ನವದೆಹಲಿ, ಆ.25- ಭಾರತದ ಆರ್ಥಿಕ ಹಾಗೂ ತಂತ್ರಜ್ಞಾನ ಇತಿಹಾಸದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದಿರುವ ಏಕೀಕೃತ ಪಾವತಿ ಇಂಟರ್ಫೇಸ್ (ಯುಪಿಐ) ಯಶಸ್ವಿಯಾಗಿ 10 ವರ್ಷಗಳನ್ನು ಪೂರೈಸಿದೆ. ಈ ಮಹತ್ವದ ಮೈಲಿಗಲ್ಲು ಭಾರತದ ಡಿಜಿಟಲ್ ಪಾವತಿ ವ್ಯವಸ್ಥೆ ಹಾಗೂ ಆರ್ಥಿಕ ಸೇರ್ಪಡೆಯ ಬೆನ್ನೆಲುಬಾಗಿ ಯುಪಿಐ ಬೆಳೆದುಬಂದ ಹಾದಿಯನ್ನು ಸಾರುತ್ತದೆ. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಯುಪಿಐ ದಶಕದ ಸಂಭ್ರಮವನ್ನು ಆಚರಿಸಿ, ಅದರ ವ್ಯಾಪಕ ಬೆಳವಣಿಗೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ಯುಪಿಐ ಆರಂಭವಾಗಿ ಒಂದು ದಶಕ ಪೂರ್ಣಗೊಂಡಿರುವ ಕುರಿತು ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಒಂದು ದಶಕದ ಹಿಂದೆ ಜಾರಿಗೆ ಬಂದ ಯುಪಿಐ ಭಾರತದ ಡಿಜಿಟಲ್ ಪಾವತಿ ಪಯಣದಲ್ಲಿ ಪ್ರಮುಖ ತಿರುವು ತಂದಿದೆ ಎಂದು ಹೇಳಿದ್ದಾರೆ. ಯುಪಿಐನ ಪ್ರಮಾಣ ಮತ್ತು ವ್ಯಾಪ್ತಿಯು ಪ್ರತಿಯೊಬ್ಬ ಭಾರತೀಯನು ಹೆಮ್ಮೆಪಡಬೇಕಾದ ವಿಷಯವಾಗಿದೆ ಎಂದು ಅವರು ತಿಳಿಸಿದ್ದಾರೆ.
ಅಲ್ಲದೆ, ಕಳೆದ ಹತ್ತು ವರ್ಷಗಳಲ್ಲಿ ಯುಪಿಐ ತಮ್ಮ ದೈನಂದಿನ ಜೀವನದ ಮೇಲೆ ಹೇಗೆ ಪರಿಣಾಮ ಬೀರಿದೆ ಹಾಗೂ ತಮ್ಮ ಅನುಭವ ಹೇಗಿದೆ ಎಂಬುದನ್ನು ನಾಗರಿಕರು ಹಂಚಿಕೊಳ್ಳುವಂತೆ ಅವರು ಆಹ್ವಾನಿಸಿದ್ದಾರೆ.ಭಾರತೀಯ ರಿಸರ್ವ್ ಬ್ಯಾಂಕ್‌ನ ನಿಯಂತ್ರಕ ಮೇಲ್ವಿಚಾರಣೆಯಲ್ಲಿ ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (ಎನ್‌ಪಿಸಿಐ) 2016ರ ಆಗಸ್ಟ್ 25ರಂದು ಯುಪಿಐ ಅನ್ನು ಅಧಿಕೃತವಾಗಿ ಪ್ರಾರಂಭಿಸಿತು. ಅಂದಿನಿಂದ ಈ ವ್ಯವಸ್ಥೆ ದೇಶಾದ್ಯಂತ ಅಪಾರ ಬೆಳವಣಿಗೆ ದಾಖಲಿಸಿದೆ.
2016-17ರಲ್ಲಿ ಕೇವಲ 1.78 ಕೋಟಿಯಷ್ಟಿದ್ದ ವಾರ್ಷಿಕ ಯುಪಿಐ ವಹಿವಾಟುಗಳ ಸಂಖ್ಯೆ, 2025-26ರ ವೇಳೆಗೆ 24,162 ಕೋಟಿಗೂ ಅಧಿಕಕ್ಕೆ ತಲುಪಿದೆ. ಇದು ಸುಮಾರು 13,000 ಪಟ್ಟು ಏರಿಕೆಯಾಗಿದೆ.ವಹಿವಾಟಿನ ಮೊತ್ತದಲ್ಲಿಯೂ ಬೃಹತ್ ಜಿಗಿತ ಕಂಡುಬಂದಿದೆ. 2016-17ರಲ್ಲಿ ಕೇವಲ 0.07 ಲಕ್ಷ ಕೋಟಿ ರೂ. ಇದ್ದ ವಹಿವಾಟಿನ ಮೌಲ್ಯವು, 2025-26ರಲ್ಲಿ ಸುಮಾರು 314 ಲಕ್ಷ ಕೋಟಿ ರೂ.ಗಳಿಗೆ ಏರಿಕೆಯಾಗಿದೆ. ಇದು ಸುಮಾರು 4,000 ಪಟ್ಟು ಹೆಚ್ಚಳವಾಗಿದೆ.
ಅಧಿಕೃತ ಪ್ರಕಟಣೆಯ ಪ್ರಕಾರ, ಯುಪಿಐ ಇಂದು ಭಾರತದ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯದ (ಡಿಪಿಐ) ಅತ್ಯಂತ ಯಶಸ್ವಿ ಸ್ತಂಭಗಳಲ್ಲಿ ಒಂದಾಗಿದೆ. ಒಂದೇ ಅಪ್ಲಿಕೇಶನ್ ಮೂಲಕ ತಡೆರಹಿತ, ಪರಸ್ಪರ ಕಾರ್ಯನಿರ್ವಹಿಸಬಹುದಾದ ಹಾಗೂ ನೈಜ-ಸಮಯದ ವ್ಯಕ್ತಿಯಿಂದ ವ್ಯಕ್ತಿಗೆ ಮತ್ತು ವ್ಯಕ್ತಿಯಿಂದ ವ್ಯಾಪಾರಿಗೆ ವಹಿವಾಟು ನಡೆಸಲು ಇದು ನಾಗರಿಕರಿಗೆ ಅವಕಾಶ ಮಾಡಿಕೊಟ್ಟಿದೆ.
ಕಳೆದ ಹತ್ತು ವರ್ಷಗಳಲ್ಲಿ ಯುಪಿಐ ಉಚಿತ ಹಾಗೂ ಅತ್ಯಂತ ಜನಪ್ರಿಯ ಸೇವೆಯಾಗಿ ಬೆಳೆದಿದ್ದರೂ, ಕಾಲಕ್ಕೆ ತಕ್ಕಂತೆ ಕೆಲವು ಬ್ಯಾಂಕ್‌ಗಳು ಸುಸ್ಥಿರ ಆದಾಯ ಮಾದರಿಗಳತ್ತ ಹೆಜ್ಜೆಹಾಕಲು ಪ್ರಾರಂಭಿಸಿವೆ. ಉದಾಹರಣೆಗೆ, ಐಸಿಐಸಿಐ ಬ್ಯಾಂಕ್ ಈಗ ಯುಪಿಐ ವಹಿವಾಟುಗಳಿಗೆ ಪಾವತಿ ಸಂಗ್ರಾಹಕರಿಗೆ ಶುಲ್ಕ ವಿಧಿಸಲು ಮುಂದಾಗಿರುವುದು, ಮುಂಬರುವ ದಿನಗಳಲ್ಲಿ ಡಿಜಿಟಲ್ ಪಾವತಿ ವಲಯದಲ್ಲಿ ವಾಣಿಜ್ಯ ಹಾಗೂ ಸುಸ್ಥಿರತೆಯ ದೃಷ್ಟಿಯಿಂದ ಮಹತ್ವದ ಬದಲಾವಣೆಗಳಾಗುವ ಸಾಧ್ಯತೆಯನ್ನು ಸೂಚಿಸುತ್ತದೆ.
ಚಹಾ ಅಂಗಡಿಯಿಂದ ಹಿಡಿದು ದೊಡ್ಡ ಮಾಲ್‌ಗಳವರೆಗೆ ಡಿಜಿಟಲ್ ಪಾವತಿಯನ್ನು ಜನಸಾಮಾನ್ಯರ ಜೀವನದ ಭಾಗವಾಗಿಸಿರುವ ಯುಪಿಐ, ಮುಂದಿನ ದಶಕಗಳಲ್ಲೂ ಜಾಗತಿಕ ಮಟ್ಟದಲ್ಲಿ ತನ್ನ ಹೆಜ್ಜೆಗುರುತುಗಳನ್ನು ಮತ್ತಷ್ಟು ಗಟ್ಟಿಗೊಳಿಸುವತ್ತ ಸಾಗುತ್ತಿದೆ.
