ಬೆಂಗಳೂರು,ಜು.4-ನಗರದ ಪೂರ್ವವಲಯದ ಐದು ವಿಭಾಗಗಳಲ್ಲಿನ 30 ಕ್ಕೂ ಹೆಚ್ಚು ರೌಡಿಗಳ ಮನೆಗಳು ಹಾಗೂ ವಾಹನಗಳ ಮೇಲೆ ಏಕಕಾಲಕ್ಕೆ ಸಿಸಿಬಿ ಪೊಲೀಸರು ದಾಳಿ ಮಾಡಿ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.
ಸಿಸಿಬಿ ಡಿಸಿಪಿ ಹರಿಬಾಬು ಅವರ ನೇತೃತ್ವದಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಇಂದು ಮುಂಜಾನೆಯಿಂದಲೇ ಮಿಂಚಿನ ಕಾರ್ಯಾಚರಣೆ ನಡೆಸಿ ರೌಡಿಗಳ ಮನೆಯನ್ನು ಶೋಧ ಕಾರ್ಯ ನಡೆಸಿದ್ದಾರೆ.
ದಾಳಿ ಸಂದರ್ಭದಲ್ಲಿ ಇಂದಿರಾ ನಗರದ ರೌಡಿ ಪ್ರಭಾಕರ್ ಎಂಬಾತನ ಮನೆಯಲ್ಲಿ ಅಪಾರ ಮಾರಕಾಸ್ತ್ರಗಳು ಕಂಡು ಬಂದಿದ್ದು, ಪೊಲೀಸರು ಅವುಗಳನ್ನು ವಶಪಡಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.ವಾಹನಗಳನ್ನು ಪರಿಶೀಲಿಸಿದಾಗ ಅವುಗಳಲ್ಲಿ ಮಾರಕಾಸ್ತ್ರಗಳು ಇರುವುದು ಕಂಡು ಬಂದ ಹಿನ್ನಲೆಯಲ್ಲಿ ವಾಹನಗಳನ್ನೂ ಸಹ ಪರಿಶೀಲಿಸಿದ್ದಾರೆ.
ಕಠಿಣ ಎಚ್ಚರಿಕೆ:ಸಮಾಜದ ಸ್ವಾಸ್ಥ್ಯವನ್ನು ಕೆಡಿಸುವ ಯಾವುದೇ ಅಪರಾಧ ಚಟುವಟಿಕೆಗಳಲ್ಲಿ ಮತ್ತೆ ಭಾಗಿಯಾದರೆ ಅಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ಡಿಸಿಪಿ ಹರಿಬಾಬು ಎಚ್ಚರಿಕೆ ನೀಡಿದ್ದಾರೆ.
ಮುಂದಿನ ದಿನಗಳಲ್ಲಿಯೂ ದಾಳಿ ಮಾಡಲಾಗುವುದೆಂದು ರೌಡಿಗಳಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.ಇತ್ತೀಚೆಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ರೌಡಿ ಚಟುವಟಿಕೆಗಳನ್ನು ಮಟ್ಟ ಹಾಕಬೇಕು. ಅಲ್ಲದೇ ಆ್ಯಂಟಿ ರೌಡಿಸಂ ಸ್ವ್ಕಾಡ್ ರಚಿಸುವಂತೆ ಸೂಚಿಸಿದ್ದರು. ಅದರ ಬೆನ್ನಲ್ಲೇ ಸಿಸಿಬಿ ಪೊಲೀಸರು ಮುಂಜಾನೆಯಿಂದಲೇ ಈ ದಾಳಿ ನಡೆಸಿದ್ದು, ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಈ ಕಾರ್ಯಾಚರಣೆ ಪ್ರಮುಖ ಹೆಜ್ಜೆಯಾಗಿದೆ.
