ಬೆಂಗಳೂರು, ಆ.25- ಪ್ರಕೃತಿಯಲ್ಲಿ ಪ್ರತಿನಿತ್ಯ ಒಂದಲ್ಲೊಂದು ವಿಸ್ಮಯಗಳು ನಡೆಯುತ್ತಲೇ ಇರುತ್ತವೆ. ತರಕಾರಿಗಳಲ್ಲಿ ವಿವಿಧ ಆಕೃತಿಗಳು ಮೂಡಿಬಂದಿರುವುದನ್ನು ನಾವು ಗಮನಿಸಿದ್ದೇವೆ. ಆದರೆ ಕಲ್ಪವೃಕ್ಷ ಎಂದೇ ಕರೆಯಲಾಗುವ ತೆಂಗಿನಕಾಯಿಯಲ್ಲೂ ಇದೇ ರೀತಿಯ ವಿಶಿಷ್ಟ ಆಕೃತಿ ಮೂಡಿರುವುದು ಅಚ್ಚರಿ ಮೂಡಿಸಿದೆ.
ಮಳೆಯ ಕೊರತೆ ಹಾಗೂ ನುಸಿ ರೋಗದಿಂದ ತೆಂಗಿನ ಇಳುವರಿ ಕುಂಠಿತವಾಗಿದ್ದು, ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ತೆಂಗಿನಕಾಯಿ ಬೆಲೆ ಏರಿಕೆಯಾಗಿದೆ. ಮಾರುಕಟ್ಟೆಯಲ್ಲಿ ಗುಣಮಟ್ಟದ ತೆಂಗಿನಕಾಯಿ ಒಂದಕ್ಕೆ 40ರಿಂದ 50 ರೂ.ವರೆಗೆ ಮಾರಾಟವಾಗುತ್ತಿದೆ. ಕೊಬ್ಬರಿ ಕ್ವಿಂಟಾಲ್‌ಗೆ 25ರಿಂದ 30 ಸಾವಿರ ರೂ.ವರೆಗೆ ಬೆಲೆ ಇದೆ. ಇದೇ ರೀತಿ ತೆಂಗಿನ ಚಿಪ್ಪಿನ ಬೆಲೆಯೂ ಹೆಚ್ಚಳವಾಗಿದ್ದು, ತೆಂಗಿಗೆ ಶುಕ್ರದೆಸೆ ಬಂದಿದೆ.
ಈ ನಡುವೆ, ರಾಮನಗರ ಜಿಲ್ಲೆಯ ಲಿಂಗೇಗೌಡದೊಡ್ಡಿಯ ಪ್ರಗತಿಪರ ರೈತ ಶಿವಣ್ಣ ಅವರ ತೋಟದ ತೆಂಗಿನಮರವೊಂದರಲ್ಲಿ ಹೀರೇಕಾಯಿಯ ಮಾದರಿಯಲ್ಲಿ ಉದ್ದನೆಯ ತೆಂಗಿನಕಾಯಿ ಬೆಳೆದಿರುವುದು ಗ್ರಾಮಸ್ಥರಲ್ಲಿ ಅಚ್ಚರಿ ಮೂಡಿಸಿದೆ. ಇದೇ ಮೊದಲ ಬಾರಿಗೆ ತಮ್ಮ ತೋಟದಲ್ಲಿ ಈ ರೀತಿಯ ತೆಂಗಿನಕಾಯಿ ದೊರೆತಿದ್ದು, ಇದನ್ನು ನೋಡಿದಾಗ ತಮಗೂ ಅಚ್ಚರಿಯಾಯಿತು ಎಂದು ಶಿವಣ್ಣ ತಿಳಿಸಿದ್ದಾರೆ.
