ವಾರಾಣಸಿ, ಜೂ.30- ಉತ್ತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಅಜಯ್ ರೈ ಅವರನ್ನು ಅಯೋಧ್ಯೆಯಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದು, ಅವರನ್ನು ಎಲ್ಲಿಗೆ ಕರೆದೊಯ್ಯಲಾಗಿದೆ ಎಂಬ ಮಾಹಿತಿ ಕುಟುಂಬಕ್ಕೆ ನೀಡಿಲ್ಲ ಎಂದು ಅವರ ಪತ್ನಿ ರೀನಾ ರೈ ಆರೋಪಿಸಿದ್ದಾರೆ. ತಡರಾತ್ರಿ ಬಿಡುಗಡೆ ಮಾಡಿದ ವಿಡಿಯೋ ಹೇಳಿಕೆಯಲ್ಲಿ ರೀನಾ ರೈ,
ರಾಮಮಂದಿರದ ಕಾಣಿಕೆ ಹಣದ ದುರ್ಬಳಕೆ ಆರೋಪದ ವಿಚಾರವನ್ನು ಪ್ರಸ್ತಾಪಿಸಲು ಅಜಯ್ ರೈ ಅಯೋಧ್ಯೆಗೆ ತೆರಳಿದ್ದರು. ಅಲ್ಲದೆ, ಇತರ ಕಾಂಗ್ರೆಸ್ ನಾಯಕರೊಂದಿಗೆ ರಾಮಮಂದಿರದಲ್ಲಿ ಪೂಜೆ ಸಲ್ಲಿಸುವ ಕಾರ್ಯಕ್ರಮವೂ ನಿಗದಿಯಾಗಿತ್ತು ಎಂದು ತಿಳಿಸಿದ್ದಾರೆ.ಅಯೋಧ್ಯೆಯ ಹೋಟೆಲ್‌ನಲ್ಲಿ ತಂಗಿದ್ದ ವೇಳೆ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅವರನ್ನು ಎಲ್ಲಿಗೆ ಕರೆದೊಯ್ಯಲಾಗಿದೆ ಎಂಬ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಇದರಿಂದ ಕುಟುಂಬದವರು ಆತಂಕಕ್ಕೊಳಗಾಗಿದ್ದು, ಅವರ ಸುರಕ್ಷತೆ ಬಗ್ಗೆ ಕಳವಳ ವ್ಯಕ್ತಪಡಿಸುತ್ತಿದ್ದೇವೆ, ಎಂದು ಅವರು ಹೇಳಿದ್ದಾರೆ.
ಆದರೆ, ಈ ಕುರಿತು ಅಯೋಧ್ಯೆ ಪೊಲೀಸರು ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.ಇದಕ್ಕೂ ಮೊದಲು ಕಾಂಗ್ರೆಸ್,ಸಂಜೆ ಅಜಯ್ ರೈ ಅವರನ್ನು ಅಯೋಧ್ಯೆಯ ಹೋಟೆಲ್‌ನಲ್ಲೇ ಗೃಹಬಂಧನ ಮಾಡಲಾಗಿದೆ ಎಂದು ಆರೋಪಿಸಿತ್ತು.ರಾಮಮಂದಿರದ ಕಾಣಿಕೆ ಹಣದ ದುರ್ಬಳಕೆ ಆರೋಪದ ಹಿನ್ನೆಲೆಯಲ್ಲಿ ಇಂದು ಅಜಯ್ ರೈ ನೇತೃತ್ವದಲ್ಲಿ ಕಾಂಗ್ರೆಸ್‌ನ ಉನ್ನತ ಮಟ್ಟದ ನಿಯೋಗವು ಅಯೋಧ್ಯೆಗೆ ಭೇಟಿ ನೀಡಿ ರಾಮಲಲ್ಲಾ ದರ್ಶನ ಹಾಗೂ ಪೂಜೆ ಸಲ್ಲಿಸುವುದಾಗಿ ಪಕ್ಷ ಘೋಷಿಸಿತ್ತು. ಈ ನಿಯೋಗದಲ್ಲಿ ಕಾಂಗ್ರೆಸ್ ಸಂಸದರಾದ ಕಿಶೋರಿ ಲಾಲ್ ಶರ್ಮಾ, ರಾಕೇಶ್ ರಾಥೋರ್ ಉಜ್ವಲ್ ರಮಣ್ ಸಿಂಗ್, ತನುಜ್ ಪುನಿಯಾ ಸೇರಿದಂತೆ ಹಲವು ಹಿರಿಯ ನಾಯಕರು ಭಾಗವಹಿಸುವ ಯೋಜನೆ ಇತ್ತು.
ಇದಕ್ಕೂ ಮುನ್ನ ಉತ್ತರ ಪ್ರದೇಶ ಸಚಿವ ದಯಾಶಂಕರ್ ಸಿಂಗ್ ಕಾಂಗ್ರೆಸ್ ನಾಯಕರ ಉದ್ದೇಶವನ್ನು ಪ್ರಶ್ನಿಸಿ, ವಿರೋಧ ಪಕ್ಷದ ನಾಯಕರು ಶ್ರೀರಾಮನಲ್ಲಿ ನಂಬಿಕೆ ಇಟ್ಟಿಲ್ಲ. ರಾಮಮಂದಿರ ನಿರ್ಮಾಣಕ್ಕೂ ಅವರ ಯಾವುದೇ ಕೊಡುಗೆ ಇಲ್ಲ. ಈಗ ಈ ವಿಚಾರವನ್ನು ಪ್ರಸ್ತಾಪಿಸುವುದರ ಹಿಂದಿನ ಉದ್ದೇಶವೇನು? ಎಂದು ಟೀಕಿಸಿದ್ದರು.
