ಕಾನ್ಸಾಸ್ ಸಿಟಿ, ಜು. 12- ಹೆಚ್ಚುವರಿ ಸಮಯದ ಜುಲಿಯನ್ ಅಲ್ವಾರೆಸ್ ಬಾರಿಸಿದ ಅದ್ಭುತ ಗೋಲಿನ ನೆರವಿನಿಂದ ಹಾಲಿ ಚಾಂಪಿಯನ್ ಅರ್ಜೆಂಟೀನಾ ತಂಡವು ಸ್ವಿಟ್ಜರ್‌ಲೆಂಡ್ ವಿರುದ್ಧ 3-1 ಅಂತರದ ಗೆಲುವು ಸಾಧಿಸಿ ಫಿಫಾ ವಿಶ್ವಕಪ್ ಫುಟ್‌ಬಾಲ್ ಟೂರ್ನಿಯ ಸೆಮಿಫೈನಲ್ ಪ್ರವೇಶಿಸಿದೆ.
ಕಳೆದ ರಾತ್ರಿ ನಡೆದ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಅಲೆಕ್ಸಿಸ್‌ಮ್ಯಾಕ್‌ಅಲಿಸ್ಟರ್ ಹಾಗೂ ಹೆಚ್ಚುವರಿ ಸಮಯದ ಕೊನೆಯ ಕ್ಷಣಗಳಲ್ಲಿ ಲೌಟಾರೊ ಮಾರ್ಟಿನೆಜ್ ಕೂಡ ಗೋಲು ದಾಖಲಿಸಿ ಅರ್ಜೆಂಟೀನಾದ ಗೆಲುವನ್ನು ಖಚಿತಪಡಿಸಿದರು.ಬುಧವಾರ ಅಟ್ಲಾಂಟಾದಲ್ಲಿ ನಡೆಯಲಿರುವ ಸೆಮಿಫೈನಲ್‌ನಲ್ಲಿ ಅರ್ಜೆಂಟೀನಾ ತಂಡ ಇಂಗ್ಲೆಂಡ್‌ನ್ನು ಎದುರಿಸಲಿದೆ. ಇಂಗ್ಲೆಂಡ್ ತನ್ನ ಕ್ವಾರ್ಟರ್‌ಫೈನಲ್‌ನಲ್ಲಿ ನಾರ್ವೆ ವಿರುದ್ಧ 2-1 ಅಂತರದಿಂದ ಜಯ ಸಾಧಿಸಿದೆ.
ಪಂದ್ಯದ ಆರಂಭದಲ್ಲೇ ಲಿಯೋನೆಲ್ ಮೆಸ್ಸಿಅವರ ಸತತ ಒಂಬತ್ತು ಪಂದ್ಯಗಳ ವಿಶ್ವಕಪ್ ಗೋಲುಗಳ ಸರಣಿ ಈ ಪಂದ್ಯದಲ್ಲಿ ಅಂತ್ಯಗೊಂಡರೂ, ಎರಡನೇ ವಿಶ್ವಕಪ್ ಪ್ರಶಸ್ತಿ ಗೆಲ್ಲುವ ಅವರ ಕನಸು ಜೀವಂತವಾಗಿದೆ.ಅರ್ಜೆಂಟೀನಾ, ಇಂಗ್ಲೆಂಡ್, ಫ್ರಾನ್‌್ಸ ಹಾಗೂ ಸ್ಪೇನ್ ತಂಡಗಳು ಸೆಮಿಫೈನಲ್ ಪ್ರವೇಶಿಸಿದ್ದು, ಫಿಫಾ ವಿಶ್ವ ಶ್ರೇಯಾಂಕದ ಅಗ್ರ ನಾಲ್ಕು ತಂಡಗಳು ಒಂದೇ ವಿಶ್ವಕಪ್‌ನಲ್ಲಿ ಸೆಮಿಫೈನಲ್ ತಲುಪಿರುವುದು ಇದೇ ಮೊದಲು.
ಪಂದ್ಯದ ದ್ವಿತೀಯಾರ್ಧದಲ್ಲಿ ವಿವಾದಾತಕ ತೀರ್ಪೊಂದು ಪಂದ್ಯದ ದಿಕ್ಕನ್ನೇ ಬದಲಿಸಿತು. 67ನೇ ನಿಮಿಷದಲ್ಲಿ ಡ್ಯಾನ್ ಎನ್‌ಡೊಯೆ ಗೋಲು ಬಾರಿಸಿ ಸ್ವಿಟ್ಜರ್‌ಲೆಂಡ್‌ಗೆ 1-1 ಸಮಬಲ ತಂದುಕೊಟ್ಟ ಕೆಲವೇ ಕ್ಷಣಗಳ ಬಳಿಕ, ಅರ್ಜೆಂಟೀನಾದ ಲಿಯಾಂಡ್ರೊ ಪರೆಡಿಸ್ ಅವರು ಬ್ರೀಲ್ ಎಂಬೊಲೊ ವಿರುದ್ಧ ಮಾಡಿದ ಟ್ಯಾಕಲ್‌ಗೆ ಹಳದಿ ಕಾರ್ಡ್ ತೋರಿಸಲಾಯಿತು.
ಆದರೆ ವಿಡಿಯೊ ಪರಿಶೀಲನೆಯಲ್ಲಿ ಪರೆಡಿಸ್ ಸ್ಪರ್ಶಿಸುವ ಮುನ್ನವೇ ಎಂಬೊಲೊ ಬಿದ್ದಿರುವುದು ಕಂಡುಬಂದಿತು. ಪರಿಣಾಮ ತಪ್ಪು ಆಟಗಾರನಿಗೆ ಕಾರ್ಡ್ ತೋರಿಸಿದ ನಿಯಮದಡಿ ವೀಡಿಯೊ ಸಹಾಯಕ ರೆಫರಿ ಮಧ್ಯಪ್ರವೇಶಿಸಿ ತೀರ್ಪು ಬದಲಿಸಿದರು. ಈಗಾಗಲೇ ಒಂದು ಹಳದಿ ಕಾರ್ಡ್ ಪಡೆದಿದ್ದ ಎಂಬೊಲೊಗೆ ಎರಡನೇ ಹಳದಿ ಕಾರ್ಡ್ ವಿಧಿಸಲ್ಪಟ್ಟ ಪರಿಣಾಮ ಅವರು ಪಂದ್ಯದಿಂದ ಹೊರಹೋಗಬೇಕಾಯಿತು. ಇದರಿಂದ ಸ್ವಿಟ್ಜರ್‌ಲೆಂಡ್ 10 ಆಟಗಾರರೊಂದಿಗೆ ಪಂದ್ಯ ಮುಂದುವರಿಸಬೇಕಾಯಿತು.
ನಿರ್ಣಾಯಕ ಮುನ್ನಡೆಗಾಗಿ ಅರ್ಜೆಂಟೀನಾ ತೀವ್ರ ಒತ್ತಡ ಹೇರಿದರೂ, ನಿಗದಿತ ಸಮಯದಲ್ಲಿ ಮತ್ತೊಂದು ಗೋಲು ಬರಲಿಲ್ಲ. ಅಂತಿಮವಾಗಿ ಹೆಚ್ಚುವರಿ ಸಮಯದ 112ನೇ ನಿಮಿಷದಲ್ಲಿ ಅಲ್ವಾರೆಸ್ ದೂರದ ಅಂತರದಿಂದ ಸಿಡಿಸಿದ ಭರ್ಜರಿ ಶಾಟ್ ಗೋಲಾಗಿ ಪರಿಣಮಿಸಿ ಅರ್ಜೆಂಟೀನಾಗೆ 2-1 ಮುನ್ನಡೆ ತಂದುಕೊಟ್ಟಿತು.
ಹೆಚ್ಚುವರಿ ಸಮಯದ ಕೊನೆಯ ಕ್ಷಣಗಳಲ್ಲಿ ಲೌಟಾರೊ ಮಾರ್ಟಿನೆಜ್ ಮತ್ತೊಂದು ಗೋಲು ದಾಖಲಿಸಿ ಅರ್ಜೆಂಟೀನಾದ ಗೆಲುವನ್ನು 3-1ಕ್ಕೆ ವಿಸ್ತರಿಸಿದರು.ಈ ಮೂಲಕ ವಿಶ್ವಕಪ್‌ನಲ್ಲಿ ಅರ್ಜೆಂಟೀನಾದ ಅಜೇಯ ಸರಣಿ 12 ಪಂದ್ಯಗಳಿಗೆ ಏರಿಕೆಯಾಗಿದೆ. ಮತ್ತೊಂದೆಡೆ, 1954ರ ಬಳಿಕ ಮೊದಲ ಬಾರಿಗೆ ವಿಶ್ವಕಪ್ ಕ್ವಾರ್ಟರ್‌ಫೈನಲ್ ತಲುಪಿದ್ದ ಸ್ವಿಟ್ಜರ್‌ಲೆಂಡ್‌ನ ಸೆಮಿಫೈನಲ್ ಕನಸು ಮತ್ತೊಮೆ ಭಗ್ನವಾಗಿದೆ.
