ನವದೆಹಲಿ, ಜೂ. 25- ತನ್ನ ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಸಲು ಇರಾನ್ ಸಜ್ಜಾಗುತ್ತಿದ್ದು, ಮುಂದಿನ ತಿಂಗಳು ನಡೆಯುವ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರನ್ನು ಇರಾನ್ ಅಧ್ಯಕ್ಷರು ಆಹ್ವಾನಿಸಿದ್ದಾರೆ.
ಫೆಬ್ರವರಿ 28ರಂದು ಇಸ್ರೇಲ್ ತೆಹರಾನ್ ಮೇಲೆ ನಡೆಸಿದ ದಾಳಿಯಲ್ಲಿ ಅಸುನೀಗಿದ ಖಮೇನಿ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಇರಾನ್ ಅಧ್ಯಕ್ಷ ಮಸೂದ್ ಪೆಝೆಶ್ಕಿಯಾನ್ ಅವರು ಮೋದಿ ಅವರಿಗೆ ಅಧಿಕೃತ ಆಮಂತ್ರಣ ನೀಡಿದ್ದಾರೆ.
ನವದೆಹಲಿಯಲ್ಲಿರುವ ಇರಾನ್ ದೂತಾವಾಸದ ಮೂಲಕ ಪೆಝೆಶ್ಕಿಯಾನ್ ಅವರ ಪರವಾಗಿ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಔಪಚಾರಿಕ ಆಮಂತ್ರಣ ತಲುಪಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಎರಡು ದಿನಗಳ ಹಿಂದೆ ತೆಹರಾನ್ನಿಂದ ಈ ಆಮಂತ್ರಣ ಬಂದಿದೆ ಎಂದು ಅವು ಹೇಳಿವೆ.
ಖಮೇನಿ ಅವರ ಅಂತ್ಯಕ್ರಿಯೆಯ ವಿಧಿ ವಿಧಾನಗಳು ತೆಹರಾನ್ನಲ್ಲಿ ಜುಲೈ 4ರಂದು ಪ್ರಾರಂಭವಾಗಲಿವೆ. ಅವರ ಪಾರ್ಥಿವ ಶರೀರವನ್ನು ಜುಲೈ 9ರಂದು ಅವರ ತವರೂರು ಮಷಾದ್ನಲ್ಲಿ ಸಮಾಧಿ ಮಾಡಲಾಗುವುದು. ಈ ವಿಧಿ ವಿಧಾನ ಮಾರ್ಚ್ಗೆ ನಿಗದಿಯಾಗಿತ್ತಾದರೂ ಅಮೆರಿಕ-ಇಸ್ರೇಲ್-ಇರಾನ್ ಸಂಘರ್ಷ ಮುಂದುವರಿದ ಕಾರಣ ಮುಂದೂಡಲಾಗಿತ್ತು.
ಅಂತ್ಯಕ್ರಿಯೆಯಲ್ಲಿ ಭಾರತವನ್ನು ಯಾರು ಪ್ರತಿನಿಧಿಸುತ್ತಾರೆ ಎಂದು ತಿಳಿದು ಬಂದಿಲ್ಲ. ಈ ಕಾರ್ಯಕ್ರಮ ನಡೆಯುವ ಸಮಯದಲ್ಲೇ ಮೋದಿ ಅವರು ವಿವಿಧ ರಾಷ್ಟ್ರಗಳಿಗೆ ಭೇಟಿ ನೀಡಲಿದ್ದಾರೆ ಎಂದು ಮೂಲಗಳು ಹೇಳಿವೆ.
2024ರಲ್ಲಿ ಇರಾನ್ ಅಧ್ಯಕ್ಷ ಇಬ್ರಾಹಿಂ ಡೈಸಿ ಮತ್ತು ವಿದೇಶಾಂಗ ಸಚಿವ ಹುಸೇನ್ ಅಮೀರ್ ಅಬ್ದುಲ್ಲಾ ಹಿಯಾನ್ ಅವರು ಹೆಲಿಕಾಪ್ಟರ್ ಅಪಘಾತದಲ್ಲಿ ನಿಧನರಾದ ಬಳಿಕ ಅಂದಿನ ಉಪ ರಾಷ್ಟ್ರಪತಿ ಜಗದೀಪ್ ಧನ್ಕರ್ ಅವರು ಅಂತ್ಯ ವಿಧಿಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.
ಮೋದಿ ಅವರೊಂದಿಗೆ ಚೀನಾ, ರಷ್ಯಾ, ಕತಾರ್, ಫ್ರಾನ್್ಸ ಮತ್ತು ಪಾಕಿಸ್ತಾನದ ನಾಯಕರಿಗೂ ಪೆಝೆಶ್ಕಿಯಾನ್ ಅವರು ಆಮಂತ್ರಣ ನೀಡಿದ್ದಾರೆ. ಪಾಕಿಸ್ತಾನ ನಿಯೋಗವು ಖಮೇನಿ ಅವರ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಳ್ಳಲಿದೆ ಎಂದು ಪಾಕ್ ಪ್ರಧಾನಿ ಶಹಬಾಜ್ ಷರೀಫ್ ಅವರು ಕಳೆದ ಶುಕ್ರವಾರ ಘೋಷಿಸಿದ್ದಾರೆ.
ಈ ಆಮಂತ್ರಣವು ಅಮೆರಿಕ-ಇರಾನ್ ಕದನ ವಿರಾಮ ಒಪ್ಪಂದಕ್ಕೆ ಸಹಿ ಮಾಡಿದ ಕೆಲವು ದಿನಗಳ ಬಳಿಕ ತಲುಪಿದ್ದು ಭಾರತ-ಇರಾನ್ನ ನಾಗರಿಕ ಮತ್ತು ಕಾರ್ಯತಂತ್ರಾತಕ ಸಂಬಂಧಗಳ ಹೆಗ್ಗುರುತಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಸಂಘರ್ಷದ ವೇಳೆ ಭಾರತ ಮತ್ತು ಇರಾನ್ ದ್ವಿಪಕ್ಷೀಯ ಸಂಬಂಧಗಳನ್ನು ಮುಕ್ತವಾಗಿರಿಸಿದ್ದವು. ಭಾರತವು ತಟಸ್ಥ ನಿಲುವನ್ನು ತಳೆದಿದ್ದರೂ ಇರಾನ್ನ ವಿದೇಶಾಂಗ ಸಚಿವ ಸೈಯದ್ ಅಬ್ಬಾಸ್ ಅರಾಘ್ಚಿ ಅವರು ಬ್ರಿಕ್್ಸ ಸಭೆಯಲ್ಲಿ ಭಾಗವಹಿಸುವ ಸಲುವಾಗಿ ಭಾರತಕ್ಕೆ ಭೇಟಿ ನೀಡಿದ್ದರು.
