ನವದೆಹಲಿ, ಆ.25- ಪಾಕಿಸ್ತಾನದ ಮಾಜಿ ಪ್ರಧಾನಿ ಹಾಗೂ ಕ್ರಿಕೆಟ್ ದಂತಕಥೆ ಇಮ್ರಾನ್ ಖಾನ್ ಅವರ ನೆರವಿಗೆ ಭಾರತದ ಶ್ರೇಷ್ಠ ಆಟಗಾರರಾದ ಕಪಿಲ್ ದೇವ್, ಸುನಿಲ್ ಗವಾಸ್ಕರ್ ಮತ್ತು ದಿಲೀಪ್ ವೆಂಗ್ಸರ್ಕರ್ ಸೇರಿದಂತೆ ವಿಶ್ವದ ಹಲವಾರು ಮಾಜಿ ಅಂತಾರಾಷ್ಟ್ರೀಯ ಕ್ರಿಕೆಟ್ ನಾಯಕರು ಮುಂದೆ ಬಂದಿದ್ದಾರೆ.
ಆಸ್ಟ್ರೇಲಿಯಾದ ಮಾಜಿ ನಾಯಕ ಗ್ರೆಗ್ ಚಾಪೆಲ್ ಅವರ ನೇತೃತ್ವದಲ್ಲಿ ಪಾಕಿಸ್ತಾನದ ಅಧ್ಯಕ್ಷರಿಗೆ ಬರೆದಿರುವ ಮನವಿ ಪತ್ರದಲ್ಲಿ, ಅದಿಯಾಲಾ ಜೈಲಿನಲ್ಲಿರುವ ಇಮ್ರಾನ್ ಖಾನ್ ಅವರಿಗೆ ತಕ್ಷಣ ಸೂಕ್ತ ವೈದ್ಯಕೀಯ ಸೌಲಭ್ಯ ಹಾಗೂ ಮಾನವೀಯ ಹಕ್ಕುಗಳನ್ನು ಒದಗಿಸಬೇಕು ಎಂದು ಕೋರಲಾಗಿದೆ.
ಇದರ ಜೊತೆಗೆ ಇಮ್ರಾನ್ ಖಾನ್ ಅವರ ವೈಯಕ್ತಿಕ ವೈದ್ಯರನ್ನು ಒಳಗೊಂಡ, ಸುಪ್ರೀಂ ಕೋರ್ಟ್ ನಿರ್ದೇಶಿತ ವೈದ್ಯಕೀಯ ಮಂಡಳಿಯಿಂದ ಸಂಪೂರ್ಣ ಹಾಗೂ ಸ್ವತಂತ್ರ ಆರೋಗ್ಯ ತಪಾಸಣೆಗೆ ತಕ್ಷಣ ಅವಕಾಶ ನೀಡಬೇಕು ಎಂದು ಮನವಿ ಮಾಡಲಾಗಿದೆ.
ಸುಪ್ರೀಂ ಕೋರ್ಟ್ ಈ ಹಿಂದೆ ಆದೇಶಿಸಿದಂತೆ, ಇಮ್ರಾನ್ ಖಾನ್ ಅವರನ್ನು ವಾರಕ್ಕೊಮ್ಮೆ ಭೇಟಿಯಾಗಲು ಅವರ ಕುಟುಂಬ ಸದಸ್ಯರಿಗೆ ಇದ್ದ ಅವಕಾಶವನ್ನು ತಕ್ಷಣವೇ ಮರುಸ್ಥಾಪಿಸಬೇಕು ಎಂದು ಪತ್ರದ ಮೂಲಕ ಆಗ್ರಹಿಸಲಾಗಿದೆ.
ವೈದ್ಯಕೀಯ ಮಂಡಳಿ ಶಿಫಾರಸು ಮಾಡುವ ಯಾವುದೇ ಆರೋಗ್ಯ ಚಿಕಿತ್ಸೆ ಅಥವಾ ವೈದ್ಯಕೀಯ ಹಸ್ತಕ್ಷೇಪಗಳನ್ನು ಆಡಳಿತಾತ್ಮಕ ಅಡೆತಡೆಗಳಿಲ್ಲದೆ ತಕ್ಷಣ ಒದಗಿಸಬೇಕು ಎಂದು ಮನವಿ ಮಾಡಲಾಗಿದೆ.
ಜೈಲಿನಲ್ಲಿ ಇಮ್ರಾನ್ ಖಾನ್ ಅವರ ಆರೋಗ್ಯ ತೀವ್ರವಾಗಿ ಕ್ಷೀಣಿಸಿದೆ. ವಿಶೇಷವಾಗಿ ಅವರು ತಮ್ಮ ಬಲಗಣ್ಣಿನ ಶೇ.85ರಷ್ಟು ದೃಷ್ಟಿ ಕಳೆದುಕೊಂಡಿದ್ದಾರೆ ಎಂಬ ಆಘಾತಕಾರಿ ಮಾಹಿತಿ ಹೊರಬಂದಿದೆ. ಸುಪ್ರೀಂ ಕೋರ್ಟ್ ಸೂಚಿಸಿದ ಸ್ವತಂತ್ರ ವೈದ್ಯಕೀಯ ಮಂಡಳಿಯ ಬದಲಿಗೆ ಸರ್ಕಾರ ನೇಮಿಸಿದ ವೈದ್ಯರ ತಂಡವೊಂದು ಕೆಲವೇ ಗಂಟೆಗಳ ಕಾಲ ತಪಾಸಣೆ ನಡೆಸಿ ಅವರನ್ನು ಮತ್ತೆ ಜೈಲಿಗೆ ಕಳುಹಿಸಿದೆ. ಇದು ಮಾಜಿ ಕ್ರಿಕೆಟಿಗರಲ್ಲಿ ತೀವ್ರ ಕಳವಳಕ್ಕೆ ಕಾರಣವಾಗಿದೆ.
ಕ್ರಿಕೆಟ್ ಮೈದಾನದಲ್ಲಿ ತಮ್ಮ ನಡುವೆ ಇದ್ದ ಬಾಂಧವ್ಯವು ಗಡಿ ಹಾಗೂ ದೇಶಗಳ ನಡುವಿನ ವಿವಾದಗಳನ್ನು ಮೀರಿದ್ದಾಗಿತ್ತು ಎಂದು ಪತ್ರದಲ್ಲಿ ಉಲ್ಲೇಖಿಸಿರುವ ದಿಗ್ಗಜರು, ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು 1992ರ ವಿಶ್ವಕಪ್ ವಿಜೇತ ನಾಯಕನಿಗೆ ಕನಿಷ್ಠ ಮಾನವೀಯ ಗೌರವ ಹಾಗೂ ಜೀವ ರಕ್ಷಣೆಯ ಹಕ್ಕನ್ನು ನೀಡಬೇಕು ಎಂದು ಪಾಕಿಸ್ತಾನ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ರಾಜಕೀಯ ಏರಿಳಿತಗಳು ಏನೇ ಇರಲಿ, ಇಮ್ರಾನ್ ಖಾನ್ ಕೇವಲ ಮಾಜಿ ಪ್ರಧಾನಿಯಷ್ಟೇ ಅಲ್ಲ, ಜಾಗತಿಕ ಕ್ರಿಕೆಟ್ ಇತಿಹಾಸದ ಶ್ರೇಷ್ಠ ನಾಯಕರಲ್ಲಿ ಒಬ್ಬರು ಎಂದು ಅವರು ಹೇಳಿದ್ದಾರೆ. ಕಪಿಲ್ ದೇವ್ ಮತ್ತು ಸುನಿಲ್ ಗವಾಸ್ಕರ್ ಅವರಂತಹ ಭಾರತೀಯ ಕ್ರಿಕೆಟ್ ದಿಗ್ಗಜರು ಈ ಜಾಗತಿಕ ಅಭಿಯಾನದಲ್ಲಿ ಕೈಜೋಡಿಸಿರುವುದು, ಕ್ರೀಡಾ ಮನೋಭಾವವು ದೇಶದ ಗಡಿ ಹಾಗೂ ರಾಜಕೀಯ ಭಿನ್ನಾಭಿಪ್ರಾಯಗಳಿಗಿಂತ ಮಿಗಿಲಾದುದು ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.
