ನೆಲಮಂಗಲ, ಆ.25- ವೃದ್ಧೆಯೊಬ್ಬರ ಮಾಂಗಲ್ಯ ಸರ ಕದಿಯಲು ಯತ್ನಿಸಿ ಸಾರ್ವಜನಿಕರಿಂದ ಗೂಸಾ ತಿಂದಿದ್ದಲ್ಲದೆ, ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಆಂಬ್ಯುಲೆನ್ಸ್ನಿಂದ ಸಿನಿಮೀಯ ರೀತಿಯಲ್ಲಿ ಪರಾರಿಯಾಗಿದ್ದ ರೌಡಿಶೀಟರ್ನೊಬ್ಬನ ಶವ ಅನುಮಾನಾಸ್ಪದವಾಗಿ ಕೆರೆಯಲ್ಲಿ ಪತ್ತೆಯಾಗಿರುವ ಘಟನೆ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬರೋಬ್ಬರಿ 22ಕ್ಕೂ ಹೆಚ್ಚು ಅಪರಾಧ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಬ್ಯಾಟರಿ ಜಯಂತ್ (30)ನ ಶವ ಪತ್ತೆಯಾಗಿದ್ದು, ಘಟನೆಗೆ ಸಂಬಂಧಿಸಿದಂತೆ ನಾಪತ್ತೆಯಾಗಿರುವ ಆತನ ಸಹಚರನಿಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.
ಏನಿದು ಘಟನೆ?
ಎರಡು ದಿನಗಳ ಹಿಂದೆ ನೆಲಮಂಗಲ ತಾಲೂಕಿನ ಕುಲುವನಹಳ್ಳಿ ಗೇಟ್ ಬಳಿ ವೃದ್ಧೆಯೊಬ್ಬರ ಮಾಂಗಲ್ಯ ಸರ ಕೀಳಲು ಬ್ಯಾಟರಿ ಜಯಂತ್ ಹಾಗೂ ಆತನ ಸಹಚರ ಯತೀಶ್ ಯತ್ನಿಸಿದ್ದರು. ಈ ವೇಳೆ ಎಚ್ಚೆತ್ತ ಸಾರ್ವಜನಿಕರು ಇಬ್ಬರನ್ನೂ ಹಿಡಿದು ಧರ್ಮದೇಟು ನೀಡಿದ್ದರು. ಜನರ ಹೊಡೆತಕ್ಕೆ ಸಿಲುಕಿದ ಇಬ್ಬರೂ ಸ್ಥಳದಲ್ಲೇ ಪ್ರಜ್ಞೆ ತಪ್ಪಿ ಬಿದ್ದಿದ್ದರು. ತಕ್ಷಣ ಸ್ಥಳೀಯರು 112 ಸಹಾಯವಾಣಿಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಆಂಬ್ಯುಲೆನ್ಸ್ನಲ್ಲಿ ಹೈಡ್ರಾಮಾ
ಘಟನಾ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಆರೋಪಿಗಳನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಲು 108 ಆಂಬ್ಯುಲೆನ್ಸ್ ಕರೆಸಿದ್ದರು. ಆದರೆ, ಆಂಬ್ಯುಲೆನ್ಸ್ನಲ್ಲಿ ಆಸ್ಪತ್ರೆಗೆ ಸಾಗುತ್ತಿದ್ದ ವೇಳೆ ಏಕಾಏಕಿ ಎಚ್ಚೆತ್ತ ಆರೋಪಿಗಳಾದ ಜಯಂತ್ ಹಾಗೂ ಯತೀಶ್, 108 ಚಾಲಕನ ಮೇಲೆ ಹಲ್ಲೆ ನಡೆಸಿ ಕತ್ತಲಲ್ಲಿ ಪರಾರಿಯಾಗಿದ್ದರು. ಪೊಲೀಸರು ಅಂದಿನಿಂದಲೂ ಇವರಿಗಾಗಿ ಹುಡುಕಾಟ ನಡೆಸುತ್ತಿದ್ದರೂ ಇಬ್ಬರೂ ಸಿಕ್ಕಿರಲಿಲ್ಲ.
ಕೆರೆಯಲ್ಲಿ ತೇಲಿದ ಜಯಂತ್ ಶವ
ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳ ಪೈಕಿ ಬ್ಯಾಟರಿ ಜಯಂತ್ನ ಮೃತದೇಹ ನೆಲಮಂಗಲ ತಾಲೂಕಿನ ದೊಡ್ಡೇರಿ ಗ್ರಾಮದ ಕೆರೆಯಲ್ಲಿ ಪತ್ತೆಯಾಗಿದೆ. ಆಂಬ್ಯುಲೆನ್ಸ್ನಿಂದ ತಪ್ಪಿಸಿಕೊಂಡು ಓಡುವ ಭರದಲ್ಲಿ ಆಯತಪ್ಪಿ ಕೆರೆಗೆ ಬಿದ್ದು, ನೀರಿನಲ್ಲಿ ಮುಳುಗಿ ಸಾವನ್ನಪ್ಪಿರಬಹುದು ಎಂದು ಮೇಲ್ನೋಟಕ್ಕೆ ಶಂಕಿಸಲಾಗಿದೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ನೆಲಮಂಗಲ ಗ್ರಾಮಾಂತರ ಪೊಲೀಸರು, ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ. ಠಾಣೆಯಲ್ಲಿ ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಘಟನೆ ಬಳಿಕ ನಾಪತ್ತೆಯಾಗಿರುವ ಮತ್ತೋರ್ವ ಆರೋಪಿ ಯತೀಶ್ಗಾಗಿ ಬಲೆ ಬೀಸಿದ್ದಾರೆ. ಆತ ಸಿಕ್ಕಿಬಿದ್ದರೆ ಜಯಂತ್ ಸಾವಿನ ನಿಜವಾದ ಕಾರಣ ತಿಳಿದುಬರಲಿದೆ.
