Homeರಾಷ್ಟ್ರೀಯದೇಣಿಗೆ ಹಗರಣ : ರಾಮ ಮಂದಿರ ಟ್ರಸ್ಟ್‌ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ರಾಜೀನಾಮೆ

ದೇಣಿಗೆ ಹಗರಣ : ರಾಮ ಮಂದಿರ ಟ್ರಸ್ಟ್‌ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ರಾಜೀನಾಮೆ

Ram Temple Trust Key Official Champat Rai Steps Down Amid Donation Row

ಅಯೋಧ್ಯಾ, ಜೂ. 26: ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿಯಾಗಿದ್ದ ಚಂಪತ್ ರೈ ಅವರು ರಾಮ ಮಂದಿರಕ್ಕೆ ಭಕ್ತರು ನೀಡಿದ ದೇಣಿಗೆಯ ದುರ್ಬಳಕೆ ಮತ್ತು ಕಳವು ಆರೋಪಗಳ ತನಿಖೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ನೈತಿಕ ಹೊಣೆ ಹೊತ್ತು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಅವರೊಂದಿಗೆ ಟ್ರಸ್ಟ್‌ನ ಮತ್ತೊಬ್ಬ ಸದಸ್ಯ ಅನಿಲ್ ಮಿಶ್ರಾ ಕೂಡ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೂಲಗಳ ಪ್ರಕಾರ, ದೇಣಿಗೆ ಕಳವು ಆರೋಪಗಳ ಕುರಿತು ಸ್ವತಂತ್ರ ಹಾಗೂ ನ್ಯಾಯಸಮ್ಮತ ತನಿಖೆ ನಡೆಯಲು ಯಾವುದೇ ರೀತಿಯ ಪ್ರಭಾವ ಬೀಳಬಾರದು ಎಂಬ ಉದ್ದೇಶದಿಂದ ಚಂಪತ್ ರೈ ಈ ನಿರ್ಧಾರ ಕೈಗೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಎಫ್‌ಐಆರ್‌ ದಾಖಲಾಗಿರುವ ಹಿನ್ನೆಲೆಯಲ್ಲಿ ತನಿಖೆಗೆ ಸಂಪೂರ್ಣ ಸಹಕಾರ ನೀಡುವ ಉದ್ದೇಶದಿಂದ ಅವರು ಸ್ಥಾನ ತ್ಯಜಿಸಿದ್ದಾರೆ ಎಂದು ತಿಳಿದುಬಂದಿದೆ.

ಈ ಮಧ್ಯೆ, 2020ರಲ್ಲಿ ನಡೆದ ಆಡಿಟ್ ವರದಿಯು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಕಾರ್ಯವೈಖರಿಯನ್ನು “ಅತ್ಯಂತ ವೃತ್ತಿಪರತೆಯ ಕೊರತೆಯಿರುವುದು” ಎಂದು ಟೀಕಿಸಿತ್ತು. ಟ್ರಸ್ಟ್ ಸ್ಥಾಪನೆಯಾದ ಕೆಲವೇ ತಿಂಗಳುಗಳಲ್ಲಿ ನಡೆದ ಈ ಆಡಿಟ್ ಹಲವು ಪ್ರಮುಖ ಶಿಫಾರಸುಗಳನ್ನು ಮಾಡಿದ್ದರೂ, ಆರು ವರ್ಷಗಳಾದರೂ ಅವುಗಳನ್ನು ಸಂಪೂರ್ಣವಾಗಿ ಜಾರಿಗೆ ತರಲಾಗಿಲ್ಲ ಎಂಬ ಮಾಹಿತಿ ಹೊರಬಂದಿದೆ.

ದೇಣಿಗೆ ಹಣ ಮತ್ತು ಬೆಲೆಬಾಳುವ ವಸ್ತುಗಳ ದುರ್ಬಳಕೆ ಆರೋಪಗಳು ಹೊರಬಿದ್ದ ಬಳಿಕ ಉತ್ತರ ಪ್ರದೇಶ ಸರ್ಕಾರ ವಿಶೇಷ ತನಿಖಾ ತಂಡ (SIT) ರಚಿಸಿದ್ದು, ತಂಡವು ತನ್ನ ಪ್ರಾಥಮಿಕ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ತನಿಖೆಯಲ್ಲಿ ಚಂಪತ್ ರೈ ವಿರುದ್ಧ ವೈಯಕ್ತಿಕ ಆರೋಪಗಳಿಲ್ಲದಿದ್ದರೂ, ತನಿಖೆಯ ಪಾರದರ್ಶಕತೆಯನ್ನು ಕಾಪಾಡುವ ಉದ್ದೇಶದಿಂದ ಅವರು ರಾಜೀನಾಮೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಯೋಧ್ಯೆ ಪೊಲೀಸರು ಎಂಟು ಮಂದಿ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದಾರೆ. ದೇವಸ್ಥಾನಕ್ಕೆ ಭಕ್ತರು ನೀಡಿದ ನಗದು ಹಾಗೂ ಬೆಲೆಬಾಳುವ ವಸ್ತುಗಳ ಕಳವು, ದುರ್ಬಳಕೆ ಮತ್ತು ಹಣ ದುರುಪಯೋಗದ ಆರೋಪಗಳನ್ನು ಅವರ ವಿರುದ್ಧ ದಾಖಲಿಸಲಾಗಿದೆ. ಆರೋಪಿಗಳಲ್ಲಿ ಅವಿನಾಶ್ ಶುಕ್ಲಾ, ಲವಕುಶ್ ಮಿಶ್ರಾ, ಅನುಕಲ್ಪ್ ಮಿಶ್ರಾ, ಮನೀಶ್ ಕುಮಾರ್ ಯಾದವ್, ಕರುಣೇಶ್ ಪಾಂಡೆ, ರಾಮಾಶಂಕರ್ ಮಿಶ್ರಾ, ರಾಮ್ ಶಂಕರ್ ಯಾದವ್ ಅಲಿಯಾಸ್ ಟಿನ್ನು ಯಾದವ್ ಹಾಗೂ ಸುಭಾಷ್ ಶ್ರೀವಾಸ್ತವ್ ಸೇರಿದ್ದಾರೆ.

ಆರೋಪಿಗಳಲ್ಲಿ ಒಬ್ಬನಾದ ಟಿನ್ನು ಯಾದವ್ ಈ ಹಿಂದೆ ಚಂಪತ್ ರೈ ಅವರ ಚಾಲಕರಾಗಿ ಕೆಲಸ ಮಾಡಿದ್ದು, ರಾಮಮಂದಿರದಲ್ಲಿ ವಿಗ್ರಹ ಪ್ರತಿಷ್ಠಾಪನೆಯಾದ ಬಳಿಕ ದೇವಸ್ಥಾನದ ಆಂತರಿಕ ಆಡಳಿತ ಕಾರ್ಯಗಳಲ್ಲಿ ಭಾಗಿಯಾಗಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದೆ.

RELATED ARTICLES

Latest News