ಬೆಂಗಳೂರು,ಜು.6- ರಾಜ್ಯಾದ್ಯಂತ ಕಳೆದ ಐದು ದಿನಗಳಿಂದ ನಡೆದಿರುವ ಮತದಾರರ ಪಟ್ಟಿ ಪರಿಷ್ಕರಣೆ(ಎಸ್‌ಐಆರ್) ಯಲ್ಲಿ ಸಾಕಷ್ಟು ಅಕ್ರಮಗಳು ನಡೆದಿದ್ದು, ಕೂಡಲೇ ತನಿಖೆ ನಡೆಸಿ, ಇದಕ್ಕೆ ಕಾರಣೀಭೂತರಾದ ಬಿಎಲ್‌ಒ ಮತ್ತು ಪ್ರಭಾವ ಬೀರಿದ ರಾಜಕಾರಣಿಗಳ ಮೇಲೆ ನಿರ್ದಾಕ್ಷಿಣ್ಯಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಬಿಜೆಪಿ -ಜೆಡಿಎಸ್ ನೇತೃತ್ವದ ನಿಯೋಗ ಮುಖ್ಯ ಚುನಾವಣಾಧಿಕಾರಿಗೆ ದೂರು ನೀಡಿದೆ.
ರಾಜ್ಯ ಮುಖ್ಯ ಚುನಾ ವಣಾಧಿಕಾರಿಗೆ ಅನ್ಬುಕುಮಾರ್ ಅವರಿಗೆ ಕೇಂದ್ರ ಸಚಿವರಾದ ಎಚ್.ಡಿ.ಕುಮಾರಸ್ವಾಮಿ, ಪ್ರಹ್ಲಾದ್ ಜೋಶಿ, ಶೋಭಾ ಕರಂದ್ಲಾಜೆ, ವಿಧಾನಸಭೆ ವಿರೋಧಪಕ್ಷದ ನಾಯಕ ಆರ್.ಅಶೋಕ್, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸಿ.ಬಿ.ಸುರೇಶ್‌ಬಾಬು, ಸಂಸದರಾದ ಮಲ್ಲೇಶ್ ಬಾಬು, ಗೋವಿಂದ ಕಾರಜೋಳ, ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಸೇರಿದಂತೆ ಎನ್‌ಡಿಎ ನಾಯಕರು ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್ ಅವರಿಗೆ ದೂರು ನೀಡಿದ್ದಾರೆ.
ಎರಡು ಪುಟಗಳ ಪತ್ರದಲ್ಲಿ ಕಳೆದ ಐದು ದಿನಗಳಿಂದ ರಾಜ್ಯಾದ್ಯಂತ ನಡೆಯುತ್ತಿರುವ ಎಸ್‌ಐಆರ್ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಗಾಳಿ ತೂರಿ ನಿಯಮಬದ್ಧವಾಗಿ ನಡೆಸದೆ ಮನಸೋ ಇಚ್ಛೆ ಎಲ್ಲೆಂದರಲ್ಲಿ ಅರ್ಜಿಗಳನ್ನು ಬಿಎಲ್‌ಒ ಅಧಿಕಾರಿಗಳು ಭರ್ತಿ ಮಾಡಿಕೊಳ್ಳುತ್ತಿದ್ದಾರೆ ಎಂದು ದೂರಿದ್ದಾರೆ.
ಕರ್ನಾಟಕ ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ಭಾರೀ ಅಕ್ರಮಗಳು ನಡೆದಿರುವುದು ಪ್ರಜಾಪ್ರಭುತ್ವದ ಮೂಲ ಆಶಯಕ್ಕೆ ಧಕ್ಕೆ ತಂದಿದೆ. ಇದು ನಿಷ್ಪಕ್ಷಪಾತವಾಗಿ ನಡೆಯದೆ ಒಂದು ಪಕ್ಷದ ಪರವಾಗಿ ನಡೆಯುತ್ತಿದೆ ಎಂದು ಉಭಯ ಪಕ್ಷಗಳ ನಾಯಕರು ಆರೋಪಿಸಿದ್ದಾರೆ.
ಎಸ್‌ಐಆರ್ ಮಾರ್ಗಸೂಚಿಗಳಡಿ ಜಿಲ್ಲಾ ಚುನಾವಣಾ ಅಧಿಕಾರಿಗಳ ನಿರ್ದೇಶನದಂತೆ ಬೂತ್ ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಮನೆ-ಮನೆಗೆ ಹೋಗಿ ಪರಿಶೀಲನೆ ನಡೆಸಬೇಕು. ಪ್ರತಿ ಮನೆಯ ಸದಸ್ಯರ ಗುರುತನ್ನು ವೈಯಕ್ತಿಕವಾಗಿ ಪರಿಶೀಲಿಸಬೇಕು. ಆದರೆ ಈ ನಿಯಮವನ್ನು ಪಾಲನೆ ಮಾಡದೆ ಗಾಳಿಗೆ ತೂರಲಾಗಿದೆ.
ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ಲಾಗಿರುವ ವಿಡಿಯೋಗಳೇ ಸಾಕ್ಷಾಧಾರಗಳನ್ನು ಒದಗಿಸುತ್ತದೆ. ಇವೆಲ್ಲವೂ ಸ್ಪಷ್ಟವಾಗಿ ಸಾರ್ವಜನಿಕ ವಲಯದಲ್ಲಿವೆ. ರಾಜ್ಯದ ಹಲವಾರು ಇತರ ಭಾಗಗಳಿಂದಲೂ ಇದೇ ರೀತಿಯ ಹಲವಾರು ದೂರುಗಳು ಬಂದಿವೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಬಿಎಲ್‌ಒಗಳು ಸಮುದಾಯ ಭವನಗಳು, ಮಸೀದಿಗಳು ಮತ್ತು ಬಿಎಲ್‌ಒಗಳ ನಿವಾಸಗಳಲ್ಲಿ ಕುಳಿತು ಗಣತಿ ನಮೂನೆಗಳನ್ನು ಭರ್ತಿ ಮಾಡಿಸುತ್ತಿದ್ದಾರೆ. ಇದೇ ಉದ್ದೇಶಕ್ಕಾಗಿ ವಾಟ್ಸಾಪ್ ಗುಂಪುಗಳನ್ನು ಸಹ ರಚಿಸಲಾಗಿದೆ ಮತ್ತು ಎಸ್‌ಐಆರ್ ಪ್ರಕ್ರಿಯೆಗಾಗಿ ಈ ಸಮುದಾಯ ಭವನ, ಮಸೀದಿಗಳಿಗೆ ಭೇಟಿ ನೀಡುವಂತೆ ಜನರನ್ನು ಪ್ರೋತ್ಸಾಹಿಸಲಾಗುತ್ತಿದೆ.
ಇಂತಹ ಪದ್ಧತಿಯು ಸ್ಥಾಪಿತ ಎಸ್‌ಐಆರ್ ಮಾರ್ಗಸೂಚಿಗಳ ಉಲ್ಲಂಘನೆಯಾಗಿದೆ. ಚುನಾವಣಾ ಪ್ರಕ್ರಿಯೆಯ ತಟಸ್ಥತೆ ಮತ್ತು ಜಾತ್ಯತೀತ ಸ್ವಭಾವದ ಬಗ್ಗೆ ಗಂಭೀರ ಕಳವಳಗಳನ್ನು ಹುಟ್ಟುಹಾಕುತ್ತದೆ. ಮತದಾರರ ಪಟ್ಟಿಯ ಸಮಗ್ರತೆಯನ್ನು ಬಲಪಡಿಸಲು ಎಸ್‌ಐಆರ್ ನಡೆಸಲಾಗುತ್ತದೆ. ಆದರೆ ಬಿಎಲ್‌ಒಗಳ ನಡೆಸುತ್ತಿರುವ ಈ ಪ್ರಕ್ರಿಯೆ ವಿಧಾನವು ಪರಿಷ್ಕರಣೆಯ ಉದ್ದೇಶವನ್ನೇ ಹಾಳುಗೆಡುತ್ತದೆ ಎಂದು ದೂರಿದ್ದಾರೆ.
ಸಮರ್ಥನೀಯವಲ್ಲದ ಮತ್ತು ವಿಶ್ವಾಸಾರ್ಹವಲ್ಲದ ಮತದಾರರ ಪಟ್ಟಿಯನ್ನು ಸೃಷ್ಟಿಸಲಿದೆ. ಈ ಅಕ್ರಮಗಳ ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು, ಎನ್‌ಡಿಎ ಮೈತ್ರಿಕೂಟದ ಪಾಲುದಾರರಾದ ನಾವು, ತಕ್ಷಣದ ತನಿಖೆಗೆ ಆದೇಶಿಸಲು ಮತ್ತು ಕಡ್ಡಾಯವಾಗಿ ಮನೆ-ಮನೆ ಪರಿಶೀಲನೆಯ ಮೂಲಕ ಎಲ್ಲಾ ಎಣಿಕೆ ನಮೂನೆಗಳ ಮರು-ಪರಿಶೀಲನೆಗೆ ನಿರ್ದೇಶಿಸಲು ಒತ್ತಾಯಿಸಿದ್ದಾರೆ.
ಈ ಅಕ್ರಮಗಳಿಗೆ ಕಾರಣರಾದ ಎಲ್ಲಾ ಅಧಿಕಾರಿಗಳು ಮತ್ತು ರಾಜಕೀಯ ಕಾರ್ಯಕರ್ತರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ನಿಯೋಗ ಮುಖ್ಯ ಚುನಾವಣಾಧಿಕಾರಿಗಳಿಗೆ ನೀಡಿರುವ ದೂರಿನಲ್ಲಿ ಮನವರಿಕೆ ಮಾಡಿದೆ.
