Homeರಾಜ್ಯಪಿಎಸ್‌‍ಐ ಹಗರಣ : ಎಡಿಜಿಪಿ ವಿರುದ್ಧ ತನಿಖೆಗೆ ಸಮ್ಮತಿ

ಪಿಎಸ್‌‍ಐ ಹಗರಣ : ಎಡಿಜಿಪಿ ವಿರುದ್ಧ ತನಿಖೆಗೆ ಸಮ್ಮತಿ

PSI scam: Investigation against ADGP approved

ಬೆಂಗಳೂರು,ಜು.11- ಕರ್ನಾಟಕದ ಪೊಲೀಸ್‌‍ ನೇಮಕಾತಿ ಇತಿಹಾಸದಲ್ಲೇ ಅತ್ಯಂತ ದೊಡ್ಡ ಹಗರಣವೆಂದು ಗುರುತಿಸಲ್ಪಟ್ಟ 545 ಪಿಎಸ್‌‍ಐ ನೇಮಕಾತಿ ಅಕ್ರಮ ಪ್ರಕರಣವು, ನಾಲ್ಕು ವರ್ಷಗಳ ಸುದೀರ್ಘ ಅವಧಿಯ ಬಳಿಕ ಮತ್ತೊಮೆ ರಾಜ್ಯ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಅಮಾನತ್ತಿನಲ್ಲಿರುವ ಹಿರಿಯ ಐಪಿಎಸ್‌‍ ಅಧಿಕಾರಿ, ಎಡಿಜಿಪಿ ಅಮೃತ್‌ ಪೌಲ್‌ ವಿರುದ್ಧ ಇಲಾಖಾ ತನಿಖೆಗೆ ರಾಜ್ಯ ಸರ್ಕಾರ ಗ್ರೀನ್‌ ಸಿಗ್ನಲ್‌ ನೀಡಿದ್ದು, ಇದು ಆಡಳಿತಾರೂಢ ಕಾಂಗ್ರೆಸ್‌‍ ಸರ್ಕಾರದ ಮಹತ್ವದ ನಡೆಯಾಗಿ ಪರಿಣಮಿಸಿದೆ.

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ (ಆಂಖ) ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರ ಅನುಮೋದನೆಯೊಂದಿಗೆ ಈ ತನಿಖೆಗೆ ಚಾಲನೆ ದೊರೆತಿದೆ. ಅಖಿಲ ಭಾರತ ಸೇವೆ ನಿಯಮಗಳಡಿ ಅಮೃತ್‌ ಪೌಲ್‌ ಅವರಿಗೆ ನೋಟಿಸ್‌‍ ಜಾರಿ ಮಾಡಲಾಗಿದ್ದು, ನೇಮಕಾತಿ ಅಕ್ರಮದ ವೇಳೆ ಅವರು ಎಸಗಿದ ಲೋಪಗಳು ಮತ್ತು ಭ್ರಷ್ಟಾಚಾರದ ಆರೋಪಗಳ ಕುರಿತು ವಿಚಾರಣೆಗೆ ಹಾಜರಾಗಿ ಹೇಳಿಕೆ ನೀಡಲು ಸೂಚಿಸಲಾಗಿದೆ.

ಪಿಎಸ್‌‍ಐ ಹಗರಣವು ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದ್ದರೂ, ಸದ್ಯದ ಕಾಂಗ್ರೆಸ್‌‍ ಸರ್ಕಾರ ಈ ವಿಷಯವನ್ನು ಮರೆತಿಲ್ಲ ಎಂಬುದನ್ನು ಈ ನಡೆ ತೋರಿಸುತ್ತದೆ. ಅಮೃತ್‌ ಪೌಲ್‌ ಅವರಂತಹ ಉನ್ನತ ಐಪಿಎಸ್‌‍ ಅಧಿಕಾರಿಯೊಬ್ಬರ ವಿರುದ್ಧ ನೇರ ಇಲಾಖಾ ತನಿಖೆಗೆ ಆದೇಶಿಸುವುದು ಸರ್ಕಾರದ ಪಾರದರ್ಶಕತೆಯ ನಿಲುವನ್ನು ಬಿಂಬಿಸುವ ಪ್ರಯತ್ನವಾಗಿದೆ.

ಪ್ರತಿಪಕ್ಷಗಳು ಸರ್ಕಾರದ ಆಡಳಿತದ ಬಗ್ಗೆ ಟೀಕೆಗಳನ್ನು ಮಾಡುತ್ತಿರುವ ಹೊತ್ತಲ್ಲೇ, ಇಂತಹ ಹಳೆಯ ಹಗರಣಗಳನ್ನು ಕೆದಕಿ ತನಿಖೆ ಚುರುಕುಗೊಳಿಸುವುದು ರಾಜಕೀಯವಾಗಿ ಕಾಂಗ್ರೆಸ್‌‍ಗೆ ಬಲ ನೀಡುವ ತಂತ್ರವಾಗಿದೆ. ಇದು ಹಿಂದಿನ ಸರ್ಕಾರದ ಅವಧಿಯಲ್ಲಿನ ಭ್ರಷ್ಟಾಚಾರವನ್ನು ಮುನ್ನೆಲೆಗೆ ತಂದು, ಪ್ರತಿಪಕ್ಷಗಳನ್ನು ರಕ್ಷಣಾತಕ ಧೋರಣೆಗೆ ತಳ್ಳುವ ರಾಜಕೀಯ ಅಸ್ತ್ರವಾಗಿದೆ.

ಅಮೃತ್‌ ಪೌಲ್‌ ಅವರು ಜಾಮೀನಿನ ಮೇಲೆ ಹೊರಗಿದ್ದರೂ, ಇಲಾಖಾ ತನಿಖೆಯು ಅವರ ಸೇವೆಯ ಅಂತ್ಯ ಅಥವಾ ಕಠಿಣ ಶಿಸ್ತುಕ್ರಮಕ್ಕೆ ದಾರಿ ಮಾಡಿಕೊಡಬಹುದು. ಹಗರಣದಲ್ಲಿ ಭಾಗಿಯಾದ ಉನ್ನತ ಅಧಿಕಾರಿಗಳಿಗೆ ಕಠಿಣ ಸಂದೇಶ ರವಾನಿಸುವುದು ಮತ್ತು ತನಿಖೆಯನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವುದು ಈಗ ಸರ್ಕಾರದ ಮುಂದಿರುವ ಪ್ರಮುಖ ಸವಾಲಾಗಿದೆ.

ಪಿಎಸ್‌‍ಐ ಹಗರಣದ ಈ ಹೊಸ ತಿರುವು ರಾಜ್ಯದ ಆಡಳಿತ ಯಂತ್ರ ಮತ್ತು ಪೊಲೀಸ್‌‍ ಇಲಾಖೆಯ ಇಮೇಜ್‌ ಮೇಲೆ ನೇರ ಪರಿಣಾಮ ಬೀರಲಿದೆ. ಡಿ.ಕೆ.ಶಿವಕುಮಾರ್‌ ಅವರ ಈ ನಡೆ, ಮುಂಬರುವ ದಿನಗಳಲ್ಲಿ ತನಿಖೆಯನ್ನು ಯಾವ ದಿಕ್ಕಿನಲ್ಲಿ ಕೊಂಡೊಯ್ಯುತ್ತದೆ ಮತ್ತು ಇದರ ರಾಜಕೀಯ ಪರಿಣಾಮಗಳು ಏನಿರಲಿವೆ ಎಂಬುದು ಕುತೂಹಲ ಮೂಡಿಸಿದೆ.
ಸರ್ಕಾರದ ಈ ಕ್ರಮವು ಆರೋಪಿಗಳಿಗೆ ಕಾನೂನಿನ ಭಯವನ್ನು ಹುಟ್ಟಿಸುವುದರ ಜೊತೆಗೆ, ತನಿಖೆಯ ವೇಗವನ್ನು ಹೆಚ್ಚಿಸುವ ನಿರೀಕ್ಷೆಯಿದೆ.

RELATED ARTICLES

Latest News