Homeಅಂತಾರಾಷ್ಟ್ರೀಯ2ನೇ ಮಹಾಯುದ್ಧದ ಸಮಯದಲ್ಲಿ ಜಪಾನ್‌ನ ಯಮಗಾಟಾ ವಿಶ್ವವಿದ್ಯಾಲಯದಲ್ಲಿ ನಡೆದಿತ್ತು ಯುರೇನಿಯಂ ಪ್ರಯೋಗ

2ನೇ ಮಹಾಯುದ್ಧದ ಸಮಯದಲ್ಲಿ ಜಪಾನ್‌ನ ಯಮಗಾಟಾ ವಿಶ್ವವಿದ್ಯಾಲಯದಲ್ಲಿ ನಡೆದಿತ್ತು ಯುರೇನಿಯಂ ಪ್ರಯೋಗ

Japan’s Yamagata Univ. Finds Traces of Uranium Experiment During WWII

ಟೋಕಿಯೊ, ಜು.4- ಎರಡನೇ ವಿಶ್ವಯುದ್ಧದ ಕೊನೆಯ ಹಂತದಲ್ಲಿ ಜಪಾನ್‌ನ ಯಮಗತಾ ವಿಶ್ವವಿದ್ಯಾನಿಲಯದಲ್ಲಿ ಸಂಗ್ರಹಿಸಿಡಲಾಗಿದ್ದ ಸುಮಾರು 80 ವರ್ಷಗಳ ಹಳೆಯ ಮಾದರಿಯೊಂದು ನೈಸರ್ಗಿಕ ಯುರೇನಿಯಂ ಎಂಬುದು ಇದೀಗ ವೈಜ್ಞಾನಿಕ ಪರೀಕ್ಷೆಯಲ್ಲಿ ದೃಢಪಟ್ಟಿದೆ.

ಇದರೊಂದಿಗೆ ಯುದ್ಧಕಾಲದಲ್ಲಿ ವಿಶ್ವವಿದ್ಯಾನಿಲಯದ ಆವರಣದಲ್ಲಿ ಯುರೇನಿಯಂ ಸಮೃದ್ಧೀಕರಣ ಕುರಿತ ಸಂಶೋಧನೆ ನಡೆದಿರಬಹುದಾದ ಸಾಧ್ಯತೆ ಮತ್ತಷ್ಟು ಬಲಗೊಂಡಿದೆ. ವಿಶ್ವವಿದ್ಯಾಲಯದ ಕಿರಣೋತ್ಪಾದಕ ವಸ್ತುಗಳ ಸಂಗ್ರಹ ಕೇಂದ್ರದಲ್ಲಿ ಸುಮಾರು 5 ಗ್ರಾಂ ತೂಕದ ಈ ಮಾದರಿಯನ್ನು ಹಲವು ದಶಕಗಳಿಂದ ಗಾಜಿನ ಸೀಸೆಯಲ್ಲಿ ಸಂರಕ್ಷಿಸಲಾಗಿತ್ತು.

ಹಿಂದಿನ ದಾಖಲೆಗಳಲ್ಲಿ ಇದನ್ನು ಡಿಪ್ಲೀಟೆಡ್‌ ಯುರೇನಿಯಂ ಎಂದು ದಾಖಲಿಸಲಾಗಿತ್ತು. ಆದರೆ ಸುರಕ್ಷತಾ ನಿರ್ವಹಣೆಯ ಭಾಗವಾಗಿ ಮರುಪರಿಶೀಲನೆ ನಡೆಸಿದಾಗ, ಖಾಸಗಿ ಸಂಶೋಧನಾ ಸಂಸ್ಥೆಯ ಸಹಯೋಗದಲ್ಲಿ ನಡೆದ ವಿಶ್ಲೇಷಣೆಯಲ್ಲಿ ಇದು ನೈಸರ್ಗಿಕ ಯುರೇನಿಯಂ ಎಂಬುದು ಖಚಿತವಾಗಿದೆ.

ಪರಿಶೀಲನೆ ವೇಳೆ ಸೀಸೆಯ ಮೇಲಿನ ಲೇಬಲ್‌ನಲ್ಲಿ ಯುದ್ಧಕಾಲದಲ್ಲಿ ಅಣು ಸಂಶೋಧನೆ ನಡೆಸಿದ್ದ ರಿಕೇನ್‌ ಸಂಸ್ಥೆಯ ವಿಜ್ಞಾನಿ ಕುನಿಹಿಕೊ ಕಿಗೋಶಿ ಅವರ ಹೆಸರಿನ ಜೊತೆಗೆ 1945ರ ಮೇ 11ರ ದಿನಾಂಕವೂ ಪತ್ತೆಯಾಗಿದೆ. ಈ ದಿನಾಂಕವು ಕಿಗೋಶಿ ಅವರು ಯುದ್ಧದ ಸಂದರ್ಭದಲ್ಲಿ ಯಮಗತಾಗೆ ಸ್ಥಳಾಂತರಗೊಂಡ ಬಳಿಕದ ಅವಧಿಗೆ ಹೊಂದಿಕೆಯಾಗಿರುವುದರಿಂದ, ಅವರೇ ಈ ಮಾದರಿಯೊಂದಿಗೆ ಸಂಶೋಧನೆ ನಡೆಸಿದ್ದ ಸಾಧ್ಯತೆ ಇದೆ ಎಂದು ವಿಶ್ವವಿದ್ಯಾನಿಲಯ ಹೇಳಿದೆ.

ಕಿಗೋಶಿ ಅವರು 1945ರ ಮಾರ್ಚ್‌ನಲ್ಲಿ ಯುದ್ಧದ ದಾಳಿಯಿಂದ ತಪ್ಪಿಸಿಕೊಳ್ಳಲು ಯಮಗತಾಗೆ ತೆರಳಿ, ಆಗಿನ ಯಮಗತಾ ಹೈಸ್ಕೂಲ್‌ನಲ್ಲಿ ಯುರೇನಿಯಂ ಸಮೃದ್ಧೀಕರಣ ಕುರಿತ ಪ್ರಯೋಗಗಳನ್ನು ನಡೆಸಿದ್ದರು ಎಂದು ದಾಖಲೆಗಳು ತಿಳಿಸಿವೆ. ಇದೇ ಶಿಕ್ಷಣ ಸಂಸ್ಥೆ ನಂತರ ಯಮಗತಾ ವಿಶ್ವವಿದ್ಯಾನಿಲಯವಾಗಿ ರೂಪುಗೊಂಡಿದೆ.

ಆ ಸಮಯದಲ್ಲಿ ಸಂಸ್ಥೆ ಜಪಾನ್‌ನ ಸಾಮ್ರಾಜ್ಯ ಸೇನೆಯ ವಿನಂತಿಯ ಮೇರೆಗೆ ಅಣುಬಾಂಬ್‌ ಅಭಿವೃದ್ಧಿಗೆ ಸಂಬಂಧಿಸಿದ ಮೂಲಭೂತ ಸಂಶೋಧನೆ ನಡೆಸುತ್ತಿತ್ತು. ಈ ಯೋಜನೆಗೆ ಖ್ಯಾತ ವಿಜ್ಞಾನಿ ನೇತೃತ್ವ ವಹಿಸಿದ್ದರು. ಕಿಗೋಶಿ ಅವರೂ ಆ ಸಂಶೋಧನಾ ತಂಡದ ಸದಸ್ಯರಾಗಿದ್ದರು. ಆದರೆ ಯಮಗತಾದಲ್ಲಿ ಕಿಗೋಶಿ ನಡೆಸಿದ ಸಂಶೋಧನೆ ನೇರವಾಗಿ ಅಣುಬಾಂಬ್‌ ಅಭಿವೃದ್ಧಿಗೆ ಸಂಬಂಧಿಸಿತ್ತು ಎಂಬುದಕ್ಕೆ ಯಾವುದೇ ಪುರಾವೆ ದೊರೆತಿಲ್ಲ.

ಯುದ್ಧದ ಅಂತ್ಯದ ಬಳಿಕ ರಿಕೆನ್‌ ಸಂಸ್ಥೆಯ ಅಣುಬಾಂಬ್‌ ಯೋಜನೆಯೂ ಸ್ಥಗಿತಗೊಂಡಿತ್ತು.
ಈ ಕುರಿತು ಅಧ್ಯಯನ ನಡೆಸಿದ ಯಮಗತಾ ವಿಶ್ವವಿದ್ಯಾನಿಲಯದ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಮಾತನಾಡಿ, ಕಿಗೋಶಿ ಅವರ ಪ್ರಯೋಗಗಳ ಉದ್ದೇಶ ಇನ್ನೂ ಸ್ಪಷ್ಟವಾಗಿಲ್ಲ. ಆದರೆ ವಿಶ್ವವಿದ್ಯಾನಿಲಯದಲ್ಲಿ ಯುರೇನಿಯಂ ಕುರಿತ ಸಂಶೋಧನೆ ನಡೆದಿರುವ ಸಾಧ್ಯತೆಯನ್ನು ದೃಢಪಡಿಸುವ ಭೌತಿಕ ಸಾಕ್ಷ್ಯ ಇದೀಗ ಲಭ್ಯವಾಗಿದೆ ಎಂದು ತಿಳಿಸಿದ್ದಾರೆ.

ಇಂದು ಯುರೇನಿಯಂ ಸಂಶೋಧನೆ ಎಂಬ ಪದ ನಕಾರಾತಕ ಅರ್ಥವನ್ನು ನೀಡಬಹುದು. ಆದರೆ ಆ ಕಾಲಘಟ್ಟದಲ್ಲಿ ಅದು ಅತ್ಯಾಧುನಿಕ ವೈಜ್ಞಾನಿಕ ತಂತ್ರಜ್ಞಾನವಾಗಿತ್ತು. ಆ ಸಂಶೋಧನೆಯೇ ವಿಶ್ವವಿದ್ಯಾಲಯದಲ್ಲಿ ಕಿರಣೋತ್ಪಾದನ ವಿಜ್ಞಾನದ ಬೆಳವಣಿಗೆಗೆ ಅಡಿಪಾಯ ಹಾಕಿದ್ದು, ನಂತರ ಕ್ಯಾನ್ಸರ್‌ ಚಿಕಿತ್ಸೆಗೆ ಬಳಸಲಾಗುತ್ತಿರುವ ಆಧುನಿಕ ಸಂಶೋಧನಾ ಕೇಂದ್ರಗಳ ಸ್ಥಾಪನೆಗೂ ಕಾರಣವಾಗಿದೆ ಎಂದು ಅವರು ಹೇಳಿದ್ದಾರೆ.

RELATED ARTICLES

Latest News