ಬೆಂಗಳೂರು,ಜು.11- ಕೆಆರ್ಪುರದಲ್ಲಿ ನಡೆದಿದ್ದ ಒಂದೇ ಕುಟುಂಬದ ತ್ರಿವಳಿ ಕೊಲೆ ಮಾಸುವ ಮುನ್ನವೇ ಬೆಳ್ಳಂಬೆಳಗ್ಗೆ ಅಂತಹದೇ ರೀತಿಯ ಮತ್ತೊಂದು ತ್ರಿವಳಿ ಕೊಲೆ ನಗರದಲ್ಲಿ ನಡೆದಿದೆ. ಹೆತ್ತ ತಾಯಿ ಹಾಗೂ ಅಜ್ಜಿ ಮತ್ತು ಸೋದರ ಮಾವನನ್ನು ಮಚ್ಚಿನಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಿದ ಮನೆಮಗ ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕೊಟ್ಟಿಗೆ ಪಾಳ್ಯದ ಐಯ್ಯಪ್ಪಸ್ವಾಮಿ ದೇವಸ್ಥಾನ ಸಮೀಪದ ನಿವಾಸಿಗಳಾದ ಮಂಗಳಮ (55), ಮಂಜಮ (75), ಸೋದರಮಾವ ಸತೀಶ್ (50) ಕೊಲೆಯಾದ ದುರ್ದೈವಿಗಳು. ಈ ಮೂವರನ್ನು ಕೊಂದು ಚಾಲಕ ಪ್ರಶಾಂತ್ (34) ಮನೆಯಲ್ಲಿ ಆತಹತ್ಯೆಗೆ ಶರಣಾಗಿದ್ದಾನೆ. ಹಾಗಾಗಿ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದಾರೆ.
ಮೂಲತಃ ಮಾಗಡಿ ತಾಲ್ಲೂಕಿನ ಯಡಿಯೂರು ಹೋಬಳಿಯ ಬ್ಯಾಲದಕೆರೆ ಗ್ರಾಮದ ಈ ಕುಟುಂಬ ಕಳೆದ ಏಳೆಂಟು ವರ್ಷಗಳಿಂದ ಕೊಟ್ಟಿಗೆ ಪಾಳ್ಯದಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಾಗಿದ್ದರು. ಕಾರು ಚಾಲಕ ವೃತ್ತಿ ಮಾಡುತ್ತಿದ್ದ ಆರೋಪಿ ಪ್ರಶಾಂತ್ಗೆ ಮದುವೆಯಾಗಿರಲಿಲ್ಲ. ಈತನ ತಾಯಿ ಮಂಗಳಮ ಗಾರ್ಮೆಂಟ್ಸ್ ಗೆ ಹೋಗುತ್ತಿದ್ದರು. ಅಜ್ಜಿ ನಂಜಮ ಸ್ವೀಪರ್ ಕೆಲಸ ಹಾಗೂ ಸೋದರ ಮಾವ ಪ್ಲಂಬರ್ ಕೆಲಸ ಮಾಡಿಕೊಂಡಿದ್ದರು. ಮನೆಯ ಯಜಮಾನ ಚಿಕ್ಕಣ್ಣ ಇಸ್ತ್ರಿ ಪೆಟ್ಟಿಗೆ ಅಂಗಡಿ ಇಟ್ಟುಕೊಂಡಿದ್ದು, ಇಂದು ಬೆಳಗ್ಗೆ 6 ಗಂಟೆಗೆ ಎದ್ದು ಅಂಗಡಿಗೆ ಹೋಗಿದ್ದಾರೆ.
ಇಂದು ಬೆಳಗ್ಗೆ 7.30 ರ ಸುಮಾರಿನಲ್ಲಿ ಪ್ರಶಾಂತ್ ಮನೆಯಲ್ಲಿ ಯಾವುದೋ ವಿಚಾರಕ್ಕೆ ಜಗಳವಾಗಿದೆ. ಜಗಳ ವಿಕೋಪಕ್ಕೆ ತಿರುಗಿದಾಗ ಪ್ರಶಾಂತ್ ಮಚ್ಚಿನಿಂದ ಮೊದಲು ಒಬ್ಬರ ಮೇಲೆ ಹಲ್ಲೆ ನಡೆಸಿದಾಗ ಅದನ್ನು ತಡೆಯಲು ಬಂದ ಮತ್ತೊಬ್ಬರ ಮೇಲೂ ಮಚ್ಚಿನಿಂದ ಹೊಡೆದಿದ್ದು, ಸೋದರ ಮಾವ ರೂಮ್ನಿಂದ ಹೊರಗೆ ಬರುತ್ತಿದ್ದಂತೆ ಅವರ ಮೇಲೂ ದಾಳಿ ಮಾಡಿದ್ದು, ಹೀಗೆ ಒಬ್ಬೊಬ್ಬರಂತೆ ಮೂವರನ್ನು ಮನಬಂದಂತೆ ಕೊಚ್ಚಿ ಭೀಕರವಾಗಿ ಕೊಲೆ ಮಾಡಿದ್ದಾನೆ.
ತಾಯಿ ಹಾಗೂ ಅಜ್ಜಿ ಮನೆ ಹೊಸಲಿನ ಬಳಿಯೇ ಬಿದ್ದು ಸಾವನ್ನಪ್ಪಿದ್ದರೇ, ಮಾವ ರೂಮಿನ ಬಾಗಿಲ ಬಳಿ ಕೊಲೆಯಾಗಿದ್ದಾರೆ.ಮಂಜಮ ಅವರ ಮುಖ ಗುರುತು ಸಿಗದಂತೆ ಕೊಚ್ಚಿರುವುದು ಕಂಡು ಬಂದಿದೆ.
ಮನೆಯ ಮೂವರನ್ನು ಕೊಲೆ ಮಾಡಿದ ನಂತರ ಮನೆಯಿಂದ ಹೊರಗೆ ಹೋಗಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಆ ವೇಳೆ ಇವರ ಮನೆಯಲ್ಲಿ ಜೋರು ಗಲಾಟೆಯಾಗುತ್ತಿರುವುದನ್ನು ಗಮನಿಸಿದ ಮನೆ ಮಾಲೀಕ ಹಾಗೂ ನೆರೆಹೊರೆಯವರು ಇವರ ಮನೆ ಬಳಿ ಬರುತ್ತಿರುವುದನ್ನು ನೋಡಿದ ಆರೋಪಿ ಪ್ರಶಾಂತ್ ತಾನು ಸಿಕ್ಕಿಹಾಕಿಕೊಳ್ಳುವ ಭಯದಲ್ಲಿ ರೂಮ್ಗೆ ಹೋಗಿ ಬಾಗಿಲು ಸೀರೆಯಿಂದ ನೇಣು ಬಿಗಿದುಕೊಂಡು ಆತಹತ್ಯೆಗೆ ಶರಣಾಗಿದ್ದಾನೆ.
ಸುದ್ದಿ ತಿಳಿದು ಪೊಲೀಸರು ಘಟನಾ ಸ್ಥಳಕ್ಕೆ ದಾವಿಸಿ ನೋಡಿದಾಗ ಆರೋಪಿ ಪ್ರಶಾಂತ್ ನೇಣು ಬಿಗಿದುಕೊಂಡು ಆತಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ. ಈ ಘಟನೆಯಿಂದ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.ರಾತ್ರಿ ಮಾತನಾಡಿದವರು ಬೆಳಗಾಗುವಷ್ಟರಲ್ಲಿ ಮನೆ ಮಗನಿಂದಲೇ ಕೊಲೆಯಾದರಲ್ಲಾ ಎಂದು ಸ್ಥಳೀಯರು ಮಮಲ ಮರುಗಿದ್ದಾರೆ.
ಯಾವ ಕಾರಣಕ್ಕಾಗಿ ಪ್ರಶಾಂತ್ ಈ ಮೂವರನ್ನು ಕೊಲೆ ಮಾಡಿ ಆತಹತ್ಯೆ ಮಾಡಿಕೊಂಡ ಎಂಬುವುದು ನಿಗೂಢವಾಗಿದೆ.ಕೌಟುಂಬಿಕ ಕಲಹದಲ್ಲಿ ಈ ಭೀಕರ ಘಟನೆ ನಡೆದಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.ಪೊಲೀಸರು ಮನೆಯನ್ನೆಲ್ಲಾ ಪರಿಶೀಲನೆ ನಡೆಸಿದ್ದಾರೆ. ನಾಲ್ವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.
ಈ ಬಗ್ಗೆ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ಮಾಹಿತಿಗಳನ್ನು ಕಲೆಹಾಕುತ್ತಿದ್ದಾರೆ.ಸ್ಥಳಕ್ಕೆ ಎಫ್ಎಸ್ಎಲ್ ತಂಡ ಹಾಗೂ ಬೆರಳಚ್ಚರು ಹಾಗೂ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ತ್ರಿವಳಿ ಕೊಲೆಗೆ ಕಾರಣದ ಬಗ್ಗೆ ತನಿಖೆ : ಡಿಸಿಪಿ ಯತೀಶ್
ಕುಟುಂಬದ ಮೂವರನ್ನು ಯಾಕೆ ಕೊಲೆ ಮಾಡಿ ಆತ ಆತಹತ್ಯೆ ಮಾಡಿಕೊಂಡ ಎಂಬುವುದರ ಬಗ್ಗೆ ತನಿಖೆ ಮಾಡಲಾಗುತ್ತಿದೆ ಎಂದು ಪಶ್ಚಿಮ ವಿಭಾಗ ಡಿಸಿಪಿ ಯತೀಶ್ ಹೇಳಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಬೆಳಗ್ಗೆ 8.30ರ ಸುಮಾರಿಗೆ ಕೊಟ್ಟಿಗೆಪಾಳ್ಯದ ಒಂದೇ ಮನೆಯಲ್ಲಿ ನಾಲ್ಕು ಮಂದಿ ಸಾವನ್ನಪ್ಪಿದ್ದಾರೆಂಬ ಮಾಹಿತಿ ಬಂತು. ಅವರಲ್ಲಿ ಮೂವರ ಕೊಲೆಯಾಗಿದ್ದು, ಒಬ್ಬರ ಆತಹತ್ಯೆಯಾಗಿದೆ. ಈ ಮಾಹಿತಿ ಆಧಾರದ ಮೇಲೆ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಲಾಯಿತು ಎಂದರು.
ಈ ಮನೆಯ ಯಜಮಾನ ಚಿಕ್ಕಣ್ಣ ಬೆಳಗ್ಗೆ 6 ಗಂಟೆಗೆ ಕೆಲಸಕ್ಕೆ ಹೋಗಿದ್ದಾರೆ. ಮನೆಯಲ್ಲಿ ಚಿಕ್ಕಣ್ಣವರ ಮಗ, ಹೆಂಡತಿ, ಅತ್ತೆ, ಮೈದುನ ಇದ್ದರು. ಚಿಕ್ಕಣ್ಣನವರ ಮನೆಯ ಮೇಲಿನ ಮನೆಯವರು ಹೇಳುವ ಪ್ರಕಾರ ಇವರ ಮನೆಯಲ್ಲಿ ಶಬ್ದ ಕೇಳಿ ಕೆಳಗೆ ಬಂದಾಗ ಮನೆಯಲ್ಲಿ ಮೃತ ದೇಹಗಳನ್ನು ನೋಡಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ಪೊಲೀಸರು ಸ್ಥಳಕ್ಕೆ ಬಂದು ನೋಡಿದಾಗ ಮೂವರು ಕೊಲೆಯಾಗಿರುವುದು, ಈತ ಆತಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದೆ. ಮೂರು ದೇಹಗಳ ಮೇಲೆ ಮಚ್ಚಿನಿಂದ ಕೊಚ್ಚಿದ ಗಾಯಗಳು ಕಂಡುಬಂದಿವೆ ಎಂದು ವಿವರಣೆ ನೀಡಿದರು. ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಕೊಲೆಯ ನಿಖರ ಕಾರಣದ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅವರು ಸುದ್ದಿಗಾರರಿಗೆ ಹೇಳಿದರು.
