ಬೆಂಗಳೂರು ಜು.14- ಮಾಜಿ ಸಚಿವ ರಾಮಚಂದ್ರಗೌಡರು ನಿಷ್ಠೂರವಾಗಿ ನೀತಿ, ಸಿದ್ಧಾಂತದ ಮೇಲೆ ರಾಜಕಾರಣ ಮಾಡುತ್ತಿದ್ದ ನಿಷ್ಠ ಹಾಗೂ ಪ್ರಾಮಾಣಿಕ ರಾಜಕಾರಣಿ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಗುಣಗಾನ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು ಮಹಾನಗರ ಪಾಲಿಕೆ ಸದಸ್ಯರಾಗಿ ಕೆಲಸ ಮಾಡಿದ್ದರು. ಪ್ರತಿಯೊಬ್ಬ ಸಣ್ಣ ನಾಗರೀಕನಿಗೂ ಗೌರವ ಕೊಟ್ಟು, ಅವರ ಜೊತೆ ಬೆರೆತು ಸಮಸ್ಯೆ ಅರಿತು ಸೇವೆ ಮಾಡುತ್ತಿದ್ದರು ಎಂದು ಸರಿಸಿಕೊಂಡರು.
ಸಂಘ ಪರಿವಾರದ ಕಟ್ಟಾಳು, ಬಿಜೆಪಿ ಹಿರಿಯ ನಾಯಕ ರಾಮಚಂದ್ರಗೌಡ ವಿಧಿವಶ
ಬೆಂಗಳೂರಿನ ಎಲ್ಲಾ ಸಮಸ್ಯೆ ಗಳನ್ನು ತಿಳಿದುಕೊಂಡಿದ್ದರು. ವಿಧಾನ ಪರಿಷತ್ ನಲ್ಲಿ ತಮ ಬುದ್ದಿವಂತಿಕೆಯಿಂದ ಜನಪರ ಚರ್ಚೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಅಪಾರ ಬಳಗ ಕಟ್ಟಿಕೊಂಡಿದ್ದರು. 1985ರಲ್ಲಿ ಸದಾನಗೌಡ ಚುನಾವಣೆಗೆ ನಿಂತಾಗ ವೈಯಕ್ತಿಕವಾಗಿ ಹೋಗಿ ಪ್ರಚಾರ ಮಾಡಿದ್ದರು ಎಂದು ಹೇಳಿದರು.
ಬೆಂಗಳೂರಿನಲ್ಲಿ ದೊಡ್ಡ ಕುಟುಂಬವಾಗಿದ್ದರೂ ಅತ್ಯಂತ ಸರಳವಾಗಿದ್ದರು. ಬಿಜೆಪಿ ಮತ್ತು ಯಡಿಯೂರಪ್ಪನವರು ಯಾವುದೇ ತೀರ್ಮಾನ ತೆಗೆದುಕೊಳ್ಳಬೇಕಾದರೂ ರಾಮಚಂದ್ರಗೌಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿದ್ದನ್ನು ನಾನು ಗಮನಿಸಿದ್ದೇನೆ ಎಂದರು.
ರಾಮಚಂದ್ರಗೌಡರು ತಮಗೆ ಹತ್ತಿರದ ಸಂಬಂಧಿಕರು. ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಕಾರ್ಯಕ್ರಮಕ್ಕೆ ವ್ಹೀಲ್ ಚೇರ್ ನಲ್ಲಾದರೂ ಕರೆದುಕೊಂಡು ಹೋಗಿ ಎಂದು ಸಂಬಂಧಿಕರ ಬಳಿ ಹೇಳಿದ್ದರು ಎಂದು ಕೇಳಿದ್ದೇನೆ.
ಎರಡು ದಿನಗಳ ಹಿಂದೆ ಅವರನ್ನು ಭೇಟಿ ಮಾಡಬೇಕು. ಮಾತನಾಡಬೇಕು ಎಂಬ ಆಸೆ ನನ್ನದಾಗಿತ್ತು. ಅದರೆ ಅದು ಆಗಲಿಲ್ಲ. ಇಂದು ಸರ್ಕಾರದ ಗೌರವದೊಂದಿಗೆ ಅವರನ್ನು ಭೇಟಿ ಮಾಡುವ ಸಂದರ್ಭದಲ್ಲಿ ನಿಂತಿದ್ದೇನೆ ಎಂದು ವಿಷಾದಿಸಿದರು.
ಯಾವುದೇ ಪಕ್ಷವಾದರೂ ನಿಷ್ಠೂರ, ನೀತಿ, ಸಿದ್ಧಾಂತದ ಮೇಲೆ ರಾಜಕಾರಣ ಮಾಡುತ್ತಿದ್ದ ಅವರು, ಯಾರನ್ನೂ ವೈಯಕ್ತಿಕವಾಗಿ ದ್ವೇಷಿಸುತ್ತಿರಲಿಲ್ಲ. ಸಮಾಜದ ಹಿತಕ್ಕೆ ಪೂರಕವಾದ ವಿಚಾರಗಳನ್ನು ನೇರವಾಗಿ ಹೇಳುತ್ತಿದ್ದರು. ವಿಧಾನ ಪರಿಷತ್ ನಲ್ಲಿ ಅವರ ಭಾಷಣ ಯುವ ಪೀಳಿಗೆಗೆ ಮಾದರಿ, ಸರಳ ಸಜ್ಜನಿಕೆಯ ರಾಜಕಾರಣಿ ಎಂದು ಗುಣಗಾನ ಮಾಡಿದರು.
