ಬೆಂಗಳೂರು, ಆ.25- ಸಕ್ಕರೆ, ಅಕ್ಕಿ, ಬೆಲ್ಲ, ಅಡುಗೆ ಎಣ್ಣೆ ಬೆಲೆ ಈಗಾಗಲೇ ಗಗನಕ್ಕೇರಿ ಗ್ರಾಹಕರು ಸಂಕಷ್ಟದಲ್ಲಿರುವ ಬೆನ್ನಲ್ಲೇ, ಈರುಳ್ಳಿ ದರವೂ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಮತ್ತಷ್ಟು ಹೊರೆಯಾಗಿದೆ.ಮುಂಗಾರು ಮಳೆ ಕೊರತೆಯಿಂದ ಬಿತ್ತಿದ್ದ ಬೆಳೆಗಳು ಒಣಗುತ್ತಿರುವುದು ಒಂದೆಡೆಯಾದರೆ, ಮತ್ತೊಂದೆಡೆ ಆಹಾರ ಧಾನ್ಯಗಳ ಬೆಲೆಗಳು ಏರತೊಡಗಿವೆ. ಈರುಳ್ಳಿ ದರವೂ ಏರುಗತಿಯಲ್ಲಿ ಸಾಗುತ್ತಿದ್ದು, ಈಗಾಗಲೇ ಗ್ರಾಹಕರ ಕಣ್ಣಿನಲ್ಲಿ ನೀರು ತರಿಸುತ್ತಿದೆ.
ನಗರದ ಯಶವಂತಪುರ ಸರಕು ಮಾರುಕಟ್ಟೆಯಲ್ಲಿ ಈರುಳ್ಳಿ ದರ ಕೇವಲ ಒಂದು ವಾರದಲ್ಲಿ ಕ್ವಿಂಟಾಲ್ಗೆ 1,600 ರೂ.ನಷ್ಟು ಏರಿಕೆಯಾಗಿದ್ದು, ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿಗೆ 50ರಿಂದ 55 ರೂ.ಗೆ ಮಾರಾಟವಾಗುತ್ತಿದೆ. ಮಳೆ ಅಭಾವದಿಂದ ಕೃಷಿ ಚಟುವಟಿಕೆಗಳು ಕುಂಠಿತವಾಗಿದ್ದು, ಉತ್ಪಾದನೆಯೂ ಇಳಿಕೆಯಾಗುವ ಸಾಧ್ಯತೆಯಿದೆ. ಇದರಿಂದ ಈಗಾಗಲೇ ವಿವಿಧ ಆಹಾರ ಪದಾರ್ಥಗಳ ಬೆಲೆ ಹೆಚ್ಚಾಗುತ್ತಿದೆ. ಕಳೆದ ನಾಲ್ಕೈದು ದಿನಗಳಿಂದ ಈರುಳ್ಳಿ ಬೆಲೆ ನಿರಂತರವಾಗಿ ಏರುತ್ತಿದೆ.
ಒಂದು ಕೆ.ಜಿಗೆ 30ರಿಂದ 40 ರೂ. ಇದ್ದ ಈರುಳ್ಳಿ ದರ ಈಗಾಗಲೇ 50 ರೂ. ಗಡಿ ದಾಟಿದ್ದು, ಕೆಲವೆಡೆ 70 ರೂ.ವರೆಗೂ ಮಾರಾಟವಾಗುತ್ತಿದೆ. ಈರುಳ್ಳಿ ಪೂರೈಕೆ ಕಡಿಮೆಯಾಗಿದ್ದು, ನೆರೆಯ ಮಹಾರಾಷ್ಟ್ರದಿಂದ ಮಾರುಕಟ್ಟೆಗೆ ಈರುಳ್ಳಿ ಬರುತ್ತಿದೆ. ಸದ್ಯಕ್ಕೆ ಈರುಳ್ಳಿ ಬೆಲೆ ಇಳಿಯುವ ಲಕ್ಷಣ ಕಾಣುತ್ತಿಲ್ಲ. ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ವರ್ತಕರು ಅಭಿಪ್ರಾಯಪಟ್ಟಿದ್ದಾರೆ.
ಅದೇ ರೀತಿ ಅಡುಗೆ ಎಣ್ಣೆ, ಅಕ್ಕಿ, ರಾಗಿ, ಬೇಳೆ, ಸಕ್ಕರೆ ಸೇರಿದಂತೆ ವಿವಿಧ ಆಹಾರ ಪದಾರ್ಥಗಳ ಬೆಲೆಯೂ ಹೆಚ್ಚಾಗಿದೆ. ಮಳೆ ಕೊರತೆಯ ಪರಿಣಾಮ ತೋಟಗಾರಿಕೆ ಬೆಳೆಗಳಿಗೂ ತೊಂದರೆಯಾಗಿದ್ದು, ತರಕಾರಿ ಬೆಲೆಗಳು ದಿನದಿಂದ ದಿನಕ್ಕೆ ಏರತೊಡಗಿವೆ. ಸದ್ಯ ಟೊಮ್ಯಾಟೊ ಬೆಲೆ ಮಾತ್ರ ಕಡಿಮೆ ಇದ್ದು, ಬಹುತೇಕ ತರಕಾರಿಗಳ ಬೆಲೆ ದುಬಾರಿಯಾಗಿದೆ.
ದಿನದಿಂದ ದಿನಕ್ಕೆ ಅಗತ್ಯ ವಸ್ತುಗಳ ಬೆಲೆ ಏರುತ್ತಲೇ ಇದ್ದು, ಬಡವರು ಹಾಗೂ ಮಧ್ಯಮ ವರ್ಗದ ಜನರ ಜೀವನ ನಿರ್ವಹಣೆ ದುಬಾರಿಯಾಗಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಗ್ರಾಹಕರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಶ್ರಾವಣ ಮಾಸದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶುಭ ಕಾರ್ಯಗಳು ನಡೆಯುವುದರಿಂದ ತರಕಾರಿಗಳು ಹಾಗೂ ದಿನಸಿ ಸಾಮಗ್ರಿಗಳಿಗೆ ಬೇಡಿಕೆ ಹೆಚ್ಚಾಗಿದೆ. ಇದರ ನಡುವೆ ಉತ್ಪಾದನೆ ಕುಂಠಿತವಾಗಿರುವುದರಿಂದ ಬೆಲೆ ಏರಿಕೆಯಾಗಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.
