ಬೆಂಗಳೂರು,ಫೆ.6- ಕೇಂದ್ರಸರ್ಕಾರದಿಂದ ರಾಜ್ಯಕ್ಕಾಗುತ್ತಿರುವ ಆರ್ಥಿಕ ಅನುದಾನ ವಿರೋಧಿಸಿ ನಾಳೆ ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಎಲ್ಲಾ ಸಂಸದರು, ರಾಜ್ಯಸಭಾ ಸದಸ್ಯರು, ಕೇಂದ್ರ ಸಚಿವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ, ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ, ಪ್ರಹ್ಲಾದ್ ಜೋಶಿ, ಭಗವಂತ್ ಖೂಬಾ, ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾಗಿ ಕೇಂದ್ರ ಸಚಿವರಾಗಿರುವ ನಿರ್ಮಲಾ ಸೀತಾರಾಮನ್, ರಾಜೀವ್ ಚಂದ್ರಶೇಖರ್, ಕಾಂಗ್ರೆಸ್‍ನ ರಾಜ್ಯಸಭಾ ಸದಸ್ಯರು, ಸಂಸದರು, ಜೆಡಿಎಸ್‍ನ ಸದಸ್ಯ ಪ್ರಜ್ವಲ್ ರೇವಣ್ಣ, ಪಕ್ಷೇತರ ಸದಸ್ಯರಾದ ಸುಮಲತಾ ಹಾಗೂ ಬಿಜೆಪಿಯ ಎಲ್ಲಾ ಸಂಸದರಿಗೂ ಸಿದ್ದರಾಮಯ್ಯ ಖುದ್ದು ಸಹಿ ಮಾಡಿರುವ ಪತ್ರ ರವಾನಿಸಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಲಾಗಿದೆ.
ಒಂದು ವಿಶೇಷ ಸಂದರ್ಭದಲ್ಲಿ ಈ ಪತ್ರವನ್ನು ತಮಗೆ ಬರೆಯುತ್ತಿದ್ದೇನೆ. ಕೇಂದ್ರ ಸರ್ಕಾರದಿಂದ ಆಗುತ್ತಿರುವ ನಿರಂತರ ಅನ್ಯಾಯ ಮತ್ತು ಕರ್ನಾಟಕದ ವಿಚಾರವಾಗಿ ಕೇಂದ್ರ ಸರ್ಕಾರ ತೋರಿಸುತ್ತಿರುವ ಮಲತಾಯಿ ಧೋರಣೆಯು ತಮಗೆ ಈಗಾಗಲೇ ತಿಳಿದ ವಿಷಯವಾಗಿ. ಇದರ ವಿರುದ್ಧ ಪ್ರತಿಭಟಿಸಲು ಮತ್ತು ದೇಶದ ಗಮನ ಸೆಳೆಯಲು ತೀರ್ಮಾನಿಸಲಾಗಿದೆ ಎಂದಿದ್ದಾರೆ.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಸಂಪುಟದ ಎಲ್ಲಾ ಸಚಿವರು, ಶಾಸಕರು ಮತ್ತು ಸಂಸದರು ಸೇರಿ ಫೆ.7 ರಂದು ದೆಹಲಿಯ ಜಂತರ್ ಮಂತರ್‍ನಲ್ಲಿ ಒಂದು ದಿನದ ಧರಣಿ ಸತ್ಯಾಗ್ರಹ ನಡೆಸಲು ತೀರ್ಮಾನಿಸಲಾಗಿದೆ ಎಂದು ವಿವರಿಸಿದ್ದಾರೆ.
ಕೇಜ್ರಿವಾಲ್ ಆಪ್ತ, ರಾಜ್ಯಸಭಾ ಸದಸ್ಯ ಸೇರಿ ಹಲವರ ಮನೆಗಳ ಮೇಲೆ ಇಡಿ ರೇಡ್
ಕರ್ನಾಟಕಕ್ಕೆ ತೆರಿಗೆ ಪಾಲಿನ ಹಂಚಿಕೆಯಲ್ಲಿ ಆಗುತ್ತಿರುವ ಭಾರೀ ಅನ್ಯಾಯ, ಬರ ಪರಿಹಾರ ನೀಡದೇ ಇರುವುದು, ವಿವಿಧ ಯೋಜನೆಗಳಿಗೆ ಅನುಮತಿ ಮತ್ತು ನೆರವು ನೀಡುವಲ್ಲಿ ತೋರಿಸುತ್ತಿರುವ ನಿರ್ಲಕ್ಷ್ಯ, ವಿಳಂಬ ಇತ್ಯಾದಿಗಳು ರಾಜ್ಯದಲ್ಲಿ ಜನ ಜೀವನವನ್ನು ವಿಪರೀತವಾಗಿ ಬಾಸುತ್ತಿದೆ. ಈ ವಿಚಾರವನ್ನು ಜವಾಬ್ದಾರಿಯುತವಾದ ಚುನಾಯಿತ ಪ್ರತಿನಿಗಳಾದ ತಾವು ಅರಿತುಕೊಂಡಿದ್ದೀರಾ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ರಾಜ್ಯಕ್ಕಾಗಿ ನಡೆಯುತ್ತಿರುವ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಅದರ ಯಶಸ್ಸಿಗೆ ಸಹಕರಿಸಬೇಕು ಎಂದು ಎಲ್ಲಾ ಸಂಸದರಿಗೂ, ರಾಜ್ಯದಿಂದ ಆಯ್ಕೆಯಾಗಿರುವ ಕೇಂದ್ರ ಸಚಿವರಿಗೂ ಪತ್ರಮುಖೇನ ಮನವಿ ಮಾಡಿದ್ದಾರೆ.