Homeರಾಷ್ಟ್ರೀಯಮೋದಿ ಸರ್ಕಾರಕ್ಕೆ ದೊಡ್ಡ ತಲೆನೋವಾದ ಇ-20 ಪೆಟ್ರೋಲ್‌

ಮೋದಿ ಸರ್ಕಾರಕ್ಕೆ ದೊಡ್ಡ ತಲೆನೋವಾದ ಇ-20 ಪೆಟ್ರೋಲ್‌

Govt seeks to contain backlash against mandatory E20 petrol rollout

ನವದೆಹಲಿ, ಜು. 5- ಪೆಟ್ರೋಲ್‌ನಲ್ಲಿ ಕಡ್ಡಾಯವಾಗಿ ಶೇ. 20ರಷ್ಟು ಎಥನಾಲ್‌ (ಇ-20) ಮಿಶ್ರಣವನ್ನು ಬಳಸುವ ಕೇಂದ್ರ ಸರ್ಕಾರದ ನೀತಿಯ ವಿರುದ್ಧ ದೇಶಾದ್ಯಂತ ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ, ಈ ವಿವಾದವನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಮುಂದಾಗಿದೆ.

ಇಂಧನ ದಕ್ಷತೆ ಕುಸಿತ, ವಾಹನಗಳ ಕಾರ್ಯಕ್ಷಮತೆ ಕಡಿಮೆಯಾಗುತ್ತಿರುವ ಆರೋಪಗಳ ನಡುವೆ ದೆಹಲಿಯಲ್ಲಿ ಪ್ರತಿಭಟನೆ ನಡೆಸಲು ಸಿದ್ಧತೆ ನಡೆಯುತ್ತಿದೆ.ಕಳೆದ ವರ್ಷದಿಂದ ಜಾರಿಗೆ ಬಂದಿರುವ ಇ-20 ಇಂಧನ ನೀತಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ರಾಜಕೀಯವಾಗಿ ದೊಡ್ಡ ಸವಾಲಾಗಿ ಪರಿಣಮಿಸಿದೆ. ವಿಶ್ವದ ಮೂರನೇ ಅತಿದೊಡ್ಡ ವಾಹನ ಮಾರುಕಟ್ಟೆಯಾಗಿರುವ ಭಾರತದಲ್ಲಿ ವಾಹನ ಸವಾರರು ಈ ನೀತಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಈ ವಿವಾದ ಮತ್ತಷ್ಟು ತೀವ್ರಗೊಂಡಿದ್ದು, ಸುಪ್ರೀಂಕೋರ್ಟ್‌ನಲ್ಲಿ ನಡೆದ ವಿಚಾರಣೆಯ ವೇಳೆ ಅಟಾರ್ನಿ ಜನರಲ್‌ ಆರ್‌. ವೆಂಕಟರಮಣಿ ಅವರು ಇ-20 ಯೋಜನೆಯನ್ನು ಪ್ರಯೋಗ ಎಂದು ಉಲ್ಲೇಖಿಸಿದ್ದಾರೆಂಬ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆದ ಬಳಿಕ. ಈ ಹೇಳಿಕೆಯನ್ನು ಸರ್ಕಾರ ತಳ್ಳಿಹಾಕಿದ್ದರೂ, ನ್ಯಾಯಾಲಯದ ವಿಚಾರಣೆಯ ವಿಡಿಯೋ ವ್ಯಾಪಕವಾಗಿ ಹರಿದಾಡುತ್ತಿದೆ.

ಈ ಕುರಿತು ಪ್ರತಿಕ್ರಿಯಿಸಿದ ಆರ್‌. ವೆಂಕಟರಮಣಿ, ತಾವು ಪ್ರಯೋಗ ಎಂಬ ಪದವನ್ನು ಎಥನಾಲ್‌ ಲಭ್ಯತೆಯ ಪ್ರಮಾಣದ ಕುರಿತು ಬಳಸಿದ್ದು, ಎಥನಾಲ್‌ ಮಿಶ್ರಿತ ಪೆಟ್ರೋಲ್‌ ನೀತಿಯನ್ನು ಉದ್ದೇಶಿಸಿ ಹೇಳಿಲ್ಲ ಎಂದು ಸುದ್ದಿಸಂಸ್ಥೆಗೆ ಸ್ಪಷ್ಟಪಡಿಸಿದ್ದಾರೆ.

ಆದಾಗ್ಯೂ, ಸರ್ಕಾರದ ಸ್ಪಷ್ಟೀಕರಣ ಸಾರ್ವಜನಿಕರ ಆಕ್ರೋಶವನ್ನು ತಣಿಸುವಲ್ಲಿ ಯಶಸ್ವಿಯಾಗಿಲ್ಲ. ಸರ್ಕಾರ ಯಾವುದೇ ಸಮರ್ಪಕ ಸಿದ್ಧತೆ ಇಲ್ಲದೆ ಈ ನೀತಿಯನ್ನು ಜಾರಿಗೆ ತಂದಿದೆ ಎಂದು ವಿರೋಧಿಗಳು ಆರೋಪಿಸಿದ್ದಾರೆ.ಕೇಂದ್ರ ಸರ್ಕಾರದ ಪಿಐಬಿ ಈ ಆರೋಪಗಳನ್ನು ಆಧಾರರಹಿತ ಮತ್ತು ಅತಿರಂಜಿತ ಹೇಳಿಕೆಗಳು ಎಂದು ತಳ್ಳಿಹಾಕಿದ್ದು, ಜನರು ಪ್ರಚೋದನಾಕಾರಿ ಸುಳ್ಳು ಆರೋಪಕ್ಕೆ ಬಲಿಯಾಗಬಾರದು ಎಂದು ಮನವಿ ಮಾಡಿದೆ.

ಇದೇ ವೇಳೆ ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್‌ ಸಿಂಗ್‌ ಪುರಿ, ಎಥನಾಲ್‌ ಮಿಶ್ರಿತ ಇಂಧನವನ್ನು ರೇಸಿಂಗ್‌ ಕಾರುಗಳಲ್ಲಿಯೂ ಬಳಸಲಾಗುತ್ತದೆ. ಇದರಿಂದ ವಾಹನದ ವೇಗವರ್ಧನೆ ಹೆಚ್ಚಾಗುತ್ತದೆ. ಆದರೆ ಮೈಲೇಜ್‌ನಲ್ಲಿ ಸ್ವಲ್ಪ ಇಳಿಕೆಯಾಗಬಹುದು ಎಂದು ಸಮರ್ಥಿಸಿಕೊಂಡಿದ್ದಾರೆ.

ದೆಹಲಿಯಲ್ಲಿ ಪ್ರತಿಭಟನೆಗೆ ಕರೆ:
ನವದೆಹಲಿ ಮೂಲದ ಸಾಮಾಜಿಕ ಕಾರ್ಯಕರ್ತ ಹಾಗೂ ಕಾಂಗ್ರೆಸ್‌‍ ಬೆಂಬಲಿಗ ತೆಹ್ಸೀನ್‌ ಪೂನಾವಾಲಾ ಅವರು, ಇ-20 ನೀತಿಯ ವಿರುದ್ಧ ಇಂದು ದೆಹಲಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಪೆಟ್ರೋಲ್‌ ಬಂಕ್‌ಗಳಲ್ಲಿ ಸಾಮಾನ್ಯ ಪೆಟ್ರೋಲ್‌ ಆಯ್ಕೆಯಿಲ್ಲದಿರುವುದರಿಂದ ಅನೇಕ ವಾಹನ ಸವಾರರು ಅಸಮಾಧಾನ ವ್ಯಕ್ತಪಡಿಸುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.

ಕಾಂಗ್ರೆಸ್‌‍ ಪಕ್ಷದ ಕರ್ನಾಟಕದ ಸಚಿವ ಪ್ರಿಯಾಂಕ್‌ ಖರ್ಗೆ, ಇ-20 ನೀತಿಯನ್ನು ಸಾರ್ವಜನಿಕರೊಂದಿಗೆ ಸಮಾಲೋಚನೆ ನಡೆಸದೆ ಜಾರಿಗೊಳಿಸಲಾಗಿದೆ ಎಂದು ಟೀಕಿಸಿದ್ದಾರೆ. ಸರ್ಕಾರದ ಸ್ವಂತ ಅಧ್ಯಯನದ ಫಲಿತಾಂಶವೇ ಇನ್ನೂ ಬಾಕಿ ಇರುವಾಗ, ತರಾತುರಿಯಲ್ಲಿ ಯಾಜನೆ ಜಾರಿಗೊಳಿಸುತ್ತಿರುವುದು ಸರಿಯಲ್ಲ ಎಂದಿದ್ದಾರೆ.

ನೂರಾರು ವಾಹನ ಸವಾರರು ಇ-20 ಇಂಧನ ಬಳಕೆಯಿಂದ ವಾಹನಗಳ ಮೈಲೇಜ್‌ ಕಡಿಮೆಯಾಗಿದೆ ಹಾಗೂ ಎಂಜಿನ್‌ ಮತ್ತು ಇತರೆ ಬಿಡಿಭಾಗಗಳಲ್ಲಿ ಹಾನಿ ಉಂಟಾಗಿದೆ ಎಂದು ಆರೋಪಿಸಿ ಸಾಮಾಜಿಕ ಜಾಲತಾಣಗಳಲ್ಲಿ ದೂರುಗಳನ್ನು ಹಂಚಿಕೊಂಡಿದ್ದಾರೆ.

ಅವುಗಳಲ್ಲಿ ಹೆಚ್ಚು ಗಮನ ಸೆಳೆದಿರುವ ವಿಡಿಯೋವೊಂದರಲ್ಲಿ, ಮನೀಷ್‌ ಕಶ್ಯಪ್‌ ಎಂಬ ವಾಹನ ಮಾಲೀಕರು ತಮ ಕಾರು ಇ-20 ಇಂಧನ ಬಳಕೆಯಿಂದ ಹಾನಿಗೊಳಗಾಗಿದ್ದು, ಕೇವಲ ಎರಡು ತಿಂಗಳಲ್ಲೇ ದುರಸ್ತಿಗೆ ಹೆಚ್ಚಿನ ಹಣ ಖರ್ಚು ಮಾಡಬೇಕಾಯಿತು ಎಂದು ಆರೋಪಿಸಿದ್ದಾರೆ. ಈ ಕಾರಿಗಾಗಿ ಸಾಕಷ್ಟು ಹಣ ಖರ್ಚು ಮಾಡಿದ್ದೇನೆ. ತೆರಿಗೆಯನ್ನೂ ಕಟ್ಟಿದ್ದೇನೆ. ಆದರೆ ಎರಡು ತಿಂಗಳಲ್ಲೇ ಕಾರು ಕೆಟ್ಟುಹೋಗಿದೆ, ಎಂದು ಅವರು ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

ಸರ್ಕಾರದ ಸಮರ್ಥನೆ:
ಕೇಂದ್ರ ಸರ್ಕಾರದ ಪ್ರಕಾರ, ಇ-20 ಇಂಧನ ಬಳಕೆಯಿಂದ ಕಾರ್ಬನ್‌ ಹೊರಸೂಸುವಿಕೆ ಕಡಿಮೆಯಾಗುತ್ತದೆ, ಕಚ್ಚಾ ತೈಲದ ಆಮದು ಇಳಿಕೆಯಾಗುವುದರಿಂದ ವಿದೇಶಿ ವಿನಿಮಯ ಉಳಿತಾಯವಾಗುತ್ತದೆ ಹಾಗೂ ಎಥನಾಲ್‌ ಉತ್ಪಾದನೆಗೆ ಬಳಸುವ ಕೃಷಿ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚುವ ಮೂಲಕ ರೈತರ ಆದಾಯಕ್ಕೂ ನೆರವಾಗುತ್ತದೆ ಎಂದು ಸಮರ್ಥಿಸಿಕೊಂಡಿದೆ.

RELATED ARTICLES
spot_img

Latest News