ಬೆಂಗಳೂರು, ಜು.2- ರಾಜ್ಯ ಸರ್ಕಾರ ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣಗೊಳಿಸುವುದಕ್ಕೆ ವಿರುದ್ಧವಾಗಿದೆ. ಆದರೆ ಸಚಿವ ಸಂಪುಟದಲ್ಲಿ ಈ ಬಗ್ಗೆ ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳುವುದಾಗಿ ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.
ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಕುರಿತಂತೆ ತಾವು ಹಾಗೂ ಮುಖ್ಯಮಂತ್ರಿಯವರು ನಮ ಅಭಿಪ್ರಾಯಗಳನ್ನು ಹೇಳಿದ್ದೇವೆ. ನಾವು ಖಾಸಗೀಕರಣದ ಪರವಾಗಿಲ್ಲ ಎಂದರು.
ಖಾಸಗೀಕರಣದ ಹಿಂದೆ ಸರ್ಕಾರದ ಹಿತಾಸಕ್ತಿಯಿದೆ ಎಂಬ ಆರೋಪ ಸರಿಯಲ್ಲ, ಒಂದು ವೇಳೆ ನಮಗೆ ಖಾಸಗೀಕರಣವಾಗಬೇಕೆಂದಿದ್ದರೆ, ಎಸ್ಕಾಂಗಳು, ಕೆಪಿಟಿಸಿಎಲ್ ಸೇರಿದಂತೆ ಸರ್ಕಾರದ ಅಂಗ ಸಂಸ್ಥೆಗಳು ಹೇಗೆ ವಿರೋಧ ವ್ಯಕ್ತ ಪಡಿಸುತ್ತಿದ್ದವು? ಎಂದು ಪ್ರಶ್ನಿಸಿದರು.
ವಿದ್ಯುತ್ ಖಾಸಗೀಕರಣಕ್ಕೆ ಅನುಕೂಲವಾಗುವಂತೆ ಕೇಂದ್ರ ಸರ್ಕಾರ ಕಾನೂನು ತಿದ್ದುಪಡಿ ಮಾಡಿದೆ. ಅದರನ್ವಯ ಟಾಟಾ ಸಂಸ್ಥೆಯವರು ನೇರವಾಗಿ ಕೆಇಆರ್‌ಸಿಎಗೆ ಅರ್ಜಿ ಸಲ್ಲಿಸಿದ್ದಾರೆ. ಸರ್ಕಾರದ ಎಸ್ಕಾಂಗಳು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿವೆ ಎಂದು ತಿಳಿಸಿದರು.
ಮಳೆ ಕೊರತೆಯ ನಡುವೆಯೂ ಸದ್ಯಕ್ಕೆ ವಿದ್ಯುತ್ ಅಭಾವ ಇಲ್ಲ. ರಾಜ್ಯದಲ್ಲಿ ಪೂರೈಕೆಗೆ ಸಾಕಷ್ಟು ವಿದ್ಯುತ್ ಸಂಗ್ರಹ ಇದೆ. ಮಳೆಗಾಲ ಇನ್ನೂ ಮುಗಿದಿಲ್ಲ, ಮುಂದಿನ ದಿನಗಳಲ್ಲಿ ಮಳೆ ಬರಬಹುದು ಎಂಬ ನಿರೀಕ್ಷೆ ಇದೆ ಎಂದರು.
ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಗೃಹಜ್ಯೋತಿಗೆ ಅನರ್ಹರು ಸೇರ್ಪಡೆಯಾಗಿದ್ದಾರೆ. ಅದಕ್ಕಾಗಿ ಪರಿಶೀಲನೆ ನಡೆಸಲಾಗುತ್ತಿದೆ. ಅರ್ಹರಿಗೆ ಯೋಜನೆಯ ಸೌಲಭ್ಯವನ್ನು ರದ್ದುಗೊಳಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಗೃಹಜ್ಯೋತಿ ಫಲಾನುಭವಿಗಳಿಂದ ಜಾತಿ ಮಾಹಿತಿ ಸಂಗ್ರಹಿಸುತ್ತಿರುವುದರಲ್ಲಿ ತಪ್ಪಿಲ್ಲ, ಎಲ್ಲಾ ರೀತಿಯ ಸಮೀಕ್ಷೆಗಳಲ್ಲೂ ಜಾತಿ ಕೇಳುತ್ತಾರೆ. ಗೃಹಜ್ಯೋತಿ ಫಲಾನುಭವಿಗಳಿಂದ ಮಾಹಿತಿ ಸಂಗ್ರಹದಲ್ಲಿ ಜಾತಿ ಪ್ರಮಾಣಪತ್ರ ಪಡೆಯುತ್ತಿಲ್ಲ, ಕೇವಲ ಮಾಹಿತಿ ಕೇಳುತ್ತಿದ್ದೇವೆ. ಎಲ್ಲರೂ ಜಾತಿ ಪ್ರಮಾಣಪತ್ರವನ್ನು ಸಿದ್ಧವಾಗಿಟ್ಟುಕೊಂಡಿರುವುದಿಲ್ಲ ಎಂಬ ಮಾಹಿತಿ ತಮಗಿದೆ ಎಂದು ತಿಳಿಸಿದರು.
ಸಚಿವ ಸಂಪುಟ ವಿಸ್ತರಣೆ ಕುರಿತು ತಮಗೆ ಯಾವುದೇ ಮಾಹಿತಿ ಇಲ್ಲ. ಈ ಬಗ್ಗೆ ಮುಖ್ಯಮಂತ್ರಿಯವರು ಮತ್ತು ಪಕ್ಷದ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.
