ಬೆಂಗಳೂರು, ಜೂ. 30- ಗ್ರೇಟರ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬೀದಿ ನಾಯಿಗಳಿಗೆ ಸಂತಾನಹರಣ ಶಸ್ತ್ರ ಚಿಕಿತ್ಸೆ ಹಾಗೂ ಗಿಡ ನೆಡುವ ಕಾರ್ಯಕ್ರಮದಲ್ಲಿ ನಡೆದಿರುವ ಅವ್ಯವಹಾರಗಳ ಬಗ್ಗೆ ಸಚಿವ ಕೃಷ್ಣಭೈರೇಗೌಡ ಅವರು ಅಧಿಕಾರಿಗಳಿಗೆ ಬೆವರಿಳಿಸಿದರು. ಗ್ರೇಟರ್ ಬೆಂಗಳೂರು ನಗರಾಭಿವೃದ್ಧಿ ಕಾರ್ಯಾರಂಭ ಮಾಡಿದ ದಿನದಿಂದಲೂ ಪಾಲಿಕೆಯ ಒಂದೊಂದೇ ವಿಭಾಗದಲ್ಲಿನ ಪ್ರಗತಿ ಪರಿಶೀಲನೆ ನಡೆಸುತ್ತಿರುವ ಸಚಿವರು, ಇಂದು ಜಿಬಿಎ ಕೇಂದ್ರ ಕಚೇರಿಯಲ್ಲಿ ಹಿರಿಯ ಅಧಿಕಾರಿಗಳ ಸಭೆ ನಡೆಸಿ, ಹಲವಾರು ಯೋಜನೆಗಳ ಪ್ರಗತಿ ಪರಿಶೀಲನೆ ಮಾಡಿದರು.
ಪಶು ಸಂಗೋಪನೆ ಇಲಾಖೆಯಲ್ಲಿ ಅನುಷ್ಠಾನಗೊಂಡಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಕುರಿತು ಹಲವು ಪ್ರಶ್ನೆಗಳನ್ನು ಸಚಿವರು ಮುಂದಿಟ್ಟು ಉತ್ತರ ನೀಡುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಕಳೆದ 20 ವರ್ಷಗಳಿಂದಲೂ ಪಾಲಿಕೆ ವ್ಯಾಪ್ತಿಯಲ್ಲಿ ನಾಯಿಗಳನ್ನು ಹತ್ಯೆ ಮಾಡಬಾರದು ಎಂಬ ನಿಯಮ ಪಾಲನೆ ಮಾಡಲಾಗುತ್ತಿದೆ. ಪರ್ಯಾಯವಾಗಿ ಸಂತಾನಹರಣ ಶಸ್ತ್ರ ಚಿಕಿತ್ಸೆಯ ಮೂಲಕ ಬೀದಿ ನಾಯಿಗಳ ಸಂಖ್ಯೆ ಕಡಿಮೆ ಮಾಡಲು ಯೋಜನೆ ಆರಂಭಿಸಲಾಯಿತು. ಈವರೆಗೂ ಎಷ್ಟು ನಾಯಿಗಳಿಗೆ ಸಂತಾನಹರಣ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ. ಇದಕ್ಕಾಗಿ ಖರ್ಚು ಮಾಡಿರುವ ಹಣ ಎಷ್ಟು? ಎಂದು ಪ್ರಶ್ನಿಸಿದರು.
ದಾಖಲೆಯಲ್ಲಿ ತೋರಿಸಿರುವಷ್ಟು ಸಂಖ್ಯೆಯ ನಾಯಿಗಳಿಗೆ ಸಂತಾನಹರಣ ಚಿಕಿತ್ಸೆಯಾಗಿದ್ದರೆ, ವಾಸ್ತವದಲ್ಲಿ ಎಷ್ಟು ನಾಯಿಗಳು ಇರಬೇಕಿತ್ತು. ಈಗ ಎಷ್ಟು ಬೀದಿ ನಾಯಿಗಳಿವೆ ಎಂದು ವರದಿ ನೀಡಲು ಸೂಚಿಸಿದರು.
2004-05, 2013-2023 ಮತ್ತು 2024-25 ರಲ್ಲಿ ಬೀದಿ ನಾಯಿಗಳ ಗಣತಿಯಾಗಿರುವುದಾಗಿ ಮಾಹಿತಿ ಇದೆ. ನಿರಂತರವಾಗಿ ಸಂತಾನಹರಣ ಶಸ್ತ್ರ ಚಿಕಿತ್ಸೆ ಯೋಜನೆ ನಡೆಯುತ್ತಲೇ ಇದ್ದರೂ, ಬೀದಿ ನಾಯಿಗಳ ಸಂಖ್ಯೆ ಕಡಿಮೆಯಾಗದಿರುವುದೇಕೆ? ಎಂದು ಪ್ರಶ್ನಿಸಿದ್ದಾರೆ.
ನಾಯಿಗಳ ಹಾವಳಿಯಿಂದ ಮಕ್ಕಳು, ಮಹಿಳೆಯರು, ಸಾರ್ವಜನಿಕರು ತೊಂದರೆಗೊಳಗಾಗುತ್ತಿರುವುದು ದಿನನಿತ್ಯ ವರದಿಯಾಗುತ್ತಲೇ ಇವೆ. ಇದಕ್ಕೆ ಯಾವ ರೀತಿಯ ಸಮರ್ಥನೆ ನೀಡುತ್ತೀರ? ಎಂದು ಖಾರವಾಗಿ ಕೇಳಿದ್ದಾರೆ. ಸಭೆಗೆ ಸಮರ್ಪಕ ದತ್ತಾಂಶ ಇಲ್ಲದೇ ಬಂದಿದ್ದ ಜಿಬಿಎ ಅಧಿಕಾರಿಗಳನ್ನು ಕರ್ತವ್ಯದಿಂದ ಬಿಡುಗಡೆ ಮಾಡುವಂತೆ ಸಚಿವರು ಇದೇ ವೇಳೆ ಕಠಿಣ ಆದೇಶ ನೀಡಿದರು. ಅಧಿಕಾರಿಗಳಿಗೆ ತಮಾಷೆ ಮಾಡುತ್ತಿದ್ದೀರಾ? ಸರ್ಕಾರದ ಬಗ್ಗೆ ಗೌರವ ಇಲ್ಲವೇ? ಕಾಟಾಚಾರಕ್ಕೆ ಕೆಲಸ ಮಾಡುವವರನ್ನು ಹೊರಗೆ ಕಳುಹಿಸಬೇಕೆ? ಎಂದು ತರಾಟೆಗೆ ತೆಗೆದುಕೊಂಡರು.
ಹಾವು ಸಾಯಬಾರದು, ಕೋಲು ಮುರಿಯಬಾರದು ಎಂಬ ರೀತಿ ಅಧಿಕಾರಿಗಳು ವರ್ತಿಸುತ್ತಿದ್ದಾರೆ. ಹಣವೂ ಖರ್ಚಾಗಬೇಕು, ನಾಯಿಗಳ ಸಂತಾನ ಕಡಿಮೆಯಾಗಬಾರದು, ಸಂತಾನಹರಣ ಶಸ್ತ್ರ ಚಿಕಿತ್ಸೆ ನಡೆಸುವ ಖಾಸಗಿ ಏಜೆನ್ಸಿಗಳೂ ಸಮೃದ್ಧಿಯಾಗಬೇಕೆಂಬ ರೀತಿ ಕೆಲಸಗಳಾಗುತ್ತಿವೆ.
ನಾಯಿಗಳಿಗೆ ಶಸ್ತ್ರ ಚಿಕಿತ್ಸೆ ನಡೆಸಲು ಬೇರೆ ಏಜೆನ್ಸಿಗಳು ಮುಂದೆ ಬರುತ್ತಿಲ್ಲ. 2019ರಿಂದ ಟೆಂಡರ್ ಕರೆದು ಗುತ್ತಿಗೆ ನೀಡಿ ಕೆಲಸ ಮಾಡಿಸಲಾಗುತ್ತಿದೆ ಎಂದು ಅಧಿಕಾರಿಗಳು ವಿವರಿಸಿದಾಗ, ಸಿಟ್ಟಾದ ಸಚಿವರು, ನನ್ನ ಕಿವಿಯ ಮೇಲೆ ನಿಮಗೆ ದಾಸವಾಳ ಕಾಣುತ್ತಿದೆಯೇ? ಇಂತಹ ಉತ್ತರಗಳನ್ನು ಯಾರಿಗೆ ನೀಡುತ್ತಿದ್ದೀರಾ? ನೀವು ಹೇಳುವುದನ್ನೆಲ್ಲಾ ನಾನು ಕೇಳುತ್ತೇನೆ ಎಂದು ಕೊಂಡಿದ್ದೀರಾ? ಜನ ಸಾಯುತ್ತಿದ್ದಾರೆ, ನಿಮಗೆ ಚೆಲ್ಲಾಟವೇ? ಲಕ್ಷಾಂತರ ನಾಯಿಗಳಿಗೆ ಸಂತಾನಹರಣ ಶಸ್ತ್ರ ಚಿಕಿತ್ಸೆ ಮಾಡುವುದಾಗಿ ಲೆಕ್ಕ ಹೇಳುತ್ತಿದ್ದೀರಾ? ಆದರೆ ಬೀದಿ ನಾಯಿಗಳ ಸಂಖ್ಯೆ ಕಡಿಮೆಯಾಗಿಲ್ಲ? ಈ ಮ್ಯಾಜಿಕ್ ಹೇಗೆ ಸಾಧ್ಯ? ಎಂದು ಪ್ರಶ್ನಿಸಿದರು.
ಜಿಬಿಎನ ಪಶು ಸಂಗೋಪನಾ ಘಟಕದಲ್ಲಿ 19 ಮಂದಿ ಅಧಿಕಾರಿಗಳಿದ್ದಾರೆ. ಸಂತಾನಹರಣ ಶಸ್ತ್ರ ಚಿಕಿತ್ಸೆ ನಿರ್ವಹಿಸುವ 5 ಏಜೆನ್ಸಿಗಳಿವೆ. 25 ವರ್ಷಗಳಿಂದಲೂ ಇದು ನಡೆದುಕೊಂಡು ಬಂದಿದೆ. ತೆರಿಗೆ ಕಟ್ಟುವ ಜನ ಹೈರಾಣಾಗುತ್ತಿದ್ದಾರೆ. ಅಧಿಕಾರಿಗಳು ನಾವು ಯಾರಿಗಾಗಿ ಕೆಲಸ ಮಾಡುತ್ತಿದ್ದೇವೆ ಎಂಬ ಪ್ರಜ್ಞೆ ಇಟ್ಟುಕೊಳ್ಳಬೇಕು ಎಂದು ಖಾರವಾಗಿ ಹೇಳಿದರು.
ಪ್ರತಿ ಗಿಡದಲ್ಲೂ 300 ರೂ. ಲೂಟಿ:
ಅರಣ್ಯೀಕರಣಕ್ಕಾಗಿ ಬೆಂಗಳೂರಿನಲ್ಲಿ ನಾನು ಹುಟ್ಟಿದ್ದಾಗಿನಿಂದಲೂ ಸಸಿ ನೆಡುತ್ತಲೇ ಇದ್ದಾರೆ. ಆದರೂ ಎಲ್ಲಿಯೂ ನಿರೀಕ್ಷಿತ ಮಟ್ಟದಲ್ಲಿ ಮರಗಿಡಗಳು ಕಾಣುತ್ತಿಲ್ಲ. ಬಿಬಿಎಂಪಿ ಅರಣ್ಯ ಇಲಾಖೆಯಿಂದ 20 ವರ್ಷಗಳಲ್ಲಿ ಎಷ್ಟು ಗಿಡಗಳನ್ನು ನೆಡಲಾಗಿದೆ ಮತ್ತು ಇದಕ್ಕಾಗಿ ಖರ್ಚು ಮಾಡಿರುವ ಹಣ ಎಷ್ಟು? ಎಂದು ಸಚಿವರು ಪ್ರಶ್ನಿಸಿದರು.
ಗಿಡನೆಟ್ಟ ಬಗ್ಗೆ ಪ್ರತಿ ವರ್ಷದ ಪ್ರಗತಿ ವರದಿಯನ್ನು ಸಲ್ಲಿಸಬೇಕು. ಎಷ್ಟು ಗಿಡಗಳು ಬದುಕುಳಿದಿವೆ ಎಂಬುದನ್ನು ತಿಳಿಸುವಂತೆ ಆದೇಶಿಸಿದ್ದಾರೆ. ಪ್ರತಿಯೊಂದು ಗಿಡ ನೆಡಲು 3,300 ರೂ.ಗಳನ್ನು ಖರ್ಚು ಮಾಡಲಾಗುತ್ತಿದೆ. ಗುಂಡಿ ತೋಡುವುದಕ್ಕಾಗಿ 300 ರೂ. ನಿಗದಿಯಾಗಿದೆ. ಈವರೆಗೂ ತಮ ಕ್ಷೇತ್ರದಲ್ಲಿ ಗುಂಡಿ ತೋಡದೇ, ಫುಟ್‌ಪಾತ್ ಪಕ್ಕ ಮಣ್ಣು ಕೆದಕಿ ಗಿಡ ನೆಟ್ಟಿರುವ ಉದಾಹಣೆಗಳು ಸಾಕಷ್ಟಿವೆ.
ಇದರಲ್ಲಿ ನೇರವಾಗಿ ಪ್ರತಿ ಗಿಡ ಲೆಕ್ಕದಲ್ಲಿ 300 ರೂ. ನುಂಗಿರುವ ಸಾಧ್ಯತೆ ಇದೆ. ಇದನ್ನು ಬೇಕಿದ್ದರೆ ಸಾಕ್ಷಿ ಸಮೇತ ಸಾಬೀತು ಪಡಿಸುತ್ತೇನೆ. ನನ್ನ ಕ್ಷೇತ್ರಕ್ಕೆ ಬನ್ನಿ ಎಂದು ಸವಾಲು ಎಸೆದರು.
