Homeರಾಷ್ಟ್ರೀಯನಾಳೆಯಿಂದ ದೇಶದಾದ್ಯಂತ ವಿಬಿ-ಜಿ ರಾಮ್‌ಜಿ ಆರಂಭ

ನಾಳೆಯಿಂದ ದೇಶದಾದ್ಯಂತ ವಿಬಿ-ಜಿ ರಾಮ್‌ಜಿ ಆರಂಭ

VB-G RAM G to start across the country from tomorrow

ನವದೆಹಲಿ, ಜೂ.30- ಭಾರತದ ಗ್ರಾಮೀಣಾಭಿವೃದ್ಧಿ ಪಥದಲ್ಲಿ ಮಹತ್ವದ ಮೈಲಿಗಲ್ಲನ್ನು ಸ್ಥಾಪಿಸುತ್ತಿರುವ ಕೇಂದ್ರ ಸರ್ಕಾರವು, ವಿಕಸಿತ ಭಾರತ್‌ – ರೋಜ್‌ಗಾರ್‌ ಮತ್ತು ಅಜೀವಿಕಾ ಮಿಷನ್‌ (ಗ್ರಾಮೀಣ) ( ವಿಬಿ-ಜಿ -ರಾಮ್‌ ಜಿ) ಕಾಯ್ದೆ 2025 ಅನ್ನು ನಾಳೆ ದೇಶದ್ಯಂತ ಜಾರಿಗೆ ಬರಲಿದೆ. ಈ ಯೋಜನೆಯು ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಆಡಳಿತ ಯಂತ್ರವನ್ನು ಬಲಪಡಿಸುವ ನಿಟ್ಟಿನಲ್ಲಿ ಮೈಲಿಗಲ್ಲಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಈ ಕುರಿತು ಕರ್ನಾಟಕ ಸರ್ಕಾರವು ತೀವ್ರ ವಿರೋಧ ವ್ಯಕ್ತಪಡಿಸಿದ್ದರೂ, ಗ್ರಾಮೀಣ ಕಾರ್ಮಿಕರ ಹಿತದೃಷ್ಟಿಯಿಂದ ಜು. 1ರಿಂದ ರಾಜ್ಯದಲ್ಲಿ ಈ ಯೋಜನೆಯನ್ನು ಅನಿವಾರ್ಯವಾಗಿ ಅನುಷ್ಠಾನಗೊಳಿಸಲು ನಿರ್ಧರಿಸಿದೆ. ಈ ಹೊಸ ಕಾಯ್ದೆಯ ಜಾರಿಯೊಂದಿಗೆ, ಕಳೆದ ಎರಡು ದಶಕಗಳಿಂದ ಜಾರಿಯಲ್ಲಿದ್ದ 2005ರ ಮಹಾತ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (ಮನೇಗ್ರಾ) ಅಧಿಕೃತವಾಗಿ ರದ್ದಾಗಲಿದೆ.

ಇದು ವಿಕಸಿತ ಭಾರತ 2047 ಗುರಿಯತ್ತ ಸಾಗಲು, ಗ್ರಾಮೀಣ ಆರ್ಥಿಕತೆಯನ್ನು ಹೆಚ್ಚು ಉತ್ಪಾದಕ ಮತ್ತು ಭವಿಷ್ಯ-ಸಿದ್ಧವನ್ನಾಗಿಸುವ ಹೊಸ ಯುಗದ ಆರಂಭವನ್ನು ಸೂಚಿಸುತ್ತದೆ.
ಪ್ರತಿ ಗ್ರಾಮೀಣ ಕುಟುಂಬದ ವಯಸ್ಕ ಸದಸ್ಯರಿಗೆ ವರ್ಷಕ್ಕೆ 125 ದಿನಗಳ ಕೂಲಿ ಉದ್ಯೋಗವನ್ನು ಶಾಸನಬದ್ಧವಾಗಿ ಖಾತರಿಪಡಿಸಲಾಗಿದೆ. ಇದು ಕುಟುಂಬಗಳ ಜೀವನೋಪಾಯ ಭದ್ರತೆಯನ್ನು ಹೆಚ್ಚಿಸುವ ಉದ್ದೇಶವನ್ನು ಹೊಂದಿದೆ.

ನಿಗದಿತ ಸಮಯದೊಳಗೆ ಉದ್ಯೋಗ ನೀಡಲು ವಿಫಲವಾದರೆ, ಕಾಯ್ದೆಯ ನಿಬಂಧನೆಗಳಂತೆ ಕಾರ್ಮಿಕರಿಗೆ ನಿರುದ್ಯೋಗ ಭತ್ಯೆಯನ್ನು ಪಾವತಿಸಲಾಗುತ್ತದೆ. ನೇರ ಲಾಭ ವರ್ಗಾವಣೆ (ಡಿಬಿಟಿ) ಮೂಲಕವೇ ವೇತನ ಪಾವತಿ ಮುಂದುವರಿಯಲಿದೆ. ಮಸ್ಟರ್‌ ರೋಲ್‌ ಮುಕ್ತಾಯಗೊಂಡ 15 ದಿನಗಳ ಒಳಗೆ ವೇತನ ಪಾವತಿಸುವುದು ಕಡ್ಡಾಯವಾಗಿದೆ. ವಿಳಂಬವಾದಲ್ಲಿ ಕಾರ್ಮಿಕರಿಗೆ ಪರಿಹಾರ ಪಡೆಯುವ ಹಕ್ಕು ಇರುತ್ತದೆ.

ಬಜೆಟ್‌ ಹಂಚಿಕೆ ಮತ್ತು ಆರ್ಥಿಕ ಬೆಂಬಲ :
ಈ ಮಹತ್ವಾಕಾಂಕ್ಷಿ ಯೋಜನೆಗಾಗಿ ಕೇಂದ್ರ ಸರ್ಕಾರವು 2026-27ನೇ ಸಾಲಿಗೆ ರೂ. 95,692.31 ಕೋಟಿಗಳ ಬಜೆಟ್‌ ಹಂಚಿಕೆ ಮಾಡಿದೆ. ಇದು ಗ್ರಾಮೀಣ ಉದ್ಯೋಗ ಕಾರ್ಯಕ್ರಮವೊಂದಕ್ಕೆ ಇದುವರೆಗಿನ ಅತಿ ದೊಡ್ಡ ಹಂಚಿಕೆಯಾಗಿದೆ. ರಾಜ್ಯಗಳ ಪಾಲು ಸೇರಿ ಒಟ್ಟು ವೆಚ್ಚ ರೂ. 1.51 ಲಕ್ಷ ಕೋಟಿ ಮೀರಲಿದೆ ಎಂದು ಅಂದಾಜಿಸಲಾಗಿದೆ.

ಹೊಸ ಕಾರ್ಡ್‌ಗಳನ್ನು ನೀಡುವವರೆಗೆ ಅಸ್ತಿತ್ವದಲ್ಲಿರುವ ಇ-ಕೆವೈಸಿ ದೃಢೀಕೃತ ಎಂಜಿಎನ್‌ಆರ್‌ಇಜಿಎ ಜಾಬ್‌ ಕಾರ್ಡ್‌ಗಳೇ ಮಾನ್ಯವಾಗಿರುತ್ತವೆ. ಜಾಬ್‌ ಕಾರ್ಡ್‌ ಇಲ್ಲದವರು ಗ್ರಾಮ ಪಂಚಾಯತ್‌ ಮಟ್ಟದಲ್ಲಿ ನೋಂದಾಯಿಸಿಕೊಳ್ಳಬಹುದು. ಇ-ಕೆವೈಸಿ ಬಾಕಿ ಇದ್ದ ಕಾರಣಕ್ಕಾಗಿ ಯಾರೊಬ್ಬರಿಗೂ ಉದ್ಯೋಗ ನಿರಾಕರಿಸುವಂತಿಲ್ಲ.

ವಿಶೇಷತೆಗಳು :
ಹಳೆಯ ನರೇಗಾ ಯೋಜನೆಯಡಿ ವರ್ಷಕ್ಕೆ 100 ದಿನಗಳ ಉದ್ಯೋಗ ಭರವಸೆ ಇತ್ತು. ಈಗ ಜಾರಿಗೆ ಬರುತ್ತಿರುವ ಹೊಸ ಯೋಜನೆಯಲ್ಲಿ ಅದನ್ನು 125 ದಿನಗಳಿಗೆ ಏರಿಕೆ ಮಾಡಲಾಗಿದೆ. ಈವರೆಗೆ ನರೇಗಾ ಯೋಜನೆಯಡಿ ಕೇಂದ್ರ ಮತ್ತು ರಾಜ್ಯದ ಪಾಲು 90:10 ಅನುಪಾತದಲ್ಲಿತ್ತು. ಆದರೆ, ಹೊಸ ಯೋಜನೆಯಲ್ಲಿ ಇದನ್ನು 60:40 ಕ್ಕೆ ಬದಲಿಸಲಾಗಿದೆ. ಅಂದರೆ, ಯೋಜನೆಯ ವೆಚ್ಚದ ಶೇ. 40ರಷ್ಟು ಹಣವನ್ನು ಇನ್ನು ಮುಂದೆ ರಾಜ್ಯ ಸರ್ಕಾರವೇ ಭರಿಸಬೇಕಾಗುತ್ತದೆ.ಕೃಷಿ ಚಟುವಟಿಕೆಗಳಿಗೆ ಕಾರ್ಮಿಕರ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು, ಕೃಷಿ ಬಿತ್ತನೆ ಮತ್ತು ಕೊಯ್ಲು ಅವಧಿಯಲ್ಲಿ ಸುಮಾರು 60 ದಿನಗಳ ಕಾಲ ಯೋಜನೆಗೆ ವಿರಾಮ ನೀಡುವ ಅವಕಾಶವನ್ನು ಕಾಯ್ದೆಯು ಕಲ್ಪಿಸಿದೆ. ಇದನ್ನು ರಾಜ್ಯ ಸರ್ಕಾರವು ಅವೈಜ್ಞಾನಿಕ ಎಂದು ಟೀಕಿಸಿದೆ.

ರಾಜ್ಯ ಸರ್ಕಾರದ ಆಕ್ಷೇಪಣೆಗಳೇನು? :
ಕರ್ನಾಟಕ ಸರ್ಕಾರವು ಈ ಯೋಜನೆಯನ್ನು ಹಲವು ಕಾರಣಗಳಿಗಾಗಿ ಆರಂಭದಿಂದಲೂ ವಿರೋಧಿಸುತ್ತಾ ಬಂದಿದೆ. ಶೇ. 10ರಿಂದ ಶೇ. 40ಕ್ಕೆ ರಾಜ್ಯದ ಪಾಲನ್ನು ಏರಿಕೆ ಮಾಡಿರುವುದರಿಂದ, ರಾಜ್ಯದ ಬೊಕ್ಕಸದ ಮೇಲೆ ವಾರ್ಷಿಕವಾಗಿ ಸಾವಿರಾರು ಕೋಟಿ ರೂಪಾಯಿಗಳ ಹೆಚ್ಚುವರಿ ಹೊರೆ ಬೀಳಲಿದೆ.

ರಾಜ್ಯಗಳೊಂದಿಗೆ ಯಾವುದೇ ಪೂರ್ವ ಸಮಾಲೋಚನೆ ನಡೆಸದೆ ಏಕಪಕ್ಷೀಯವಾಗಿ ಯೋಜನೆ ರೂಪಿಸಿರುವುದು ಮತ್ತು ರಾಜ್ಯಗಳನ್ನು ಆರ್ಥಿಕವಾಗಿ ಸಂಕಷ್ಟಕ್ಕೆ ನೂಕುವುದು ಒಕ್ಕೂಟ ವ್ಯವಸ್ಥೆಯ ತತ್ವಗಳಿಗೆ ವಿರುದ್ಧವಾಗಿದೆ ಎಂಬುದು ರಾಜ್ಯದ ವಾದ.ಬಹು ಆಯಾಮದ ಬಡತನ ಸೂಚ್ಯಂಕದ ಆಧಾರದ ಮೇಲೆ ಹಣ ಹಂಚಿಕೆ ಮಾಡುವ ಮಾನದಂಡವು ಕರ್ನಾಟಕದಂತಹ ಅಭಿವೃದ್ಧಿ ಹೊಂದಿದ ರಾಜ್ಯಗಳಿಗೆ ಅನ್ಯಾಯ ಮಾಡಲಿದೆ ಎಂದು ಸರ್ಕಾರ ಆತಂಕ ವ್ಯಕ್ತಪಡಿಸಿದೆ. ಈಗಾಗಲೇ ಈ ಯೋಜನೆಯ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಕಾನೂನು ಹೋರಾಟ ನಡೆಸುತ್ತಿರುವ ರಾಜ್ಯ ಸರ್ಕಾರವು, ಮುಂಬರುವ ದಿನಗಳಲ್ಲಿ ಕೇಂದ್ರದ ಜೊತೆಗಿನ ಸಭೆಗಳಲ್ಲಿಯೂ ಈ ವಿಷಯವನ್ನು ಪ್ರಬಲವಾಗಿ ಮಂಡಿಸಲು ಸಿದ್ಧತೆ ನಡೆಸಿದೆ.

ವಿಕಸಿತ್‌ ಭಾರತ್‌ – ಜಿ ರಾಮ್‌ ಜಿ ಕಾಯ್ದೆ, 2025 ಗ್ರಾಮಗಳಲ್ಲಿ ಉದ್ಯೋಗ ಸೃಷ್ಟಿ, ಗ್ರಾಮೀಣಾಭಿವೃದ್ಧಿ ಮತ್ತು ಸ್ವಾವಲಂಬನೆಗೆ ಹೊಸ ಆವೇಗವನ್ನು ನೀಡುವ ನಿರೀಕ್ಷೆಯಿದೆ. ಗ್ರಾಮ ಪಂಚಾಯಿತಿಗಳನ್ನು ಗ್ರಾಮೀಣ ಪರಿವರ್ತನೆಯ ಕೇಂದ್ರ ಸ್ತಂಭವಾಗಿ ಇರಿಸುವ ಮೂಲಕ, ಈ ಕಾಯ್ದೆಯು ಸಬಲೀಕರಣಗೊಂಡ, ಸಮೃದ್ಧ ಮತ್ತು ಅಭಿವೃದ್ಧಿ ಹೊಂದಿದ ಗ್ರಾಮೀಣ ಭಾರತವನ್ನು ನಿರ್ಮಿಸುವಲ್ಲಿ ಮಹತ್ವದ ಮೈಲಿಗಲ್ಲಾಗಲಿದೆ ಎಂಬುದು ಕೇಂದ್ರ ಸರ್ಕಾರದ ಸಮರ್ಥನೆಯಾಗಿದೆ.

RELATED ARTICLES

Latest News