ಬೆಂಗಳೂರು, ಜೂ.26- ಬಿಡದಿ ಟೌನ್‌ಶಿಪ್ ವಿಚಾರದಲ್ಲಿ ಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಹೋರಾಟ ಮಾಡುತ್ತಿಲ್ಲ. ಯೋಜನೆ ವಿರೋಧಿ ಸುತ್ತಿರುವ ರೈತರಿಗೆ ಬೆಂಬಲ ನೀಡಲಾಗುತ್ತಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಳೆ ರೈತರು ಪ್ರತಿಭಟನೆ ಮಾಡುತ್ತಿರುವ ಭೈರಮಂಗಲಕ್ಕೆ ಹೋಗುತ್ತಿದ್ದೇನೆ. ಮಧ್ಯಾಹ್ನದವರೆಗೂ ಮುಖ್ಯಮಂತ್ರಿಯವರಿಗಾಗಿ ಅಲ್ಲೇ ಕಾಯುತ್ತೇನೆ. ರೈತರೊಂದಿಗೆ ಚರ್ಚೆ ಮಾಡಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಟೌನ್‌ಶಿಪ್ ವಿಚಾರದಲ್ಲಿ ರಾಜಕೀಯ ಮಾಡುತ್ತಿಲ್ಲ. ರಾಜಕೀಯ ಉದ್ದೇಶಕ್ಕಾಗಿ ಅಭಿವೃದ್ಧಿ ತಡೆಯುವ ಉದ್ದೇಶವೂ ನನಗಿಲ್ಲ ಎಂದು ಸ್ಪಷ್ಟಪಡಿಸಿದರು.ಮುಖ್ಯಮಂತ್ರಿಯವರು ಇಂದು ವಿಧಾನಸೌಧದಲ್ಲಿ ಚರ್ಚೆಗೆ ಬನ್ನಿ ಎಂದು ಆಹ್ವಾನಿಸಿದ್ದರು. ಆದರೆ ಪೂರ್ಯನಿಯೋಜಿತ ಕಾರ್ಯಕ್ರಮದಿಂದಾಗಿ ಇಂದು ಸಾಧ್ಯವಾಗುವುದಿಲ್ಲ. ನಾಳೆ ಯೋಜನೆಯಿಂದ ಬಾಧಿತರಾಗಿರುವ ರೈತರ ಸಮುಖದಲ್ಲೇ ಚರ್ಚೆ ಮಾಡೋಣ ಎಂದು ಪತ್ರ ಬರೆದಿದ್ದೆ. ಆ ಪತ್ರಕ್ಕೆ ಯಾವುದೇ ಪ್ರತಿಕ್ರಿಯೆ ದೊರೆಯದ ಹಿನ್ನೆಲೆಯಲ್ಲಿ ನಿನ್ನೆ ಮತ್ತೊಂದು ಪತ್ರವನ್ನು ಬರೆಯಲಾಗಿದೆ ಎಂದರು.
ನಾಳೆ ಬಿಡದಿ ಟೌನ್‌ಶಿಪ್ ವಿರೋಧಿಸುತ್ತಿರುವ ರೈತರೊಂದಿಗೆ ಚರ್ಚೆ ಮಾಡುತ್ತೇನೆ. ಆ ಸಂದರ್ಭದಲ್ಲಿ ಮುಖ್ಯಮಂತ್ರಿಯೂ ಬಂದರೆ ಒಳ್ಳೆಯದು. ಟೌನ್‌ಶಿಪ್ ವಿರೋಧಿಸಿ 470 ಕ್ಕೂ ಹೆಚ್ಚು ದಿನಗಳಿಂದಲೂ ಪ್ರತಿಭಟನೆ ನಡೆಸುತ್ತಿರುವ ರೈತರ ಎದುರಿಗೆ ಕೆಲವು ರೈತರು ಭೂಮಿ ಕೊಡಲು ಸಿದ್ಧ ಎಂದು ಪ್ರತಿಯಾಗಿ ಪ್ರತಿಭಟಿಸುತ್ತಿದ್ದಾರೆ ಎಂದು ಹೇಳಿದರು.
ರೈತರು ಭೂಸ್ವಾಧೀನ ಬೇಡ ಎಂದು ಹೇಳುತ್ತಿದ್ದಾರೆ. ಅವರ ಅಹವಾಲಿಗೆ ಸ್ಪಂದಿಸಿ ಬೆಂಬಲ ನೀಡಿದ್ದೇನೆ. ಈ ವಿಚಾರದಲ್ಲಿ ಯಾವುದೇ ಪ್ರತಿಷ್ಠೆ ಇಲ್ಲ. ರೈತರು ಒಪ್ಪಿದರೆ ನಮ ತಕರಾರು ಏನೂ ಇಲ್ಲ. ಧಾರಾಳವಾಗಿ ಯೋಜನೆ ಅನುಷ್ಠಾನ ಮಾಡಬಹುದು. ರೈತರನ್ನು ಹೆದರಿಸಿ, ಬೆದರಿಸಿ ಭೂಸ್ವಾಧೀನ ಮಾಡಬಾರದು. ಪ್ರೀತಿಯಿಂದ ಅವರ ಮನ ಗೆಲ್ಲಬೇಕು. ಬಹುತೇಕ ರೈತರ ವಿರೋಧವಿದ್ದಾಗ ಹಠ ಹಿಡಿದು ಏಕೆ ಟೌನ್‌ಶಿಪ್ ಅನುಷ್ಠಾನ ಮಾಡಬೇಕೆಂದು ಪ್ರಶ್ನಿಸಿದರು.
ಭೈರಮಂಗಲದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗುವುದಾದರೆ ರೈತರನ್ನೇ ವಿಧಾನಸೌಧಕ್ಕೆ ಕರೆಸಿಕೊಳ್ಳಲಿ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಅವರ ಹೇಳಿಕೆಗೆ ತಿರುಗೇಟು ನೀಡಿದರು.
2006-07 ರಲ್ಲಿ ನಾನು ಮುಖ್ಯಮಂತ್ರಿಯಾಗಿದ್ದಾಗ ಸಿಎಂ ಗೃಹಕಚೇರಿ ಕೃಷ್ಣಾಗೆ 500 ರಿಂದ 600 ರೈತರನ್ನು ಕರೆಸಿಕೊಂಡು 3 ಸಭೆಗಳನ್ನು ಮಾಡಿದ್ದೇನೆ. ಆ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ಟೌನ್‌ಶಿಪ್ ವಿರೋಧಿಸಿ ವಿಧಾನಸಭೆಯಲ್ಲಿ ಏನೇನು ಮಾಡಿದ್ದಾರೋ ಎಂಬ ದಾಖಲೆಗಳಿವೆ. ಅದನ್ನೊಮೆ ಮುಖ್ಯಮಂತ್ರಿ ನೋಡಲಿ ಎಂದು ಕುಮಾರಸ್ವಾಮಿ ತಿಳಿಸಿದರು.
ಕಾಯ್ದೆಗೆ ವಿರುದ್ಧ :
2013 ರಲ್ಲಿ ಯುಪಿಎ ಸರ್ಕಾರ ಜಾರಿಗೆ ತಂದಿರುವ ಕಾನೂನು ಮೀರಿ ಭೂಸ್ವಾಧೀನ ಮಾಡಿಕೊಳ್ಳಲಾಗುತ್ತಿದೆ. ಅದನ್ನು ರೈತರು ವಿರೋಧಿಸುತ್ತಿದ್ದು, ಅವರ ಹೋರಾಟಕ್ಕೆ ಬೆಂಬಲವಾಗಿ ನ್ಯಾಯಾಲಯದ ಮುಂದೆ ಹೋಗುವುದು ಅನಿವಾರ್ಯವಾಗುತ್ತದೆ. ರೈತರು ಗಲಾಟೆ ಮಾಡುತ್ತಾರೆಯೇ? ನಾಳೆ ನಿಷೇಧಾಜ್ಞೆ ಹೇರಲು ಸರ್ಕಾರ ಮುಂದಾಗಿದೆ ಎಂದು ಆರೋಪಿಸಿದರು.
20 ಸಾವಿರ ಕೋಟಿ ರೂ. ಯೋಜನೆಯಲ್ಲಿ ಇದುವರೆಗೆ 19 ಕೋಟಿ ರೂ. ಮಾತ್ರ ಪರಿಹಾರ ನೀಡಿದ್ದಾರೆ. ಅದೂ ಸಣ್ಣ ಪ್ರಮಾಣದಲ್ಲಿ. ಬೆಳೆ ಬೆಳೆಯಲಾಗದ ಭೂಮಿಯನ್ನು ರೈತರು ಕೊಟ್ಟಿದ್ದಾರೆ. ಆದರೆ ಫಲವತ್ತಾದ ಭೂಸ್ವಾಧೀನಕ್ಕೆ ವಿರೋಧಿಸುತ್ತಿದ್ದಾರೆ. ಬೆಂಗಳೂರು ನಗರದ ಸಮಸ್ಯೆಗಳನ್ನು ಮೊದಲು ಸರಿಪಡಿಸಲಿ. ಆನಂತರ ಮತ್ತೊಂದು ಉಪನಗರ ನಿರ್ಮಾಣದ ಕಡೆಗೆ ಗಮನ ಹರಿಸಲಿ ಎಂದರು.
ಎಚ್‌ಎಂಟಿ ವಾಚ್ :
ನಾನು ಕೈಯಲ್ಲಿ ಕಟ್ಟಿರುವುದು ಯಾವ ವಾಚ್ ಎಂಬುದನ್ನು ನೀವೇ ನೋಡಿ. ಇದು ಅಂಬೇಡ್ಕರ್‌ರವರ ಭಾವಚಿತ್ರವಿರುವ ಎಚ್‌ಎಂಟಿ ವಾಚ್. ದುಬಾರಿ ಬೆಲೆಯ ವಾಚ್ ಆಗಿದ್ದರೆ ಅಥವಾ ಹತ್ತಾರು ವಾಚ್‌ಗಳು ನನ್ನ ಬಳಿ ಇದ್ದರೆ ಎಸ್‌ಐಟಿ ಮೂಲಕ ಚೆಕ್ ಮಾಡಿಸಿ, ವಶಪಡಿಸಿಕೊಳ್ಳಲಿ ಎಂದು ಅವರು ಇದೇ ಸಂದರ್ಭದಲ್ಲಿ ವ್ಯಂಗ್ಯವಾಡಿದರು.
