Homeರಾಷ್ಟ್ರೀಯಅಯೋಧ್ಯೆ ರಾಮ ಮಂದಿರ ದೇಣಿಗೆ ದುರ್ಬಳಕೆ ಪ್ರಕರಣದಲ್ಲಿ 8 ಮಂದಿ ಅರೆಸ್ಟ್

ಅಯೋಧ್ಯೆ ರಾಮ ಮಂದಿರ ದೇಣಿಗೆ ದುರ್ಬಳಕೆ ಪ್ರಕರಣದಲ್ಲಿ 8 ಮಂದಿ ಅರೆಸ್ಟ್

8 arrested hours after FIR filed in alleged Ram temple donation theft

ಲಕ್ನೋ, ಜೂ.26- ಅಯೋಧ್ಯೆಯ ರಾಮ ಮಂದಿರಕ್ಕೆ ಭಕ್ತರು ನೀಡಿದ ದೇಣಿಗೆ ಹಣದ ದುರ್ಬಳಕೆ ಹಾಗೂ ಕಳ್ಳತನಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ತನಿಖಾ ತಂಡ ನೀಡಿದ ಪ್ರಾಥಮಿಕ ವರದಿಯ ಶಿಫಾರಸಿನ ಮೇರೆಗೆ ಪ್ರಕರಣದಲ್ಲಿ ನೇರವಾಗಿ ಹೆಸರಿಸಲಾದ 8 ಪ್ರಮುಖ ಆರೋಪಿಗಳನ್ನು ಉತ್ತರ ಪ್ರದೇಶದ ಪೊಲೀಸರು ಬಂಧಿಸಿದ್ದಾರೆ. ಅದರಲ್ಲಿ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್‌ ರಾಯ್‌ ಆಪ್ತ ಸಹಾಯಕನೂ ಕೂಡ ಇದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಪ್ರಕರಣದ ತನಿಖೆ ವೇಳೆ 8 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಈ ವೇಳೆ ಕೆಲವು ಮೊತ್ತದ ಹಣವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಬಂಧಿತರಾಗಿರುವ ಎಂಟು ಆರೋಪಿಗಳಲ್ಲಿ ರಾಮ ಮಂದಿರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್‌ ರಾಯ್‌ ಅವರ ಆಪ್ತ ಸಹಾಯಕ ರಾಮಶಂಕರ್‌ ಯಾದವ್‌ ಅಲಿಯಾಸ್‌‍ ಟಿನ್ನು ಯಾದವ್‌ ಸೇರಿರುವುದು ಇಡೀ ದೇಶದಲ್ಲಿ ಸಂಚಲನ ಮೂಡಿಸಿದೆ.

ಇವನೊಂದಿಗೆ ಅನುಕಲ್ಪ್ ಮಿಶ್ರಾ, ಅವಿನಾಶ್‌ ಶುಕ್ಲಾ, ಕರುಣೇಶ್‌ ಪಾಂಡೆ, ಲವ್‌ ಕುಶ್‌ ಮಿಶ್ರಾ, ರಾಮ ಶಂಕರ್‌ ಮಿಶ್ರಾ ಮತ್ತು ಸುಭಾಷ್‌ ಶ್ರೀವಾಸ್ತವ ಎಂಬುವವರನ್ನು ಬಂಧಿಸಲಾಗಿದೆ. ಶ್ರೀ ರಾಮ ಜನಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ಸದಸ್ಯ ಕೃಷ್ಣ ಮೋಹನ್‌ ಅವರು ನೀಡಿದ ದೂರಿನ ಆಧಾರದ ಮೇಲೆ ಅಯೋಧ್ಯೆಯ ರಾಮ ಜನಭೂಮಿ ಪೊಲೀಸ್‌‍ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್‌ 306, 316(5), 317(4), 317(5), 61 ಹಾಗೂ 3(5) ಅಡಿಯಲ್ಲಿ ಆರೋಪಗಳನ್ನು ದಾಖಲಿಸಲಾಗಿದೆ. ತನಿಖೆಯಲ್ಲಿ ದೇಣಿಗೆ ಹಣದ ಸಂಗ್ರಹಣೆ, ಲೆಕ್ಕಪತ್ರ ನಿರ್ವಹಣೆ ಮತ್ತು ಹಣ ವರ್ಗಾವಣೆಯ ಪ್ರಕ್ರಿಯೆಯಲ್ಲಿ ಹಲವು ಅಕ್ರಮಗಳು ನಡೆದಿರುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆ ತನಿಖಾ ತಂಡ ತನ್ನ ಪ್ರಾಥಮಿಕ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿತ್ತು. ವರದಿಯಲ್ಲಿ ಕೆಲ ವ್ಯಕ್ತಿಗಳ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸುವಂತೆ ಶಿಫಾರಸು ಮಾಡಲಾಗಿತ್ತು.

ಎಫ್‌ಐಆರ್‌ನಲ್ಲಿ ಹೆಸರು ಉಲ್ಲೇಖಗೊಂಡಿರುವ ಪ್ರಮುಖ ಆರೋಪಿಗಳಲ್ಲಿ ಅವಿನಾಶ್‌ ಶುಕ್ಲಾ, ಅನುಕಲ್‌್ಪ ಮಿಶ್ರಾ, ಮನೀಶ್‌ ಯಾದವ್‌, ರಾಮಶಂಕರ್‌ ಮಿಶ್ರಾ, ರಾಮಶಂಕರ್‌ ಯಾದವ್‌ ಅಲಿಯಾಸ್‌‍ ಟಿನ್ನು, ಸುಭಾಷ್‌ ಚಂದ್ರ, ಕರುಣೇಶ್‌ ಪಾಂಡೆ ಸೇರಿದಂತೆ ಒಟ್ಟು 8 ಮಂದಿ ಸೇರಿದ್ದಾರೆ. ಜೊತೆಗೆ, ಪ್ರಕರಣದಲ್ಲಿ ಭಾಗಿಯಾಗಿರುವ ಶಂಕೆಯಿರುವ ಹಲವಾರು ಅಪರಿಚಿತ ವ್ಯಕ್ತಿಗಳ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ.

ಬಂಧಿತ ಆರೋಪಿಗಳೆಲ್ಲರೂ ದೇವಸ್ಥಾನದ ಕಾಣಿಕೆ ಮತ್ತು ನಗದು ಹಣವನ್ನು ಎಣಿಕೆ ಮಾಡುವ ಪ್ರಕ್ರಿಯೆಯ ಜವಾಬ್ದಾರಿ ಹೊತ್ತಿದ್ದ ತಂಡದಲ್ಲಿದ್ದರು. ದೇವಸ್ಥಾನದ ಒಳಗಿನ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದ ಬಲವಾದ ಸಾಕ್ಷ್ಯಗಳು ಮತ್ತು ವಿಧಿವಿಜ್ಞಾನ ಪುರಾವೆಗಳ ಆಧಾರದ ಮೇಲೆ ಈ ಎಂಟು ಜನರ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಕಠಿಣ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್‌ ದಾಖಲಾದ ಕೇವಲ ಒಂದು ದಿನದಲ್ಲೇ ಪೊಲೀಸರು ಈ ಬಂಧನದ ಕ್ರಮ ಕೈಗೊಂಡಿದ್ದಾರೆ.

ಮುಂದಿನ ನಡೆ :
ಮುಂಬರುವ ದಿನಗಳಲ್ಲಿ ಈ ಹಗರಣಕ್ಕೆ ಸಂಬಂಧಿಸಿದಂತೆ ಇನ್ನೂ ಹಲವು ಅಧಿಕಾರಿಗಳು ಮತ್ತು ನೌಕರರ ಬಂಧನವಾಗುವ ಸಾಧ್ಯತೆಯಿದೆ. ಆದರೆ, ಪ್ರಸ್ತುತ ಚಂಪತ್‌ ರಾಯ್‌ ಅಥವಾ ಟ್ರಸ್ಟ್‌ನ ಮತ್ತೊಬ್ಬ ಸದಸ್ಯ ಅನಿಲ್‌ ಮಿಶ್ರಾ ವಿರುದ್ಧ ಇದುವರೆಗೆ ಯಾವುದೇ ಅಧಿಕೃತ ಎಫ್‌ಐಆರ್‌ ದಾಖಲಾಗಿಲ್ಲ.

ಈ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಉತ್ತರ ಪ್ರದೇಶದ ಹಣಕಾಸು ಸಚಿವ ಸುರೇಶ್‌ ಖನ್ನಾ, ಇದು ಸಿಎಂ ಯೋಗಿ ಆದಿತ್ಯನಾಥ್‌ ಅವರ ಸರ್ಕಾರ. ಮೊದಲಿನಿಂದಲೂ ನಮ ಸರ್ಕಾರ ಅಪರಾಧಗಳ ವಿರುದ್ಧ ಶೂನ್ಯ ಸಹಿಷ್ಣುತೆ ನೀತಿಯನ್ನು ಹೊಂದಿದೆ. ರಾಮ ಮಂದಿರದ ಪವಿತ್ರ ದೇಣಿಗೆಯಲ್ಲಿ ತಪ್ಪು ಮಾಡಿರುವ ಯಾವುದೇ ಅಪರಾಧಿಯನ್ನು ಬಿಡುವ ಪ್ರಶ್ನೆಯೇ ಇಲ್ಲ, ಅವರಿಗೆ ಕಠಿಣ ಶಿಕ್ಷೆ ಖಂಡಿತ ಎಂದು ಭರವಸೆ ನೀಡಿದ್ದಾರೆ.

ಸರ್ಕಾರದ ವಿರುದ್ಧ ಮುಗಿಬಿದ್ದ ವಿರೋಧ ಪಕ್ಷಗಳು :
ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್‌ ಯಾದವ್‌ ಅವರು ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ದೇವಸ್ಥಾನದಲ್ಲಿ ದೊಡ್ಡ ಮಟ್ಟದ ಕಳ್ಳತನ ನಡೆದಿದೆ, ಈಗ ಕೇವಲ ಸಣ್ಣ ನೌಕರರನ್ನು ಬಂಧಿಸಿ ಅಸಲಿ ಸಾಕ್ಷ್ಯಗಳನ್ನು ನಾಶಪಡಿಸಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.

ರಾಜ್ಯ ಕಾಂಗ್ರೆಸ್‌‍ ಮುಖ್ಯಸ್ಥ ಅಜಯ್‌ ರೈ ಮಾತನಾಡಿ, ಸರ್ಕಾರ ಕೇವಲ ಹೆಸರಿಗಷ್ಟೇ ಔಪಚಾರಿಕವಾಗಿ ಎಫ್‌ಐಆರ್‌ ದಾಖಲಿಸಿ ಕಣ್ಣೊರೆಸುವ ತಂತ್ರ ಮಾಡುತ್ತಿದೆ ಎಂದಿದ್ದಾರೆ. ಅರವಿಂದ್‌ ಕೇಜ್ರಿವಾಲ್‌ ನೇತೃತ್ವದ ಆಪ್‌ ಪಕ್ಷವು, ರಾಮ ಮಂದಿರದ ದೇಣಿಗೆ ಕಳ್ಳತನವು ಕೋಟ್ಯಂತರ ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡಿದೆ, ಈ ವಿಷಯದಲ್ಲಿ ಬಿಜೆಪಿ ಸಂಪೂರ್ಣ ಅಸಹಾಯಕವಾಗಿದೆ ಎಂದು ಟೀಕಿಸಿದೆ.

ಟ್ರಸ್ಟ್‌ ಸದಸ್ಯರಿಂದ ದೂರು ದಾಖಲು :
ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಸದಸ್ಯ ಕೃಷ್ಣ ಮೋಹನ್‌ ಎಂಬುವವರು ನೀಡಿದ ದೂರಿನ ಮೇರೆಗೆ ಅಯೋಧ್ಯೆಯ ರಾಮ ಜನಭೂಮಿ ಪೊಲೀಸ್‌‍ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಉತ್ತರ ಪ್ರದೇಶ ಸರ್ಕಾರದ ನಿರ್ದೇಶನದಂತೆ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್‌‍) ಸೆಕ್ಷನ್‌ 306, 316(5), 317(4), 317(5), 61 ಮತ್ತು 3(5) ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಆರೋಪಿಗಳ ವಿರುದ್ಧ ಉದ್ದೇಶಪೂರ್ವಕ ಕಳ್ಳತನ, ಸತತ ಕಳ್ಳತನದಲ್ಲಿ ತೊಡಗಿರುವುದು, ಕಳ್ಳತನಕ್ಕೆ ಪ್ರಚೋದನೆ ನೀಡುವುದು, ಕ್ರಿಮಿನಲ್‌ ಪಿತೂರಿ ಹಾಗೂ ಸಂಸ್ಥೆಯ ಉದ್ಯೋಗಿಯಾಗಿ ನಂಬಿಕೆ ದ್ರೋಹ ಎಸಗಿರುವ ಗಂಭೀರ ಆರೋಪಗಳನ್ನು ಹೊರಿಸಲಾಗಿದೆ.

ಪ್ರಕರಣದ ಹಿನ್ನೆಲೆ ಏನು? :
ರಾಮಮಂದಿರಕ್ಕೆ ಬಂದ ಕೋಟ್ಯಂತರ ರೂಪಾಯಿ ದೇಣಿಗೆ ನಾಪತ್ತೆಯಾಗಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಜೂನ್‌ 7 ರಂದು ಅಖಿಲೇಶ್‌ ಯಾದವ್‌ ನ್ಯಾಯಾಲಯದ ಮಧ್ಯಸ್ಥಿಕೆಗೆ ಒತ್ತಾಯಿಸಿದ್ದರು. ಇದಾದ ನಂತರ, ಶ್ರೀರಾಮ ಜನಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ನೀಡಿದ ಮನವಿಯ ಮೇರೆಗೆ ಜೂನ್‌ 13 ರಂದು ಉತ್ತರ ಪ್ರದೇಶ ಸರ್ಕಾರವು ಎಸ್‌‍ಐಟಿ ರಚಿಸಿತ್ತು. ಈ ನಡುವೆ, ವಿಶ್ವ ಹಿಂದೂ ಪರಿಷತ್‌ (ವಿಎಚ್‌ಪಿ) ಅಧ್ಯಕ್ಷ ಅಲೋಕ್‌ ಕುಮಾರ್‌ ಅವರು ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್‌‍ ವಿರುದ್ಧ ವಾಗ್ದಾಳಿ ನಡೆಸಿದ್ದು, 2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ವಿವಾದದಿಂದ ರಾಜಕೀಯ ಲಾಭ ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

RELATED ARTICLES

Latest News