Homeರಾಜ್ಯರಾಜ್ಯಪಾಲರ ನಿರ್ಧಾರದ ಮೇಲೆ ನಾಗೇಂದ್ರ ಭವಿಷ್ಯ ನಿರ್ಧಾರ

ರಾಜ್ಯಪಾಲರ ನಿರ್ಧಾರದ ಮೇಲೆ ನಾಗೇಂದ್ರ ಭವಿಷ್ಯ ನಿರ್ಧಾರ

ಬೆಂಗಳೂರು,ಆ.25- ಕರ್ನಾಟಕ ಮಹರ್ಷಿ ವಾಲೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಬಹುಕೋಟಿ ಹಣ ವರ್ಗಾವಣೆ ಹಗರಣಕ್ಕೆ ಸಂಬಂಧಿಸಿದಂತೆ, ಸಚಿವ ಬಿ.ನಾಗೇಂದ್ರ ವಿರುದ್ಧ ಕಾನೂನು ಕ್ರಮ ಜರುಗಿಸಲು (ಪ್ರಾಸಿಕ್ಯೂಷನ್‌) ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌ ಅವರು, ಸಚಿವ ಸಂಪುಟ ಸಭೆಯ ಅಭಿಪ್ರಾಯ ಕೇಳಲು ಮುಂದಾಗಿರುವುದು ಕುತೂಹಲ ಮೂಡಿಸಿದೆ. ಒಂದು ವೇಳೆ ಸಚಿವ ಸಂಪುಟ ಸಭೆಯು ರಾಜ್ಯಪಾಲರ ಪತ್ರಕ್ಕೆ ಮನ್ನಣೆ ಕೊಡದಿದ್ದರೆ, ರಾಜ್ಯಪಾಲರು ಮುಂದೆ ತೆಗೆದುಕೊಳ್ಳುವ ನಿರ್ಧಾರ ಸಚಿವ ನಾಗೇಂದ್ರ ರಾಜಕೀಯ ಭವಿಷ್ಯವನ್ನು ತೀರ್ಮಾನ ಮಾಡಲಿದೆ.

ಜನಪ್ರತಿನಿಧಿಗಳ ವಿರುದ್ಧ ವಿಚಾರಣೆ ನಡೆಸಲು ಸಚಿವ ಸಂಪುಟ ಒಪ್ಪಿಗೆ ಕಡ್ಡಾಯ ಎಂಬುದು ಕೇವಲ ಔಪಚಾರಿಕ ಪ್ರಕ್ರಿಯೆ ಎಂದು ಹೇಳಲಾಗುತ್ತದೆ. ಏಕೆಂದರೆ, ಈ ಹಿಂದೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಡಿ ನೋಟಿಪೀಕೇಷನ್‌ ಪ್ರಕರಣದಲ್ಲಿ ಲೋಕಾಯುಕ್ತ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಲು ಅನುಮತಿ ನೀಡಬೇಕೆಂದು ಅಂದಿನ ರಾಜ್ಯಪಾಲ ಹಂಸರಾಜ್‌ ಭಾರದ್ವಾಜ್‌ ಅವರಿಗೆ ಪತ್ರ ಬರೆದಿದ್ದರು.

ಈ ಸಂದರ್ಭದಲ್ಲಿ ಸಚಿವ ಸಂಪುಟ ಸಭೆಯು ಯಡಿಯೂರಪ್ಪ ವಿರುದ್ಧ ಪ್ರಾಸಿಕ್ಯೂಷನ್‌ ಗೆ ಅನುಮತಿ ನೀಡಬಾರದು ಎಂದು ಒಂದು ಸಾಲಿನ ನಿರ್ಣಯವನ್ನು ತೆಗೆದುಕೊಂಡಿತ್ತು.ಆದರೆ ರಾಜ್ಯಪಾಲರು ಸಚಿವ ಸಂಪುಟ ಸಭೆಯನಿರ್ಣಯವನ್ನು ತಿರಸ್ಕರಿಸಿದ್ದರು ಎಂಬುದು ಉಲ್ಲೇಖ.ರಾಜ್ಯಪಾಲರ ಕಚೇರಿಯು ಈ ವಿಷಯದಲ್ಲಿ ಕಾನೂನು ಇಲಾಖೆಯ ಅಭಿಪ್ರಾಯ ಪಡೆಯುವ ಪ್ರಕ್ರಿಯೆಗೆ ಮುಂದಾಗಿದೆ. ರಾಜ್ಯಪಾಲರು ಸಚಿವರ ವಿರುದ್ಧದ ಪ್ರಾಸಿಕ್ಯೂಷನ್‌ ಅನುಮತಿ ವಿಚಾರದಲ್ಲಿ ಸರ್ಕಾರದ ನೆರವು ಮತ್ತು ಸಲಹೆಯನ್ನು ಪಡೆಯಬೇಕೇ ಎಂಬ ಪ್ರಶ್ನೆಯೂ ಇದರೊಂದಿಗೆ ಮುನ್ನೆಲೆಗೆ ಬಂದಿದೆ.

ವಾಲೀಕಿ ನಿಗಮದ ನಿಧಿಯ ದುರುಪಯೋಗ ಮತ್ತು ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ತನಿಖಾ ದಳ (ಸಿಬಿಐ) ಸಚಿವ ನಾಗೇಂದ್ರ ಅವರ ವಿರುದ್ಧ ಪ್ರಾಸಿಕ್ಯೂಷನ್‌ ಅನುಮತಿ ಕೋರಿ ರಾಜ್ಯಪಾಲರಿಗೆ ಅಧಿಕೃತ ಪತ್ರ ಬರೆದಿದೆ.

ರಾಜ್ಯಪಾಲರ ಕಚೇರಿಯು (ಲೋಕಭವನ) ಈ ಕುರಿತು ಕಾನೂನು ಇಲಾಖೆ ಹಾಗೂ ತಜ್ಞರ ಸಲಹೆಯನ್ನು ಪಡೆದುಕೊಂಡಿದ್ದು, ಸಚಿವ ಸಂಪುಟದ ಅಭಿಪ್ರಾಯ ಮತ್ತು ಸಂವಿಧಾನಿಕ ನಿಯಮಗಳ ಅಡಿಯಲ್ಲಿ ಮುಂದಿನ ನಿರ್ಧಾರ ಕೈಗೊಳ್ಳಲು ಸಿದ್ಧತೆ ನಡೆಸಿದೆ. ಸಿಬಿಐ ರಾಜ್ಯ ಸರ್ಕಾರಕ್ಕೆ ಮೊದಲು ಮಾಹಿತಿ ಅಥವಾ ಪತ್ರ ನೀಡಬೇಕಾಗಿತ್ತು ಎಂಬುದು ಸರ್ಕಾರದ ವಾದವಾಗಿದೆ.

ಇದೇ ವಿಚಾರ ಈಗ ಕಾನೂನು ಮತ್ತು ಸಂವಿಧಾನಾತಕ ಚರ್ಚೆಯನ್ನೂ ಹುಟ್ಟುಹಾಕಿದೆ. ವಿಶೇಷವಾಗಿ, ರಾಜ್ಯ ವ್ಯಾಪ್ತಿಯಲ್ಲಿ ಸಿಬಿಐ ತನಿಖೆ ನಡೆಸುವ ಅಧಿಕಾರ, ರಾಜ್ಯದ ಒಪ್ಪಿಗೆ, ಹಾಗೂ ಹಾಲಿ ಸಚಿವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವ ಸಂದರ್ಭದಲ್ಲಿ ರಾಜ್ಯಪಾಲರ ಅಧಿಕಾರದ ಮಿತಿಗಳೇನು ಎಂಬುದು ಪ್ರಮುಖ ಪ್ರಶ್ನೆಗಳಾಗಿವೆ.

ಹಿನ್ನೆಲೆ ಮತ್ತು ಕಾನೂನು ಚೌಕಟ್ಟು:
2024ರ ಲೋಕಸಭಾ ಚುನಾವಣೆಗೆ ಮುನ್ನ ವಾಲೀಕಿ ನಿಗಮದಲ್ಲಿ ನಡೆದ ಹಣಕಾಸು ಅಕ್ರಮಗಳು ಮತ್ತು ವರ್ಗಾವಣೆ ಪ್ರಕರಣಗಳು ಬೆಳಕಿಗೆ ಬಂದಾಗ ಬಿ. ನಾಗೇಂದ್ರ ಅವರು ಎಸ್‌‍ಟಿ ಕಲ್ಯಾಣ ಸಚಿವರಾಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಕ್ರಿಮಿನಲ್‌ ಪಿತೂರಿ ಆರೋಪದ ಮೇರೆಗೆ ಹಾಗೂ ಇಡಿ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಕಾನೂನು ಕ್ರಮಕ್ಕೆ ಅನುಮತಿ ಕೋರಿ ಪ್ರತ್ಯೇಕ ಮನವಿಗಳನ್ನು ಲೋಕಭವನಕ್ಕೆ ಸಲ್ಲಿಸಿವೆ.

ಈ ಕುರಿತು ಪ್ರತಿಕ್ರಿಯಿಸಿದ್ದ ಗೃಹ ಸಚಿವ ಪ್ರಿಯಾಂಕ್‌ ಖರ್ಗೆ, ಸಚಿವರೊಬ್ಬರ ವಿರುದ್ಧ ಕಾನೂನು ಕ್ರಮ ಜರುಗಿಸಲು ರಾಜ್ಯಪಾಲರು ನೇರವಾಗಿ ಅನುಮತಿ ನೀಡಬಹುದೇ ಎಂಬ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು, ಇದಕ್ಕೆ ರಾಜ್ಯ ಸರ್ಕಾರದ ಒಪ್ಪಿಗೆ ಕಡ್ಡಾಯವಾಗಿ ಅಗತ್ಯವಿರುತ್ತದೆ ಎಂದು ಪ್ರತಿಪಾದಿಸಿದ್ದರು.

ಭಾರತೀಯ ಕಾನೂನು ಚೌಕಟ್ಟಿನನ್ವಯ, ದೆಹಲಿ ವಿಶೇಷ ಪೊಲೀಸ್‌‍ ಸ್ಥಾಪನಾ ಕಾಯಿದೆ, 1946ರ ಸೆಕ್ಷನ್‌ 6ರ ಪ್ರಕಾರ ಸಿಬಿಐ ತನ್ನ ತನಿಖಾ ವ್ಯಾಪ್ತಿಯನ್ನು ಚಲಾಯಿಸಲು ಸಾಮಾನ್ಯವಾಗಿ ರಾಜ್ಯ ಸರ್ಕಾರದ ಒಪ್ಪಿಗೆಯನ್ನು ಅಪೇಕ್ಷಿಸುತ್ತದೆ. ಆದಾಗ್ಯೂ ಉಚ್ಚ ನ್ಯಾಯಾಲಯ ಅಥವಾ ಸರ್ವೋಚ್ಚ ನ್ಯಾಯಾಲಯಗಳು ಸ್ವಯಂಪ್ರೇರಿತವಾಗಿ ಅಥವಾ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ಮೇರೆಗೆ ಸಿಬಿಐ ತನಿಖೆಗೆ ಆದೇಶಿಸಿದ ಸಂದರ್ಭಗಳಲ್ಲಿ ಅಥವಾ ಕೇಂದ್ರ ಸರ್ಕಾರದ ನೌಕರರು ಭಾಗಿಯಾದಾಗ ಇಂತಹ ವಿಶೇಷ ಒಪ್ಪಿಗೆಯ ಅಗತ್ಯವಿರುವುದಿಲ್ಲ ಎಂದು ಕಾನೂನು ತಜ್ಞರು ಅಭಿಪ್ರಾಯಪಡುತ್ತಾರೆ.

ಸಚಿವರು ಮತ್ತು ಶಾಸಕರ ವಿರುದ್ಧದ ಪ್ರಾಸಿಕ್ಯೂಷನ್‌ ಮಂಜೂರಾತಿ ವಿಷಯಗಳಲ್ಲಿ ರಾಜ್ಯಪಾಲರು ಏಕಪಕ್ಷೀಯವಾಗಿ ನಿರ್ಧಾರ ಕೈಗೊಳ್ಳಲು ಸಾಧ್ಯವಿದೆಯೇ ಅಥವಾ ಸರ್ಕಾರದ ಒಪ್ಪಿಗೆ ಕಡ್ಡೇಪಾಯವೇ ಎಂಬ ಬಗ್ಗೆ ಲೋಕಭವನವು ಕಾನೂನು ತಜ್ಞರಿಂದ ಸ್ಪಷ್ಟನೆ ಹಾಗೂ ಸಲಹೆಯನ್ನು ಪಡೆದುಕೊಂಡಿದೆ. ಬಂದಿರುವ ಕಾನೂನು ಅಭಿಪ್ರಾಯದ ಮೇರೆಗೆ, ಈ ಪ್ರಕ್ರಿಯೆಯಲ್ಲಿ ರಾಜ್ಯ ಸರ್ಕಾರದ ಅಧಿಕೃತ ಅಭಿಪ್ರಾಯವನ್ನು ಪಡೆದು ಮುಂದಿನ ಕ್ರಮ ಜರುಗಿಸಲು ನಿರ್ಧರಿಸಲಾಗಿದೆ.

RELATED ARTICLES
spot_img

Latest News