ಮೈಸೂರು,ಆ.25- ನಾಡಹಬ್ಬ ಮೈಸೂರು ದಸರಾದ ಪ್ರಥಮ ಚರಣವಾದ ಗಜಪಯಣಕ್ಕೆ ನಾಳೆ (ಆ. 26) ಅದ್ಧೂರಿ ಚಾಲನೆ ದೊರೆಯಲಿದೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ವೀರನಹೊಸಹಳ್ಳಿ ಮುಖ್ಯದ್ವಾರದ ಮುಂಭಾಗ ನಾಳೆ ಬೆಳಗ್ಗೆ 10 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಗಜಪಡೆಗೆ ಪುಷ್ಪಾರ್ಚನೆ ಮಾಡಿ ಸಾಂಪ್ರದಾಯಿಕ ಪೂಜೆ ನೆರವೇರಿಸಿ ಚಾಲನೆ ನೀಡಲಿದ್ದಾರೆ.
ಈ ಬಾರಿ ಗಜಪಯಣಕ್ಕೆ ಹೊಸ ರೂಪ ನೀಡಲಾಗಿದ್ದು, ಸುಮಾರು 6 ಸಾವಿರ ಜನರು, ಪ್ರವಾಸಿಗರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಮತ್ತು ಮಹಿಳಾ ಸಂಘಟನೆಗಳಿಂದ ಗಜಪಡೆಗೆ ಅಭೂತಪೂರ್ವ ಸ್ವಾಗತ ಕೋರಲಾಗುತ್ತಿದೆ.
ಸ್ವಾಗತಕ್ಕೆ 15ಕ್ಕೂ ಹೆಚ್ಚು ಜಾನಪದ ಕಲಾತಂಡಗಳು ಸಜ್ಜಾಗಿವೆ. ಕಂಸಾಳೆ, ಡೊಳ್ಳು ಕುಣಿತ, ವೀರಗಾಸೆ, ಪೂಜಾ ಕುಣಿತ, ಆದಿವಾಸಿ ನೃತ್ಯ, ಟಿಬೆಟಿಯನ್ ನೃತ್ಯ, ಗೊರವರ ಕುಣಿತ, ಜೇನುಕುರುಬ ಮತ್ತು ಕಾಡು ಕುರುಬರ ಕುಣಿತದೊಂದಿಗೆ ಆನೆಗಳನ್ನು ಮೆರವಣಿಗೆಯಲ್ಲಿ ಬರಮಾಡಿಕೊಳ್ಳಲಾಗುತ್ತದೆ.
ಮೊದಲ ಹಂತದಲ್ಲಿ 9 ಆನೆಗಳು ಮೈಸೂರಿಗೆ ಆಗಮಿಸಲಿದ್ದು, ಎರಡನೇ ಹಂತದಲ್ಲಿ ಮಹೇಂದ್ರ, ಗೋಪಿ ಸೇರಿದಂತೆ 7 ಆನೆಗಳು ಬರಲಿವೆ. ಕಾರ್ಯಕ್ರಮಕ್ಕೆ ವೇದಿಕೆ ಸಿದ್ಧವಾಗಿದ್ದು ರಸ್ತೆ ಬದಿಯಲ್ಲಿ ಸ್ವಾಗತ ಕಮಾನುಗಳು ರಾರಾಜಿಸುತ್ತಿವೆ. ಮಳೆಯ ಹಿನ್ನೆಲೆಯಲ್ಲಿ ಗಣ್ಯರಿಗೆ ಹಾಗೂ ವೇದಿಕೆ ಕಾರ್ಯಕ್ರಮಕ್ಕೆ ತೊಂದರೆಯಾಗದಂತೆ ಆಸನದ ವ್ಯವಸ್ಥೆ, ಜರ್ಮನ್ ಟೆಂಟ್ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
