ಬೆಂಗಳೂರು, ಆ.25- ಹಿರಿಯ ಶಾಸಕರು ಬಂಡಾಯದ ಬಾವುಟ ಹಿಡಿದಿರುವ ಹಿನ್ನೆಲೆಯಲ್ಲಿ ಕೆಲವರನ್ನು ಸಮಾಧಾನಪಡಿಸಲು ಸಂಪುಟದಲ್ಲಿರುವ ಕೆಲವು ಹಿರಿಯ ಸಚಿವರನ್ನು ಕೈಬಿಟ್ಟು ಅಸಮಾಧಾನಿತ ಶಾಸಕರಿಗೆ ಅವಕಾಶ ಕಲ್ಪಿಸುವ ಕುರಿತು ಚರ್ಚೆಗಳು ನಡೆಯುತ್ತಿವೆ.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಗುರುವಾರ ದೆಹಲಿಗೆ ತೆರಳುವ ಸಾಧ್ಯತೆಯಿದ್ದು, ಹೈಕಮಾಂಡ್ ನಾಯಕರೊಂದಿಗೆ ಸಚಿವ ಸಂಪುಟ ಪುನಾರಚನೆ, ವಿಧಾನ ಪರಿಷತ್‌ನ ನಾಲ್ಕು ಸ್ಥಾನಗಳಿಗೆ ಸದಸ್ಯರ ನಾಮನಿರ್ದೇಶನ, ನಿಗಮ-ಮಂಡಳಿಗಳ ಅಧ್ಯಕ್ಷರು ಹಾಗೂ ನಿರ್ದೇಶಕರ ಆಯ್ಕೆ, ಜಿಲ್ಲಾಧ್ಯಕ್ಷರ ನೇಮಕ ಮತ್ತು 100 ಕಾಂಗ್ರೆಸ್ ಕಚೇರಿಗಳ ಶಂಕುಸ್ಥಾಪನೆ ಸೇರಿದಂತೆ ಹಲವು ಮಹತ್ವದ ವಿಚಾರಗಳ ಕುರಿತು ಚರ್ಚೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.
ಸದ್ಯ ಸಂಪುಟದಲ್ಲಿ 33 ಸಚಿವರಿದ್ದು, ಒಂದು ಸ್ಥಾನ ಖಾಲಿ ಉಳಿದಿದೆ. ಈ ಸ್ಥಾನ ಭರ್ತಿ ಮಾಡುವುದು ಕಗ್ಗಂಟಾಗಿದೆ. ಕಾಂಗ್ರೆಸ್‌ನ ಶಾಸಕರಾದ ಲಕ್ಷ್ಮೀ ಹೆಬ್ಬಾಳ್ಕರ್, ಖನೀಜ್ ಫಾತಿಮಾ, ನಯನ ಮೋಟಮ್ಮ, ಅನ್ನಪೂರ್ಣ ತುಕಾರಾಂ ಹಾಗೂ ವಿಧಾನ ಪರಿಷತ್ ಸದಸ್ಯರಾದ ಗಾಯತ್ರಿ ಶಾಂತೇಗೌಡ, ಆರತಿ ಕೃಷ್ಣ, ಬಲ್ಕೀಸ್ ಬಾನು ಸೇರಿದಂತೆ ಹಲವರು ಮಹಿಳಾ ಕೋಟಾದಡಿ ಸಚಿವ ಸ್ಥಾನಕ್ಕಾಗಿ ಪೈಪೋಟಿ ನಡೆಸುತ್ತಿದ್ದಾರೆ.
ಈ ನಡುವೆ ವಿಜಯನಗರದ ಶಾಸಕ ಎಂ.ಕೃಷ್ಣಪ್ಪ, ಗೋವಿಂದರಾಜನಗರ ಕ್ಷೇತ್ರದ ಶಾಸಕ ಪ್ರಿಯಕೃಷ್ಣ, ಶಿರಾ ಕ್ಷೇತ್ರದ ಶಾಸಕ ಟಿ.ಬಿ.ಜಯಚಂದ್ರ ಸೇರಿದಂತೆ ಹಲವರು ಸಚಿವ ಸ್ಥಾನಕ್ಕಾಗಿ ಬಿಗಿಪಟ್ಟು ಹಿಡಿದಿದ್ದಾರೆ. ಈ ಬಾರಿ ಸಂಪುಟದಲ್ಲಿ ಸ್ಥಾನ ಸಿಗದಿದ್ದರೆ, ಮುಂದಿನ ಚುನಾವಣೆಯಲ್ಲಿ ತಮ್ಮದೇ ದಾರಿ ನೋಡಿಕೊಳ್ಳುವುದಾಗಿ ಕೆಲವರು ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.
ಅಸಮಾಧಾನಿತರನ್ನು ಸಮಾಧಾನಪಡಿಸಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಾನಾ ರೀತಿಯ ಕಸರತ್ತು ನಡೆಸಿದ್ದಾರೆ. ಟಿ.ಬಿ.ಜಯಚಂದ್ರ ಅವರು ದೆಹಲಿ ವಿಶೇಷ ಪ್ರತಿನಿಧಿ ಸ್ಥಾನದಿಂದ ತೃಪ್ತರಾಗಿಲ್ಲ ಎನ್ನಲಾಗಿದ್ದು, ಮುಂದಿನ ಚುನಾವಣೆಯಲ್ಲಿ ತಾವು ಸ್ಪರ್ಧಿಸುವ ಸಾಧ್ಯತೆ ಕಡಿಮೆ ಇರುವ ಹಿನ್ನೆಲೆಯಲ್ಲಿ ಪ್ರಸಕ್ತ ಅವಧಿಯಲ್ಲೇ ಸಚಿವ ಸ್ಥಾನ ನೀಡಬೇಕೆಂದು ಬಿಗಿಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ. ಇದಕ್ಕೆ ಪರ್ಯಾಯವಾಗಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಅವರ ಪುತ್ರನಿಗೆ ಬಿ-ಫಾರಂ ನೀಡುವುದರ ಜೊತೆಗೆ ಪ್ರಸಕ್ತ ಅವಧಿಯಲ್ಲಿ ನಿಗಮ-ಮಂಡಳಿ ಸೇರಿದಂತೆ ಸೂಕ್ತ ಹುದ್ದೆ ನೀಡುವ ಪ್ರಸ್ತಾಪ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಆದರೆ ಎಂ.ಕೃಷ್ಣಪ್ಪ ಅವರು ಯಾವುದೇ ಕಾರಣಕ್ಕೂ ಸಚಿವ ಸ್ಥಾನವನ್ನು ಹೊರತುಪಡಿಸಿ ಬೇರೆ ಆಯ್ಕೆ ಬೇಡ ಎಂಬ ನಿಲುವು ತಳೆದಿದ್ದಾರೆ ಎನ್ನಲಾಗಿದೆ. ಪ್ರಿಯಕೃಷ್ಣ ಅವರಿಗೆ ನಿಗಮ-ಮಂಡಳಿಯಲ್ಲಿ ಅವಕಾಶ ನೀಡುವ ಪ್ರಸ್ತಾಪವನ್ನೂ ಎಂ.ಕೃಷ್ಣಪ್ಪ ತಳ್ಳಿ ಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬೆಂಗಳೂರಿನಲ್ಲಿ ಕಾಂಗ್ರೆಸ್‌ಗೆ ಎಂ.ಕೃಷ್ಣಪ್ಪ ಮತ್ತು ಪ್ರಿಯಕೃಷ್ಣ ಅವರ ಬೆಂಬಲ ಆನೆಬಲದಂತಿದೆ. ಅವರು ವ್ಯತಿರಿಕ್ತ ನಿರ್ಧಾರ ತೆಗೆದುಕೊಂಡರೆ ಕಾಂಗ್ರೆಸ್‌ಗೆ ಭಾರಿ ಪ್ರಮಾಣದ ನಷ್ಟವಾಗಲಿದೆ ಎಂಬ ಆತಂಕ ರಾಜ್ಯ ನಾಯಕರಲ್ಲಿದೆ. ಇದರೊಂದಿಗೆ ಇನ್ನೂ ಕೆಲವು ಹಿರಿಯ ಶಾಸಕರು ಸಚಿವ ಸ್ಥಾನಕ್ಕಾಗಿ ಪಟ್ಟು ಹಿಡಿದಿದ್ದಾರೆ.
ಮೂಲಗಳ ಪ್ರಕಾರ, ಈಗ ರಚನೆಯಾಗಿರುವ 33 ಮಂದಿಯ ಸಂಪುಟದಲ್ಲಿ ಯಾವುದೇ ಬದಲಾವಣೆ ಮಾಡದಂತೆ ಹೈಕಮಾಂಡ್ ಈಗಾಗಲೇ ಖಡಕ್ ಸಂದೇಶ ರವಾನಿಸಿದೆ. ಆದರೆ ಸದ್ಯದ ರಾಜಕೀಯ ಪರಿಸ್ಥಿತಿಯ ಒತ್ತಡಕ್ಕೆ ಮಣಿದು ಕೆಲವು ಬದಲಾವಣೆಗಳನ್ನು ಮಾಡುವುದು ಸೂಕ್ತ ಎಂದು ಹೈಕಮಾಂಡ್ ಮನವೊಲಿಸಲು ರಾಜ್ಯ ನಾಯಕರು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ.
ಸಂಪುಟದಲ್ಲಿರುವ ಕೆಲವು ತಟಸ್ಥ ಹಾಗೂ ಹಿರಿಯ ಸಚಿವರನ್ನು ಕೈಬಿಟ್ಟು ಜನಪ್ರಿಯ ನಾಯಕರಿಗೆ ಮಣೆ ಹಾಕಬೇಕು ಎಂಬುದು ರಾಜ್ಯ ನಾಯಕರ ಒತ್ತಾಯವಾಗಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಚರ್ಚೆ ನಡೆಸಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ದೆಹಲಿಯತ್ತ ಮುಖ ಮಾಡಿದ್ದಾರೆ.
ವಿಧಾನಸಭಾ ಅಧಿವೇಶನ ಮುಕ್ತಾಯಗೊಂಡ ಬೆನ್ನಲ್ಲೇ ಮುಖ್ಯಮಂತ್ರಿಯವರ ದೆಹಲಿ ಪ್ರವಾಸ ಕುತೂಹಲ ಕೆರಳಿಸಿದ್ದು, ಸಂಪುಟ ಪುನಾರಚನೆ ನಡೆಯಲಿದೆಯೇ ಎಂಬ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ.
