ನವದೆಹಲಿ, ಆ.25- ಇದೇ ಸೆಪ್ಟೆಂಬರ್ನಲ್ಲಿ ನವದೆಹಲಿಯಲ್ಲಿ ನಡೆಯಲಿರುವ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಲು ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಭಾರತಕ್ಕೆ ಆಗಮಿಸಲಿದ್ದಾರೆ ಎಂದು ತಿಳಿದುಬಂದಿದೆ.ಅವರ ಈ ಭೇಟಿ ಅಧಿಕೃತವಾಗಿ ಖಚಿತವಾದರೆ, 2020ರ ಗಾಲ್ವಾನ್ ಕಣಿವೆ ಸಂಘರ್ಷದ ಬಳಿಕ ಉಭಯ ದೇಶಗಳ ನಡುವಿನ ಸಂಬಂಧ ಹಳಸಿದ ನಂತರ ಹಾಗೂ ಕಳೆದ ಏಳು ವರ್ಷಗಳಲ್ಲೇ ಜಿನ್ಪಿಂಗ್ ಕೈಗೊಳ್ಳುತ್ತಿರುವ ಮೊದಲ ಭಾರತ ಪ್ರವಾಸ ಇದಾಗಲಿದೆ.
ಜಿನ್ಪಿಂಗ್ ಅವರು ಬೃಹತ್ ನಿಯೋಗದೊಂದಿಗೆ ಶೃಂಗಸಭೆಗೆ ಆಗಮಿಸುವ ಸಾಧ್ಯತೆಯಿದ್ದು, ನಿಯೋಗದಲ್ಲಿ ಸುಮಾರು 400 ಅಧಿಕಾರಿಗಳು ಇರಲಿದ್ದಾರೆ. ಇದು 2019ರ ಭಾರತ ಭೇಟಿಯ ಸಂದರ್ಭದಲ್ಲಿ ಅವರೊಂದಿಗೆ ಆಗಮಿಸಿದ್ದ ನಿಯೋಗಕ್ಕಿಂತ ದುಪ್ಪಟ್ಟು ಗಾತ್ರದ್ದಾಗಿರಲಿದೆ ಎಂದು ಮೂಲಗಳು ತಿಳಿಸಿವೆ.
ಉಭಯ ದೇಶಗಳ ನಡುವೆ ರಾಜತಾಂತ್ರಿಕ ಸಮಾಲೋಚನೆಗಳು ತೀವ್ರಗೊಂಡಿರುವ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಗಡಿ ವಿವಾದ ಕುರಿತ 25ನೇ ಸುತ್ತಿನ ವಿಶೇಷ ಪ್ರತಿನಿಧಿಗಳ ಮಟ್ಟದ ಮಾತುಕತೆಗಾಗಿ ಚೀನಾಕ್ಕೆ ತೆರಳಿದ್ದಾರೆ.
ಜಿನ್ಪಿಂಗ್ ಅವರ ಭೇಟಿಯ ಭದ್ರತೆ ಹಾಗೂ ಹೋಟೆಲ್ ವ್ಯವಸ್ಥೆಗಳ ಸಿದ್ಧತೆಯಲ್ಲೂ ಉಭಯ ದೇಶಗಳ ಅಧಿಕಾರಿಗಳು ತೊಡಗಿಸಿಕೊಂಡಿದ್ದಾರೆ. ಆದರೆ, ಜಿನ್ಪಿಂಗ್ ಅವರ ಪ್ರವಾಸವನ್ನು ಚೀನಾ ವಿದೇಶಾಂಗ ಸಚಿವಾಲಯ ಇನ್ನೂ ಅಧಿಕೃತವಾಗಿ ಪ್ರಕಟಿಸಿಲ್ಲ.
‘ನಾವು ಬ್ರಿಕ್ಸ್ ಸಹಕಾರಕ್ಕೆ ಸದಾ ಹೆಚ್ಚಿನ ಮಹತ್ವ ನೀಡುತ್ತೇವೆ. ಭಾರತ ಆಯೋಜಿಸುತ್ತಿರುವ ಈ ಬಾರಿಯ ಶೃಂಗಸಭೆಗೆ ನಮ್ಮ ಸಂಪೂರ್ಣ ಬೆಂಬಲವಿದೆ. ಶೃಂಗಸಭೆ ಯಶಸ್ವಿಯಾಗಲಿ ಎಂದು ಹಾರೈಸುತ್ತೇವೆ’ ಎಂದು ಚೀನಾ ಹೇಳಿದೆ.ಭಾರತವೂ ಈ ಕುರಿತು ಇನ್ನಷ್ಟೇ ಅಧಿಕೃತ ಘೋಷಣೆ ಮಾಡಬೇಕಿದೆ. ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕ್ಸಿ ಜಿನ್ಪಿಂಗ್ ನಡುವೆ ದ್ವಿಪಕ್ಷೀಯ ಮಾತುಕತೆ ನಡೆಯುವ ಸಾಧ್ಯತೆಯಿದೆ.
ಜೂನ್ 2020ರಲ್ಲಿ ಪೂರ್ವ ಲಡಾಖ್ನ ಗಾಲ್ವಾನ್ ಕಣಿವೆಯಲ್ಲಿ ನಡೆದ ಸಂಘರ್ಷದಲ್ಲಿ 20 ಭಾರತೀಯ ಯೋಧರು ಹುತಾತ್ಮರಾದ ಬಳಿಕ ಭಾರತ-ಚೀನಾ ಸಂಬಂಧ ತೀವ್ರ ಹದಗೆಟ್ಟಿತ್ತು. ಇದರ ಬೆನ್ನಲ್ಲೇ ಭಾರತವು ಚೀನಾದ ಹೂಡಿಕೆಗಳು ಮತ್ತು ಹಲವು ಮೊಬೈಲ್ ಆ್ಯಪ್ಗಳ ಮೇಲೆ ಕಠಿಣ ನಿರ್ಬಂಧಗಳನ್ನು ವಿಧಿಸಿತ್ತು.
