ಬೆಂಗಳೂರು,ಜು.14- ತಪ್ಪಿಸಿಕೊಂಡಿದ್ದ ಬಾಲಕನನ್ನು ಹೊಯ್ಸಳ ಪೊಲೀಸರು ಪತ್ತೆಹಚ್ಚಿ ಸುರಕ್ಷಿತವಾಗಿ ಕರೆ ತಂದಿದ್ದಾರೆ.ಎಲೆಕ್ಟ್ರಾನಿಕ್ ಸಿಟಿಯ ಡಿ ಮಾರ್ಟ್ ಬಳಿ ಎಲ್ಲಿಗೆ ಹೋಗಬೇಕೆಂದು ತಿಳಿಯದೇ ನಿಂತಿದ್ದ ಈ ಬಾಲಕನನ್ನು ಸಾರ್ವಜನಿಕರು ಗಮನಿಸಿ ನಮ 112 ಗೆ ಕರೆ ಮಾಡಿ ಮಾಹಿತಿ ನೀಡಿದ್ದು, ಆ ಮಾಹಿತಿಯಂತೆ ಹೊಯ್ಸಳ ಪೊಲೀಸರು ಸ್ಥಳಕ್ಕೆ ದಾವಿಸಿ ಬಾಲಕನನ್ನು ರಕ್ಷಿಸಿ ವಿಚಾರಣೆ ನಡೆಸಿದಾಗ ಮನೆ ಹೊಂಗಸಂದ್ರ ಎಂದು ಹೇಳಿದ್ದಾನೆ. ತಕ್ಷಣ ಹೊಂಗಸಂದ್ರದಲ್ಲಿ ಬಾಲಕನ ಪೋಷಕರನ್ನು ಪತ್ತೆಹಚ್ಚಿ ಅವರಿಗೆ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮೊಬೈಲ್ ಪತ್ತೆ:
ಕಳೆದುಕೊಂಡಿದ್ದ ಮೊಬೈಲ್‌ನ್ನು ಸಿಸಿ ಟಿವಿ ದೃಶ್ಯಾವಳಿಯನ್ನಾಧರಿಸಿ ಅದನ್ನು ಪತ್ತೆಹಚ್ಚಿ ವಾರಸುದಾರರಿಗೆ ಹಸ್ತಾಂತರಿಸಲಾಗಿದೆ.ಬಿಬಿಎಂಪಿ ಕಚೇರಿಗೆ ಭೇಟಿ ನೀಡಿದ್ದ ಮಹಿಳೆಯೊಬ್ಬರು ಮೊಬೈಲ್ ಕಳೆದು ಹೋಗಿರುವ ಬಗ್ಗೆ ನಮ 112ಗೆ ಮಾಹಿತಿ ನೀಡಿದ್ದರು.
ಹೊಯ್ಸಳ ಪೊಲೀಸರು ತಕ್ಷಣ ಸ್ಥಳಕ್ಕೆ ಆಗಮಿಸಿ ಘಟನಾ ಸ್ಥಳದ ಸುತ್ತಮುತ್ತಲಿನಲ್ಲಿ ಅಳವಡಿಸಲಾಗಿದ್ದ ಸಿಸಿ ಕ್ಯಾಮರಾ ಪರಿಶೀಲಿಸಿ ಅಜಾಗರೂಕತೆಯಿಂದ ಮೊಬೈಲ್ ತೆಗೆದುಕೊಂಡು ಹೋಗಿದ್ದ ಮಹಿಳೆಯನ್ನು ಪತ್ತೆಹಚ್ಚಿ ಮೊಬೈಲ್ ಪಡೆದುಕೊಂಡು ವಾರಸುದಾರರಿಗೆ ಹಸ್ತಾಂತರಿಸಿದ್ದಾರೆ.
