ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರದಲ್ಲಿ ಕೆಂಪೇಗೌಡ ಜಯಂತಿ ಕಾರ್ಯಕ್ರಮದ ವೇಳೆ ನಡೆದ ಘಟನೆಗೆ ಸಂಬಂಧಿಸಿದಂತೆ ಶಾಸಕ ಪ್ರದೀಪ್ ಈಶ್ವರ್ ಅವರಿಗೆ ಚಪ್ಪಲಿ ಎಸೆದ ಪ್ರಕರಣದಲ್ಲಿ 9 ಜನರನ್ನು ಪೊಲೀಸರು ಬಂಧಿಸಿರುವ ಹಿನ್ನೆಲೆಯಲ್ಲಿ, ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಶನಿವಾರ ಅಣಕನೂರು ಉಪ-ಕಾರಾಗೃಹದ ಬಳಿ ಬಂಧಿತರನ್ನು ಭೇಟಿಯಾದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಚಿಕ್ಕಬಳ್ಳಾಪುರದಲ್ಲಿ ಟಾರ್ಗೆಟ್ ರಾಜಕಾರಣ ನಡೆಯುತ್ತಿದೆ. ಅಮಾಯಕ ಕಾರ್ಯಕರ್ತರನ್ನು, ಪ್ರಕರಣದಲ್ಲಿ ಶಾಮೀಲಾಗದ ವ್ಯಕ್ತಿಗಳನ್ನೂ ಉದ್ದೇಶಪೂರ್ವಕವಾಗಿ ಟಾರ್ಗೆಟ್ ಮಾಡಲಾಗಿದೆ ಎಂದು ಆರೋಪಿಸಿದರು.
ನಮ್ಮ ಕಾರ್ಯಕರ್ತರ ಮೇಲೆ ಸುಮೋಟೋ ಪ್ರಕರಣ ದಾಖಲಿಸಲಾಗಿದೆ. ಆದರೆ ಸುಮೋಟೋ ಕೇಸ್ ಹಾಕುವಷ್ಟು ದೊಡ್ಡ ಅಪರಾಧವನ್ನು ಇಲ್ಲಿ ಯಾರೂ ಮಾಡಿಲ್ಲ. ಜನಪ್ರತಿನಿಧಿಗಳ ಒತ್ತಡಕ್ಕೆ ಮಣಿದು ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಸರ್ಕಾರದ ತಪ್ಪುಗಳನ್ನು ಎತ್ತಿ ಹಿಡಿಯುವವರನ್ನೇ ಗುರಿಯಾಗಿಸಲಾಗುತ್ತಿದೆ ಎಂದು ನಿಖಿಲ್ ಕುಮಾರಸ್ವಾಮಿ ದೂರಿದರು.
ಜಿಲ್ಲಾ ಜೆಡಿಎಸ್ ಸಾಮಾಜಿಕ ಜಾಲತಾಣದ ಅಧ್ಯಕ್ಷ ಅಕಿಲ್ ರೆಡ್ಡಿ ಜೀಡಮಾಕಲಹಳ್ಳಿ ಅವರ ಬಂಧನವನ್ನು ಖಂಡಿಸಿದ ಅವರು, ಜೈಲಿಗೆ ಹೋಗುವ ಸಂಸ್ಕೃತಿಯಿಂದ ಇಲ್ಲಿ ಯಾರೂ ಬಂದಿಲ್ಲ. ಅಕಿಲ್ ರೆಡ್ಡಿ ಗೌರವಯುತವಾಗಿ ಬದುಕು ಕಟ್ಟಿಕೊಂಡವರು. ಒಳ್ಳೆಯ ಸಂಸ್ಕೃತಿಯ ಹಿನ್ನೆಲೆ ಇರುವ ವ್ಯಕ್ತಿಯನ್ನು ಜೈಲಿನಲ್ಲಿ ಕೂರಿಸುವುದು ತಪ್ಪು. ಈ ಘಟನೆಯಿಂದ ಬಂಧಿತರ ಕುಟುಂಬಗಳಿಗೆ ತೀವ್ರ ಆಘಾತವಾಗಿದೆ ಎಂದರು.
ಪ್ರದೀಪ್ ಈಶ್ವರ್ ಮೇಲೆ ಎಫ್ಐಆರ್‌ಗೆ ಆಗ್ರಹ:
ಪ್ರಚೋದನೆ ನೀಡಿ ಉದ್ದೇಶಪೂರ್ವಕವಾಗಿ ನಮ್ಮವರನ್ನು ಒಳಗಡೆ ಹಾಕಿಸಿದ್ದಾರೆ. ಆ ವ್ಯಕ್ತಿಯನ್ನು ಇಲ್ಲಿಯವರೆಗೂ ಯಾರೂ ಪ್ರಶ್ನೆ ಮಾಡುತ್ತಿಲ್ಲ. ಎಫ್ಐಆರ್ ಯಾರ ಮೇಲೆ ದಾಖಲಾಗಬೇಕು ಎಂದು ಎಲ್ಲರಿಗೂ ಗೊತ್ತಿದೆ ಎಂದು ನಿಖಿಲ್ ಕುಮಾರಸ್ವಾಮಿ ಪರೋಕ್ಷವಾಗಿ ಶಾಸಕ ಪ್ರದೀಪ್ ಈಶ್ವರ್ ಅವರ ಹೆಸರು ಪ್ರಸ್ತಾಪಿಸದೆ ಆಗ್ರಹಿಸಿದರು. ಕೆಂಪೇಗೌಡರು ನಾಡಿನ ಪ್ರಭುಗಳು, ಸರ್ವ ಜನಾಂಗದ ನಾಯಕರು. ಅವರು ಯಾವುದೇ ಜಾತಿ, ಜನಾಂಗ, ಧರ್ಮಕ್ಕೆ ಸೀಮಿತರಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಬಾಧಿತ ಕುಟುಂಬಗಳಿಗೆ ನಿಖಿಲ್ ಸಾಂತ್ವನ
ಇದಕ್ಕೂ ಮುನ್ನ ನಿಖಿಲ್ ಕುಮಾರಸ್ವಾಮಿ ಅವರು ಶಾಸಕ ಬಿ.ಎನ್. ರವಿಕುಮಾರ್, ಕೋರ್ ಕಮಿಟಿ ಅಧ್ಯಕ್ಷ ಜೆ.ಕೆ. ಕೃಷ್ಣಾರೆಡ್ಡಿ ಸೇರಿದಂತೆ ಪಕ್ಷದ ಮುಖಂಡರೊಂದಿಗೆ ಅಣಕನೂರು ಜೈಲಿನಲ್ಲಿ ಬಂಧಿತರನ್ನು ಭೇಟಿ ಮಾಡಿ ಧೈರ್ಯ ತುಂಬಿದರು. ಬಳಿಕ ಅಕಿಲ್ ರೆಡ್ಡಿ ಅವರ ನಿವಾಸಕ್ಕೆ ತೆರಳಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು. ಪಕ್ಷದ ವತಿಯಿಂದ ಸಂಪೂರ್ಣ ಕಾನೂನು ಸಹಕಾರ ನೀಡುತ್ತೇವೆಎಂದು ಭರವಸೆ ನೀಡಿದರು.
