ಬೆಂಗಳೂರು,ಜು.11- ರಾಜ್ಯ ಸರ್ಕಾರದ ವೈಫಲ್ಯಗಳ ವಿರುದ್ಧದ ಹೋರಾಟವನ್ನು ತೀವ್ರಗೊಳಿಸಲು ಮತ್ತು ಮುಂಬರುವ ಉಪಚುನಾವಣೆಗಳಲ್ಲಿ ಒಗ್ಗಟ್ಟಿನಿಂದ ಸ್ಪರ್ಧಿಸಲು ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಪಕ್ಷಗಳು ನಿರ್ಧರಿಸಿವೆ. ಈ ಸಂಬಂಧ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಹಾಗೂ ಬಿಜೆಪಿ ರಾಜ್ಯಧ್ಯಕ್ಷ ಬಿ.ವೈ.ವಿಜಯೇಂದ್ರ ಅವರುಗಳು ನಡೆಸಿದ ಸಭೆಯಲ್ಲಿ ಕೆಲವು ಮಹತ್ವದ ತೀರ್ಮಾನಗಳನ್ನು ತೆಗೆದುಕೊಂಡಿದ್ದಾರೆ.
ಭವಿಷ್ಯದ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ಹಾಗೂ ಜೆಡಿಎಸ್ ನಡುವಿನ ಮೈತ್ರಿಯನ್ನು ಸಾಂಸ್ಥಿಕವಾಗಿ ಬಲಪಡಿಸಲು ಸಮನ್ವಯ ಸಮಿತಿ ರಚನೆಗೆ ಅಂತಿಮ ಮುದ್ರೆ ಬಿದ್ದಿದೆ.
ದೀರ್ಘಕಾಲದ ಬೇಡಿಕೆಯಾಗಿದ್ದ ಸಮನ್ವಯ ಸಮಿತಿಯ ರಚನೆಗೆ ನಾಯಕರು ಒಪ್ಪಿಗೆ ನೀಡಿದ್ದು, ಇದು ಪಕ್ಷಗಳ ನಡುವಿನ ತಳಮಟ್ಟದ ಸಂವಹನ ಮತ್ತು ನಿರ್ಧಾರಗಳನ್ನು ಸುಗಮಗೊಳಿಸಲಿದೆ. ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟದ ನಡುವೆ ಸಮನ್ವಯತೆಯನ್ನು ಕಾಯ್ದುಕೊಳ್ಳಲು ಮತ್ತು ಕಾಂಗ್ರೆಸ್ ಸರ್ಕಾರದ ವಿರುದ್ಧ ಒಟ್ಟಾಗಿ ಹೋರಾಟ ನಡೆಸಲು ಉಭಯ ಪಕ್ಷಗಳು ಮಹತ್ವದ ನಿರ್ಧಾರ ಕೈಗೊಂಡಿವೆ. ಸಭೆಯಲ್ಲಿ ಮೈತ್ರಿಯ ಮುಂದಿನ ಕಾರ್ಯತಂತ್ರಗಳ ಬಗ್ಗೆ ನಾಯಕರು ವಿಸ್ತೃತವಾಗಿ ಚರ್ಚಿಸಲಾಗಿದೆ.
ಹಿರಿಯೂರು ಉಪಚುನಾವಣೆಯ ಟಿಕೆಟ್ ವಿಚಾರದಲ್ಲಿ ಜೆಡಿಎಸ್ ಆಕಾಂಕ್ಷೆ ವ್ಯಕ್ತಪಡಿಸಿದ್ದರೆ, ಬಿಜೆಪಿ ತನ್ನ ಹಿಂದಿನ ಗೆಲುವಿನ ಹಿನ್ನೆಲೆಯನ್ನು ಮುಂದಿಟ್ಟಿದೆ. ಮುಂಬರುವ ನಾಲ್ಕು ವಿಧಾನ ಪರಿಷತ್ ಸ್ಥಾನಗಳಲ್ಲಿ ಕನಿಷ್ಠ ಮೂರು ಕ್ಷೇತ್ರಗಳಲ್ಲಿ ಜೆಡಿಎಸ್ ಬೆಂಬಲ ನೀಡಬೇಕೆಂದು ಬಿಜೆಪಿ ಮನವಿ ಮಾಡಿದೆ. ರಾಜ್ಯ ಸರ್ಕಾರದ ವಿರುದ್ಧದ ಹೋರಾಟಗಳಲ್ಲಿ ಒಮತ ಮೂಡಿಸಲು ಇನ್ನು ಮುಂದೆ ಜಂಟಿ ಸಭೆಗಳನ್ನು ನಡೆಸಿ ಮುಂದುವರಿಯಲು ತೀರ್ಮಾನಿಸಲಾಗಿದೆ.
ಈ ರಾಜಕೀಯ ಬೆಳವಣಿಗೆಯು ರಾಜ್ಯದಲ್ಲಿ ಪ್ರಬಲ ವಿರೋಧ ಪಕ್ಷದ ಅಸ್ತಿತ್ವವನ್ನು ಗಟ್ಟಿಗೊಳಿಸುವ ಪ್ರಯತ್ನವಾಗಿದೆ. ಸಮನ್ವಯ ಸಮಿತಿಯ ಸ್ಥಾಪನೆಯು ಪಕ್ಷಗಳ ನಡುವಿನ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಶಮನಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ವಿಶೇಷವಾಗಿ ಉಪಚುನಾವಣೆಗಳು ಮತ್ತು ಪರಿಷತ್ ಚುನಾವಣೆಗಳ ಸಂದರ್ಭದಲ್ಲಿ ಪರಸ್ಪರ ವೋಟ್ ಬ್ಯಾಂಕ್ ವರ್ಗಾವಣೆಯು ಬಿಜೆಪಿ-ಜೆಡಿಎಸ್ ಮೈತ್ರಿಗೆ ದೊಡ್ಡ ಬಲ ತುಂಬುವ ಸಾಧ್ಯತೆಯಿದೆ.
ಸಮನ್ವಯ ಸಮಿತಿ ರಚನೆಯ ಉದ್ದೇಶ :
ಇತ್ತೀಚೆಗೆ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಉಭಯ ಪಕ್ಷಗಳ ಶಾಸಕರಿಂದ ನಡೆದ ಅಡ್ಡ ಮತದಾನ ಘಟನೆಯು ಮೈತ್ರಿಕೂಟದಲ್ಲಿ ಗೊಂದಲಕ್ಕೆ ಕಾರಣವಾಗಿತ್ತು. ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಲು ಮತ್ತು ಪಕ್ಷಗಳ ನಡುವಿನ ಭಿನ್ನಾಭಿಪ್ರಾಯಗಳನ್ನು ಆರಂಭದಲ್ಲೇ ಬಗೆಹರಿಸಲು ಈ ಸಮಿತಿಯನ್ನು ರಚಿಸಲಾಗಿದೆ.
ಕಾಂಗ್ರೆಸ್ ಸರ್ಕಾರದ ವೈಫಲ್ಯಗಳ ವಿರುದ್ಧ ರಾಜ್ಯಮಟ್ಟದಲ್ಲಿ ಪ್ರಬಲವಾಗಿ ಧ್ವನಿ ಎತ್ತಲು ಮತ್ತು ಎರಡು ಪಕ್ಷಗಳ ನಡುವೆ ಉತ್ತಮ ಸಮನ್ವಯ ಸಾಧಿಸಲು ಈ ವೇದಿಕೆ ಸಹಕಾರಿಯಾಗಲಿದೆ.
ಸದಸ್ಯರ ಸಂಖ್ಯೆ: ಸಮನ್ವಯ ಸಮಿತಿಯಲ್ಲಿ ಉಭಯ ಪಕ್ಷಗಳಿಂದ ತಲಾ 8 ರಿಂದ 10 ಜನ ಹಿರಿಯ ನಾಯಕರನ್ನು ಒಳಗೊಂಡ ತಂಡವನ್ನು ರಚಿಸಲಾಗಿದೆ. ಸಮಿತಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿದಂತೆ ಪಕ್ಷದ ಪ್ರಮುಖ ಹಿರಿಯ ನಾಯಕರು ಈ ಸಮಿತಿಯ ಭಾಗವಾಗಿದ್ದಾರೆ.
ಈ ಸಮಿತಿಯು ನಿಯಮಿತವಾಗಿ ಸಭೆ ಸೇರಲಿದ್ದು, ರಾಜ್ಯದ ರಾಜಕೀಯ ವಿದ್ಯಮಾನಗಳ ಮೇಲೆ ನಿಗಾ ವಹಿಸುತ್ತದೆ. ಪರಸ್ಪರ ನಂಬಿಕೆ ಮತ್ತು ವಿಶ್ವಾಸವನ್ನು ಹೆಚ್ಚಿಸಿಕೊಳ್ಳುವ ಮೂಲಕ ಮುಂಬರುವ ದಿನಗಳಲ್ಲಿ ಸರ್ಕಾರದ ವಿರುದ್ಧ ಆಕ್ರಮಣಕಾರಿ ಹೋರಾಟಗಳನ್ನು ರೂಪಿಸುವುದು ಈ ಸಮನ್ವಯ ಸಮಿತಿಯ ಮುಖ್ಯ ಗುರಿಯಾಗಿದೆ.
ಸಮನ್ವಯ ಸಮಿತಿ
ಸಮಿತಿಯ ಗಾತ್ರ- ಒಟ್ಟು 6 ಸದಸ್ಯರ ಸಮಿತಿ
ಬಿಜೆಪಿ ಪ್ರತಿನಿಧಿಗಳು
ಬಿ.ವೈ.ವಿಜಯೇಂದ್ರ (ರಾಜ್ಯಾಧ್ಯಕ್ಷ)
ಆರ್.ಅಶೋಕ್ (ವಿರೋಧ ಪಕ್ಷದ ನಾಯಕ)
ಪ್ರಹ್ಲಾದ್ ಜೋಶಿ (ಕೇಂದ್ರ ಸಚಿವರು)
ಜೆಡಿಎಸ್ ಪ್ರತಿನಿಧಿಗಳು:
ಎಚ್.ಡಿ. ಕುಮಾರಸ್ವಾಮಿ
ಇತರೆ ಇಬ್ಬರು ಸದಸ್ಯರು (ಶೀಘ್ರದಲ್ಲೇ ಘೋಷಣೆ)
