Homeರಾಜ್ಯಕಡಿಮೆ ದರದಲ್ಲಿ ಎಥೆನಾಲ್‌ ಉತ್ಪಾದಕರಿಗೆ ಅಕ್ಕಿ ಮಾರಾಟ : ಪ್ರಿಯಾಂಕ ಖರ್ಗೆ ಆಕ್ಷೇಪ

ಕಡಿಮೆ ದರದಲ್ಲಿ ಎಥೆನಾಲ್‌ ಉತ್ಪಾದಕರಿಗೆ ಅಕ್ಕಿ ಮಾರಾಟ : ಪ್ರಿಯಾಂಕ ಖರ್ಗೆ ಆಕ್ಷೇಪ

Selling rice to ethanol producers at low prices: Priyank Kharge objects

ಬೆಂಗಳೂರು, ಆ.25- ತೆರಿಗೆದಾರರ ಹಣದಲ್ಲಿ ಖರೀದಿಸಿದ ಅಕ್ಕಿಯನ್ನು ಎಥೆನಾಲ್‌ ಉತ್ಪಾದಕರಿಗೆ ಶೇ.40ರಷ್ಟು ಕಡಿಮೆ ದರದಲ್ಲಿ ಮಾರಾಟ ಮಾಡುತ್ತಿರುವುದೇಕೆ ಎಂದು ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ಪ್ರಶ್ನಿಸಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಪ್ರತಿಕ್ರಿಯಿಸಿರುವ ಅವರು, ಕೇಂದ್ರ ಸರ್ಕಾರದ ಎಥೆನಾಲ್‌ ನೀತಿಯ ಬಗ್ಗೆ ಹಲವು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.

ಆಹಾರ ಭದ್ರತೆಗಾಗಿ ತೆರಿಗೆದಾರರ ಹಣದಲ್ಲಿ ರೈತರಿಂದ ಭತ್ತ ಖರೀದಿಸಿ, ಅದನ್ನು ಸಂಗ್ರಹಿಸಿ, ಸಾಗಣೆ ವೆಚ್ಚ ಭರಿಸಿದ ಬಳಿಕ ಭಾರತೀಯ ಆಹಾರ ನಿಗಮ (ಎಫ್‌ಸಿಐ) ಮೂಲಕ ಎಥೆನಾಲ್‌ ಉತ್ಪಾದಕರಿಗೆ ಅದರ ಸ್ವಾಧೀನ ವೆಚ್ಚಕ್ಕಿಂತ ಸುಮಾರು ಶೇ.40ರಷ್ಟು ಕಡಿಮೆ ದರದಲ್ಲಿ ಅಕ್ಕಿಯನ್ನು ಮಾರಾಟ ಮಾಡುತ್ತಿರುವ ಕೇಂದ್ರ ಸರ್ಕಾರದ ನೀತಿ ಸರಿಯಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಭಾರತದ ಎಥೆನಾಲ್‌ ಗಣಿತವೇ ಸರಿಯಾಗಿ ಹೊಂದಿಕೆಯಾಗುತ್ತಿಲ್ಲ. ಆಹಾರ ಭದ್ರತೆಗಾಗಿ ಸರ್ಕಾರ ರೈತರಿಂದ ಭತ್ತವನ್ನು ಖರೀದಿಸುತ್ತದೆ. ಇದಕ್ಕಾಗಿ ತೆರಿಗೆದಾರರ ಹಣ ಬಳಸಲಾಗುತ್ತದೆ. ಬಳಿಕ ಖರೀದಿಸಿದ ಧಾನ್ಯವನ್ನು ಸಂಗ್ರಹಿಸುವುದು, ಸಾಗಣೆ ಮಾಡುವುದು ಸೇರಿದಂತೆ ಸರ್ಕಾರದ ಮೇಲೆ ಮತ್ತಷ್ಟು ವೆಚ್ಚದ ಹೊರೆ ಬೀಳುತ್ತದೆ. ಇಷ್ಟೆಲ್ಲ ವೆಚ್ಚ ಮಾಡಿದ ಬಳಿಕ ಅದೇ ಅಕ್ಕಿಯನ್ನು ಎಥೆನಾಲ್‌ ಉತ್ಪಾದಕರಿಗೆ ಸ್ವಾಧೀನ ವೆಚ್ಚಕ್ಕಿಂತ ಸುಮಾರು ಶೇ.40ರಷ್ಟು ಕಡಿಮೆ ದರದಲ್ಲಿ ಮಾರಾಟ ಮಾಡುತ್ತಿರುವುದು ಯಾವ ರೀತಿಯ ಆರ್ಥಿಕ ನೀತಿ ಎಂದು ಅವರು ಪ್ರಶ್ನಿಸಿದ್ದಾರೆ.

ಈ ಸಂಪೂರ್ಣ ವ್ಯವಸ್ಥೆಯಿಂದ ನಿಜವಾಗಿ ಲಾಭ ಪಡೆಯುತ್ತಿರುವವರು ಯಾರು? ಎಂದು ಪ್ರಶ್ನಿಸಿರುವ ಸಚಿವರು, ತುರ್ತಾಗಿ ಸೃಷ್ಟಿಸಲಾದ ಎಥೆನಾಲ್‌ ಉತ್ಪಾದನಾ ಸಾಮರ್ಥ್ಯಕ್ಕೆ ಅಗತ್ಯವಾದ ಕಚ್ಚಾ ವಸ್ತು ಒದಗಿಸುವ ಉದ್ದೇಶದಿಂದ ಆಹಾರ ಧಾನ್ಯವನ್ನು ದೊಡ್ಡ ಪ್ರಮಾಣದಲ್ಲಿ ಎಥೆನಾಲ್‌ ಉತ್ಪಾದನೆಗೆ ಒದಗಿಸಲಾಗುತ್ತಿದೆಯೇ ಎಂದು ಕೇಳಿದ್ದಾರೆ.

ಇನ್ನೊಂದೆಡೆ, ಸರ್ಕಾರವೇ ಉತ್ಪಾದಕರಿಂದ ಹೆಚ್ಚಿನ ಬೆಲೆಗೆ ಎಥೆನಾಲ್‌ ಖರೀದಿಸಿ, ಅದನ್ನು ಪೆಟ್ರೋಲ್‌ನಲ್ಲಿ ಮಿಶ್ರಣ ಮಾಡುತ್ತಿದೆ. ಹೀಗಿರುವಾಗ ಧಾನ್ಯವನ್ನು ಕಡಿಮೆ ದರದಲ್ಲಿ ನೀಡಿ, ಬಳಿಕ ಅದೇ ಉದ್ಯಮದಿಂದ ಹೆಚ್ಚಿನ ಬೆಲೆಗೆ ಎಥೆನಾಲ್‌ ಖರೀದಿಸುವುದರಿಂದ ಅಂತಿಮವಾಗಿ ಸಾಮಾನ್ಯ ಗ್ರಾಹಕನಿಗೆ ಆಗುವ ಲಾಭವೇನು? ಎಂದು ಅವರು ಕಿಡಿಕಾರಿದ್ದಾರೆ.

ಎಥೆನಾಲ್‌ ಮಿಶ್ರಣದ ಪರಿಣಾಮವಾಗಿ ಪೆಟ್ರೋಲ್‌ ಬೆಲೆ ಸಾಮಾನ್ಯ ಜನರಿಗೆ ಕಡಿಮೆಯಾಗಿದೆಯೇ? ವಾಹನಗಳ ಮೈಲೇಜ್‌ ಮತ್ತು ನಿರ್ವಹಣಾ ವೆಚ್ಚದ ಮೇಲೆ ಉಂಟಾಗುವ ಪರಿಣಾಮವನ್ನು ಯಾರು ಪರಿಗಣಿಸುತ್ತಿದ್ದಾರೆ? ಎಂದು ಅವರು ಪ್ರಶ್ನಿಸಿದ್ದಾರೆ.

ಯಾರನ್ನು ಯಾರು ಸಬ್ಸಿಡಿ ಮಾಡುತ್ತಿದ್ದಾರೆ? ಈ ವ್ಯವಸ್ಥೆಯಲ್ಲಿ ನಿಜವಾದ ಲಾಭ ಯಾರಿಗೆ? ಎಂಬುದಕ್ಕೆ ಕೇಂದ್ರ ಸರ್ಕಾರ ಸ್ಪಷ್ಟವಾಗಿ ಉತ್ತರಿಸಬೇಕಾಗಿದೆ ಎಂದು ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ.ಆಹಾರ ಭದ್ರತೆಗಾಗಿ ಮೀಸಲಿಟ್ಟಿರುವ ಧಾನ್ಯವನ್ನು ಎಥೆನಾಲ್‌ ಉತ್ಪಾದನೆಗೆ ಬಳಸುವ ನೀತಿಯ ಆರ್ಥಿಕ, ಸಾಮಾಜಿಕ ಹಾಗೂ ಸಾರ್ವಜನಿಕ ಹಿತಾಸಕ್ತಿಯ ಪರಿಣಾಮಗಳ ಕುರಿತು ಕೇಂದ್ರ ಸರ್ಕಾರ ಪಾರದರ್ಶಕವಾಗಿ ಲೆಕ್ಕ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

RELATED ARTICLES
spot_img

Latest News