Homeರಾಜ್ಯಕೊಡಗಿನಲ್ಲಿ ವರುಣನ ಆರ್ಭಟ; ಮೂರನೇ ಬಾರಿಗೆ ಮುಳುಗಿದ ತ್ರಿವೇಣಿ ಸಂಗಮ

ಕೊಡಗಿನಲ್ಲಿ ವರುಣನ ಆರ್ಭಟ; ಮೂರನೇ ಬಾರಿಗೆ ಮುಳುಗಿದ ತ್ರಿವೇಣಿ ಸಂಗಮ

Heavy rains in Kodagu; Triveni Sangama submerged for the third time

ಮಡಿಕೇರಿ, ಆ.25- ಮಳೆ ಕೊರತೆ ನೀಗಿಸಲು ಮೋಡ ಬಿತ್ತನೆ ಕುರಿತು ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ, ಕಾವೇರಿಯ ತವರು ಕೊಡಗು ಜಿಲ್ಲೆಯಲ್ಲಿ ವರುಣನ ಆರ್ಭಟ ಮುಂದುವರಿದಿದೆ.ಕಳೆದ ಮೂರು ದಿನಗಳಿಂದ ಜಿಲ್ಲೆಯಾದ್ಯಂತ ಎಡೆಬಿಡದೆ ಧಾರಾಕಾರ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಭಾಗಮಂಡಲ ಹಾಗೂ ಬ್ರಹ್ಮಗಿರಿ ತಪ್ಪಲಿನಲ್ಲಿ ನಿರಂತರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಕಾವೇರಿ ನದಿಯ ನೀರಿನ ಮಟ್ಟ ಗಣನೀಯವಾಗಿ ಏರಿಕೆಯಾಗಿದೆ.

ನದಿಯಲ್ಲಿ ನೀರಿನ ಹರಿವು ಹೆಚ್ಚಾದ ಪರಿಣಾಮ ಪವಿತ್ರ ತ್ರಿವೇಣಿ ಸಂಗಮ ಹಾಗೂ ಸಮೀಪದ ಉದ್ಯಾನವನ ಈ ಮಳೆಗಾಲದಲ್ಲಿ ಮೂರನೇ ಬಾರಿಗೆ ಸಂಪೂರ್ಣವಾಗಿ ಜಲಾವೃತಗೊಂಡಿವೆ.ಹಾರಂಗಿ ಜಲಾನಯನ ಪ್ರದೇಶದಲ್ಲೂ ವ್ಯಾಪಕ ಮಳೆಯಾಗುತ್ತಿದ್ದು, ಜಲಾಶಯಕ್ಕೆ ಹರಿದುಬರುವ ನೀರಿನ ಪ್ರಮಾಣ ಗಣನೀಯವಾಗಿ ಹೆಚ್ಚಾಗಿದೆ. ಕಳೆದ ರಾತ್ರಿಯಿಂದಲೇ ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಗುಡುಗು, ಮಿಂಚು ಸಹಿತ ಬಿರುಸಿನ ಮಳೆ ಮುಂದುವರಿದಿದೆ.

ಮಳೆಯ ಆರ್ಭಟ ಇನ್ನೂ ಮುಂದುವರಿದಿರುವ ಹಿನ್ನೆಲೆಯಲ್ಲಿ ನದಿ ಪಾತ್ರದ ಜನರು ಹಾಗೂ ಪ್ರವಾಸಿಗರು ಮುನ್ನೆಚ್ಚರಿಕೆ ವಹಿಸುವಂತೆ ಸ್ಥಳೀಯ ಆಡಳಿತ ಸೂಚಿಸಿದೆ. ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿರುವುದರಿಂದ ಅಪಾಯಕಾರಿ ಪ್ರದೇಶಗಳಿಗೆ ತೆರಳದಂತೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಲಾಗಿದೆ.

ಇದರ ನಡುವೆ, ಕಳೆದ ಕೆಲ ದಿನಗಳಿಂದ ಜಿಲ್ಲೆಯ ವಿವಿಧೆಡೆ ಸುರಿಯುತ್ತಿರುವ ನಿರಂತರ ಮಳೆಯಿಂದ ಕಾಫಿ, ಮೆಣಸು ಸೇರಿದಂತೆ ಹಲವು ಬೆಳೆಗಳ ಮೇಲೆ ಪರಿಣಾಮ ಬೀರುವ ಆತಂಕ ರೈತರಲ್ಲಿ ಮೂಡಿದೆ.ವಿಶೇಷವಾಗಿ ಕಾಫಿ ತೋಟಗಳಲ್ಲಿ ಹೂವು ಮತ್ತು ಕಾಯಿಗಳು ಉದುರುವ ಸಾಧ್ಯತೆ ಇರುವುದರಿಂದ ಬೆಳೆಗಾರರು ಚಿಂತಿತರಾಗಿದ್ದಾರೆ. ನಿರಂತರ ಮಳೆಯಿಂದ ಕೃಷಿ ಚಟುವಟಿಕೆಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದ್ದು, ಮುಂದಿನ ದಿನಗಳಲ್ಲಿ ಮಳೆಯ ಪ್ರಮಾಣ ಕಡಿಮೆಯಾಗುವ ನಿರೀಕ್ಷೆ ಇದೆ.

RELATED ARTICLES
spot_img

Latest News