗಲೇ ಶಾಶ್ವತ ಸಂಪರ್ಕಕ್ಕೆ ಅರ್ಜಿ ಸಲ್ಲಿಸಿರುವವರಿಗೆಮೇ 31ರೊಳಗೆ ಕಟ್ಟಡ ಪೂರ್ಣಗೊಳಿಸಿ ಶಾಶ್ವತ ವಿದ್ಯುತ್ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸಿರುವ ಪ್ರಕರಣಗಳಲ್ಲಿ ಅರ್ಜಿ ಸಂಖ್ಯೆ ಮತ್ತು ದಿನಾಂಕವನ್ನು ಕಡ್ಡಾಯವಾಗಿ ಪರಿಶೀಲಿಸಬೇಕು.
ಕಟ್ಟಡದ ಜಿಯೋ-ಟ್ಯಾಗ್ ಫೋಟೋ, ದಿನಾಂಕ ಮತ್ತು ಸಮಯದ ಮಾಹಿತಿಯನ್ನು ಅಧಿಕಾರಿಗಳ ಸಮ್ಮುಖದಲ್ಲಿ ದಾಖಲಿಸಿ ಅಪ್ಲೋಡ್ ಮಾಡಬೇಕು.ತಾತ್ಕಾಲಿಕ ಸಂಪರ್ಕ ಪಡೆದವರಿಗೆತಾತ್ಕಾಲಿಕ ವಿದ್ಯುತ್ ಸಂಪರ್ಕದ ಆಧಾರದಲ್ಲಿ ಕಟ್ಟಡ ನಿರ್ಮಿಸಿ ಇನ್ನೂ ಶಾಶ್ವತ ಸಂಪರ್ಕಕ್ಕೆ ಅರ್ಜಿ ಸಲ್ಲಿಸದವರು ಸರ್ಕಾರದ ಆದೇಶ ಹೊರಬಿದ್ದ 15 ದಿನಗಳೊಳಗೆ ಅರ್ಜಿ ಸಲ್ಲಿಸಬೇಕು. ತಾತ್ಕಾಲಿಕ ಸಂಪರ್ಕ ಮತ್ತು ಹೊಸ ಅರ್ಜಿಯಲ್ಲಿರುವ ಮಾಲೀಕರ ಹೆಸರು ಒಂದೇ ಆಗಿರುವುದನ್ನು ಖಚಿತ ಪಡಿಸಿಕೊಳ್ಳಲಾಗುತ್ತದೆ.
ಜಿಯೋ-ಟ್ಯಾಗ್ ಫೋಟೋ ಅಪ್ಲೋಡ್ ಕಡ್ಡಾಯ ವಾಗಿದೆ. ಯಾವುದೇ ಸಂಪರ್ಕ ಪಡೆಯದ ಕಟ್ಟಡಗಳಿಗೂ ಅವಕಾಶ ನೀಡಲಾಗಿದೆ. ಮೇ 31ರೊಳಗೆ ಕಟ್ಟಡ ಪೂರ್ಣಗೊಂಡಿದ್ದರೂ ತಾತ್ಕಾಲಿಕ ಅಥವಾ ಶಾಶ್ವತ ವಿದ್ಯುತ್ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸದವರು ಉಪ ವಿಭಾಗ ಕಚೇರಿಗಳಲ್ಲಿ ಭೌತಿಕವಾಗಿ ಅರ್ಜಿ ನೋಂದಾಯಿಸಬಹುದು. ಇಂತಹ ಅರ್ಜಿದಾರರು 15 ದಿನಗಳೊಳಗೆ ಹೊಸ ಅರ್ಜಿ ಸಲ್ಲಿಸಿ ಜಿಯೋ-ಟ್ಯಾಗ್ ಫೋಟೋಗಳನ್ನು ಹಾಜರುಪಡಿಸಬೇಕು.
ಕ್ಷೇತ್ರಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಕಟ್ಟಡ ಪೂರ್ಣ ಗೊಂಡಿರುವುದನ್ನು ಖಚಿತಪಡಿಸಿಕೊಂಡ ನಂತರ ವರದಿಯನ್ನು ಸಹಾಯಕ ಅಭಿಯಂತರರಿಗೆ ಸಲ್ಲಿಸಬೇಕು. ಅರ್ಜಿ ಪರಿಶೀಲನೆ ಪೂರ್ಣಗೊಂಡ ಬಳಿಕ ಸಿಸಿಬಿ ತಂತ್ರಾಂಶದಲ್ಲಿ ಶಾಶ್ವತ ವಿದ್ಯುತ್ ಸಂಪರ್ಕಕ್ಕಾಗಿ ಅಪ್ಲೋಡ್ ಮಾಡಲಾಗುತ್ತದೆ ಎಂದು ತಿಳಿಸಿದರು.
ಯಾರಿಗೆ ಅನ್ವಯ?ವಸತಿ ಕಟ್ಟಡಗಳು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ), ಮಹಾನಗರ ಪಾಲಿಕೆ, ನಗರ ಸ್ಥಳೀಯ ಸಂಸ್ಥೆ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಟ್ಟಡಗಳು.2,400 ಚದರ ಅಡಿವರೆಗಿನ ನಿವೇಶನಗಳಲ್ಲಿ (+20% ವಿನಾಯಿತಿಯೊಂದಿಗೆ ಗರಿಷ್ಠ 2,800 ಚದರ ಅಡಿ).ಜಿ+3 ಅಥವಾ ಪಾರ್ಕಿಂಗ್ + 4 (+4) ಮಹಡಿಗಳವರೆಗಿನ ವಸತಿ ಕಟ್ಟಡಗಳು.
ಕೃಷಿ ಸಂಬಂಧಿತ ಕಟ್ಟಡಗಳು: ಗ್ರಾಮೀಣ ಪ್ರದೇಶಗಳ ರೈತರ ಮನೆ, ತೋಟದ ಮನೆ, ಕೃಷಿ ಉಪಕರಣಗಳ ಶೆಡ್, ದನದ ಕೊಟ್ಟಿಗೆ ಹಾಗೂ ರೇಷ್ಮೆ ಗೂಡಿನ ಮನೆಗಳಿಗೆ ನಿವೇಶನ ಅಥವಾ ಕಟ್ಟಡದ ವಿಸ್ತೀರ್ಣದ ಮಿತಿ ಇಲ್ಲದೆ ಓಸಿಯಿಂದ ಸಂಪೂರ್ಣ ವಿನಾಯಿತಿ ನೀಡಲಾಗಿದೆ.
ರಾಜ್ಯ ಸರ್ಕಾರದ ಈ ಕ್ರಮದಿಂದ ಓಸಿ ಸಮಸ್ಯೆಯಿಂದಾಗಿ ಶಾಶ್ವತ ವಿದ್ಯುತ್ ಸಂಪರ್ಕ ಪಡೆಯಲು ವಿಳಂಬವಾಗಿದ್ದ ಸಾವಿರಾರು ಮನೆಮಾಲೀಕರಿಗೆ ತಕ್ಷಣದ ಪರಿಹಾರ ದೊರೆಯುವ ನಿರೀಕ್ಷೆ ಮೂಡಿದೆ.
