Homeರಾಜ್ಯಸಂಘ ಪರಿವಾರದ ಕಟ್ಟಾಳು, ಬಿಜೆಪಿ ಹಿರಿಯ ನಾಯಕ ರಾಮಚಂದ್ರಗೌಡ ವಿಧಿವಶ

ಸಂಘ ಪರಿವಾರದ ಕಟ್ಟಾಳು, ಬಿಜೆಪಿ ಹಿರಿಯ ನಾಯಕ ರಾಮಚಂದ್ರಗೌಡ ವಿಧಿವಶ

Senior BJP leader, former Karnataka minister Ramachandra Gowda passes away

ಬೆಂಗಳೂರು,ಜು.14- ನಂಬಿದ್ದ ಪಕ್ಷದ ಸಿದ್ಧಾಂತಕ್ಕೆ ಬದ್ಧರಾಗಿಯೇ ಇತರರಿಗೂ ಮಾದರಿಯಾಗಿ ಇದ್ದ ಮಾಜಿ ಸಚಿವ ಸಂಘ ಪರಿವಾರದ ಕಟ್ಟಾಳು ಹಿರಿಯ ನಾಯಕ ರಾಮಚಂದ್ರಗೌಡ( 88) ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ಇಂದು ನಿಧನರಾಗಿದ್ದಾರೆ. ಅವರ ನಿಧನದಿಂದ ರಾಜ್ಯ ಬಿಜೆಪಿಯ ಹಿರಿಯ ತಲೆಮಾರಿನ ಕೊಂಡಿಯೊಂದು ಕಳಚಿದಂತಾಗಿದೆ.

ಮೃತರು ಪತ್ನಿ ಶ್ರೀಯ,ಪುತ್ರ ಸಪ್ತಗಿರಿ ಗೌಡ,ಪುತ್ರಿ ಕವಿತಾ ಸೇರಿದಂತೆ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಬಿಟ್ಟು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಸಂಜೆ ಕಾಮಾಕ್ಷಿಪಾಳ್ಯದಲ್ಲಿರುವ ಪೇಟೆ ಚೆನ್ನಪ್ಪ ಎಸ್ಟೇಟ್‌ ನಲ್ಲಿ ಒಕ್ಕಲಿಗ ಸಂಪ್ರದಾಯದಂತೆ ವಿಧಿ ವಿಧಾನಗಳೊಂದಿಗೆ ನೆರವೇರಲಿದೆ.

ಬಸವೇಶ್ವರ ನಗರದಲ್ಲಿರುವ ಅವರ ನಿವಾಸದಲ್ಲಿ ಸಂಜೆ 4 ವರೆಗೆ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.ಕಂಬನಿ:ರಾಮಚಂದ್ರಗೌಡ ಅವರ ನಿಧನಕ್ಕೆ ಆದಿಚುಂಚನಗಿರಿ ಪೀಠದ ಪೀಠಾಧ್ಯಕ್ಷರಾದ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್‌ ನವೀನ್‌, ಪ್ರಧಾನಮಂತ್ರಿ ನರೇಂದ್ರ ಮೋದಿ, ಬಿಜೆಪಿ ಹಿರಿಯ ನಾಯಕ ಎಲ್‌ ಕೆ ಅಡ್ವಾಣಿ, ಕೇಂದ್ರ ಸಚಿವರಾದ ಅಮಿತ್‌ ಶಾ ,ರಾಜ್‌ನಾಥ್‌ ಸಿಂಗ್‌, ಮಾಜಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಮಾಜಿ ಪ್ರಧಾನಿ ಎಚ್‌.ಡಿ .ದೇವೇಗೌಡರು, ಮುಖ್ಯಮಂತ್ರಿ ಡಿಕೆ ಶಿವಕುಮಾರ್‌, ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್‌ ,ಕೇಂದ್ರ ಸಚಿವರಾದ ಎಚ್‌.ಡಿ.ಕುಮಾರಸ್ವಾಮಿ, ಪ್ರಹಲ್ಲಾದ್‌ ಜೋಶಿ, ವಿ ಸೋಮಣ್ಣ, ಮಾಜಿ ಮುಖ್ಯಮಂತ್ರಿಗಳಾದ ಬಿಎಸ್‌‍ ಯಡಿಯೂರಪ್ಪ ,ಸಿದ್ದರಾಮಯ್ಯ,ರಾಜ್ಯ ಬಿಜೆಪಿ ಅಧ್ಯಕ್ಷ ಬಿ ವೈ ವಿಜಯೇಂದ್ರ, ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್‌ ಅಶೋಕ್‌ ಸೇರಿದಂತೆ ಅನೇಕ ಗಣ್ಯರು ತೀವ್ರ ಕಂಬನಿ ಮಿಡಿದಿದ್ದಾರೆ.

ಕಳೆದ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ರಾಮಚಂದ್ರಗೌಡ ಅವರು ಚಂದ್ರ ಲೇಔಟ್‌ನಲ್ಲಿರುವ ಗುರುಶ್ರೀ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.ಬೆಳಿಗ್ಗೆ 6. 5 ನಿಮಿಷಕ್ಕೆ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿ ಕೊನೆ ಉಸಿರುಳಿದರೆಂದು ಕುಟುಂಬದ ಮೂಲಗಳು ತಿಳಿಸಿವೆ.

ಕರ್ನಾಟಕದಲ್ಲಿ ಭಾರತೀಯ ಜನಸಂಘ ಮತ್ತು ಬಿಜೆಪಿಗೆ ಭದ್ರಾ ಅಡಿಪಾಯ ಹಾಕಿದ ಪ್ರಮುಖ ನಾಯಕರಲ್ಲಿ ರಾಮಚಂದ್ರಗೌಡ ಕೂಡ ಒಬ್ಬರಾಗಿದ್ದರು. ಅಧಿಕಾರ ಇರಲಿ ಇಲ್ಲದಿರಲಿ ನಂಬಿದ ಸಿದ್ಧಾಂತಕ್ಕಾಗಿಯೇ ಕೊನೆ ಉಸಿರು ಇರುವವರೆಗೂ ಇದ್ದು ಯುವ ರಾಜಕಾರಣಿಗಳಿಗೆ ಮಾದರಿಯಾಗಿದ್ದರು.

ರಾಮಚಂದ್ರ ಗೌಡ ಅವರು ರಾಜಕೀಯ ಪ್ರವೇಶಿಸಿದ್ದು ಆರ್‌ಎಸ್‌‍ಎಸ್‌‍ ಮೂಲಕ ಸಂಘದ ಶಾಖೆಗಳಲ್ಲಿ ಬೆಳೆದ ಅವರು, ಶಿಸ್ತು, ಸಿದ್ಧಾಂತ ಮತ್ತು ದೇಶಪ್ರೀಮದ ಮೌಲ್ಯಗಳನ್ನು ಜೀವನದುದ್ದಕ್ಕೂ ಪಾಲಿಸಿಕೊಂಡು ಬಂದರು. ಯಾವುದೇ ಅಧಿಕಾರ ಅಥವಾ ಲಾಭದ ಆಸೆಗೆ ಬಲಿಯಾಗದೆ, ಸಂಘಟನೆ ಕಟ್ಟುವುದೇ ತಮ ಗುರಿಯಾಗಿಸಿಕೊಂಡಿದ್ದ ಅವರು, ಕರ್ನಾಟಕದಲ್ಲಿ ಬಿಜೆಪಿ ಬೇರೂರಲು ಶ್ರಮಿಸಿದ ಪ್ರಮುಖರಲ್ಲಿ ಒಬ್ಬರು.

ರಾಜ್ಯದಲ್ಲಿ ಬಿಜೆಪಿ ಅಸ್ತಿತ್ವಕ್ಕೆ ಬಂದ ಆರಂಭಿಕ ದಿನಗಳಲ್ಲಿ ರಾಮಚಂದ್ರ ಗೌಡ ಅವರ ಪಾತ್ರ ಹಿರಿದು. ಪಕ್ಷದ ಸಂಘಟನಾತಕ ಚಟುವಟಿಕೆಗಳಲ್ಲಿ ಅವರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಕೇವಲ ಅಧಿಕಾರಕ್ಕಾಗಿ ಕೆಲಸ ಮಾಡುವ ರಾಜಕಾರಣಿಗಳಿಗಿಂತ ಭಿನ್ನವಾಗಿ, ಅವರು ತಳಮಟ್ಟದಿಂದ ಕಾರ್ಯಕರ್ತರನ್ನು ಬೆಳೆಸುವಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದರು.

ರಾಜಕೀಯ ಸಮೀಕರಣಗಳು ಎಷ್ಟೇ ಬದಲಾದರೂ, ತಾವು ನಂಬಿದ ಸಿದ್ಧಾಂತ ಮತ್ತು ಪಕ್ಷದ ನಿಲುವಿಗೆ ಅವರು ಎಂದಿಗೂ ಚ್ಯುತಿ ತರಲಿಲ್ಲ. ಅವರ ಈ ದೃಢ ನಿಲುವು ಪಕ್ಷದ ಹಿರಿಯ ಮತ್ತು ಕಿರಿಯ ನಾಯಕರಿಗೆ ದಾರಿದೀಪವಾಗಿತ್ತು.ಒಂದು ಕಾಲದಲ್ಲಿ ರಾಜ್ಯದಲ್ಲಿ ಅಲ್ಪಸಂಖ್ಯಾತ ಸ್ಥಾನಗಳನ್ನು ಹೊಂದಿದ್ದ ಬಿಜೆಪಿಯನ್ನು ಅಧಿಕಾರದ ಗದ್ದುಗೆಯವರೆಗೆ ಕೊಂಡೊಯ್ಯುವಲ್ಲಿ, ಹಿಂದಿನಿಂದ ಕೆಲಸ ಮಾಡಿದ ಅನೇಕ ಹಿರಿಯ ನಾಯಕರಲ್ಲಿ ಇವರೂ ಒಬ್ಬರು.

ರಾಜಕೀಯ ಅಧಿಕಾರ ಮತ್ತು ಸೇವೆ ಸಂಘಟನೆಯಲ್ಲಿನ ಅವರ ಅನುಭವವನ್ನು ಪರಿಗಣಿಸಿ, ಪಕ್ಷ ಅವರಿಗೆ ಹಲವು ಮಹತ್ವದ ಜವಾಬ್ದಾರಿಗಳನ್ನು ನೀಡಿತ್ತು.ಕರ್ನಾಟಕ ಸರ್ಕಾರದಲ್ಲಿ ಸಚಿವರಾಗಿ ಸೇವೆ ಸಲ್ಲಿಸುವ ಅವಕಾಶ ಅವರಿಗೆ ಸಿಕ್ಕಿತ್ತು. ತಮ ಅಧಿಕಾರಾವಧಿಯಲ್ಲಿ ಅವರು ಪ್ರಾಮಾಣಿಕತೆ ಮತ್ತು ಪಾರದರ್ಶಕತೆಗೆ ಆದ್ಯತೆ ನೀಡಿದ್ದರು.

ಸಕ್ರಿಯ ರಾಜಕೀಯದಿಂದ ತುಸು ಅಂತರ ಕಾಯ್ದುಕೊಂಡಿದ್ದರೂ, ಪಕ್ಷದ ಹಿರಿಯ ಮಾರ್ಗದರ್ಶಕರಾಗಿ ಅವರು ಯಾವಾಗಲೂ ಲಭ್ಯವಿದ್ದರು. ಕಠಿಣ ಸಂದರ್ಭಗಳಲ್ಲಿ ಪಕ್ಷಕ್ಕೆ ಸೂಕ್ತ ಸಲಹೆ-ಸೂಚನೆಗಳನ್ನು ನೀಡುವ ಮೂಲಕ ಅವರು ಮಾರ್ಗದರ್ಶಕರ ಪಾತ್ರ ನಿರ್ವಹಿಸಿದರು. ರಾಮಚಂದ್ರ ಗೌಡ ಅವರು ಎಂದಿಗೂ ಪ್ರಚಾರದ ಗೀಳನ್ನು ಹೊಂದಿರಲಿಲ್ಲ. ಸರಳತೆ ಮತ್ತು ಮಿತಭಾಷಿತನ ಅವರ ವ್ಯಕ್ತಿತ್ವದ ವಿಶೇಷ ಲಕ್ಷಣಗಳಾಗಿದ್ದವು. ಕಾರ್ಯಕರ್ತರ ಕಷ್ಟಗಳಿಗೆ ಸ್ಪಂದಿಸುವ ಗುಣ ಮತ್ತು ಹಿರಿಯ ನಾಯಕರಾಗಿ ಅವರು ತೋರುತ್ತಿದ್ದ ಪ್ರೆತಿ ಅವರನ್ನು ಎಲ್ಲರ ಅಚ್ಚುಮೆಚ್ಚಿನ ನಾಯಕನನ್ನಾಗಿ ಮಾಡಿತ್ತು.

ಪಕ್ಷಕ್ಕೆ ನಷ್ಟ:
ವೈಚಾರಿಕ ಭಿನ್ನಾಭಿಪ್ರಾಯಗಳು ಮೂಡಿದಾಗ ಮಧ್ಯಸ್ಥಿಕೆ ವಹಿಸಿ ಸಮಸ್ಯೆ ಪರಿಹರಿಸುತ್ತಿದ್ದ ಕೊಂಡಿ ಕಳಚಿದಂತಾಗಿದೆ.

ಗೌಡರ ರಾಜಕೀಯ ಪಯಣ: ಯಕ್ತಿಕ ಮತ್ತು ಆರಂಭಿಕ ಜೀವನಹಿನ್ನೆಲೆ: ಇಂಜಿನಿಯರಿಂಗ್‌ ಪದವೀಧರರಾಗಿದ್ದ ಇವರು, ಪಕ್ಕಾ ರಾಷ್ಟ್ರೀಯ ಸ್ವಯಂಸೇವಕ ಸಂಘ ಹಿನ್ನೆಲೆಯನ್ನು ಹೊಂದಿದ್ದರು.1953 ರಲ್ಲಿಯೇ ಆರ್‌ಎಸ್‌‍ಎಸ್‌‍ ಸೇರುವ ಮೂಲಕ ಸಾರ್ವಜನಿಕ ಜೀವನ ಆರಂಭಿಸಿದರು. ಶಾಲಾ ದಿನಗಳಲ್ಲಿದ್ದಾಗಲೇ ಗೋವಾ ವಿಮೋಚನಾ ಚಳವಳಿಯಲ್ಲಿ ಭಾಗವಹಿಸಿದ್ದರು.

ರಾಜಕೀಯ ಪ್ರವೇಶ: 1970 ರಲ್ಲಿ ಭಾರತೀಯ ಜನಸಂಘದ ಮೂಲಕ ಅಧಿಕೃತವಾಗಿ ರಾಜಕೀಯಕ್ಕೆ ಪ್ರವೇಶಿಸಿ, ಬೆಂಗಳೂರು ಮಹಾನಗರ ಪಾಲಿಕೆಗೆ ಪ್ರಥಮ ಬಾರಿಗೆ ಕಾರ್ಪೊರೇಟರ್‌ ಆಗಿ ಆಯ್ಕೆಯಾದರು.

ವಿಧಾನ ಪರಿಷತ್‌ ಸದಸ್ಯರಾಗಿ ಬೆಂಗಳೂರು ಪದವೀಧರ ಕ್ಷೇತ್ರದಿಂದ ಸತತವಾಗಿ 5 ಅವಧಿಗೆ (25 ವರ್ಷಗಳು) ಕರ್ನಾಟಕ ವಿಧಾನ ಪರಿಷತ್‌ ಸದಸ್ಯರಾಗಿ ಸುದೀರ್ಘ ಸೇವೆ ಸಲ್ಲಿಸಿದರು. 1988 ರಲ್ಲಿ ಮೊದಲ ಬಾರಿಗೆ ಆಯ್ಕೆಯಾದ ಇವರು ನಂತರ 1994, 2000, 2006 ಮತ್ತು 2012 ರ ಚುನಾವಣೆಯಲ್ಲಿ ಮರು ಆಯ್ಕೆಯಾದರು.ಜೆಡಿಎಸ್‌‍-ಬಿಜೆಪಿ ಸಮಿಶ್ರ ಸರ್ಕಾರದಲ್ಲಿ ಸಣ್ಣ ಉಳಿತಾಯ, ಲಾಟರಿ, ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆಗಳ ಸಚಿವರಾಗಿದ್ದರು.ಬಿ.ಎಸ್‌‍. ಯಡಿಯೂರಪ್ಪ ಅವರ ಸರ್ಕಾರದಲ್ಲಿ ವೈದ್ಯಕೀಯ ಶಿಕ್ಷಣ ಸಚಿವರಾಗಿ ಸೇವೆ ಸಲ್ಲಿಸಿದರು.

ಪ್ರಮುಖ ನಿರ್ಧಾರ:
ಇವರು ಲಾಟರಿ ಸಚಿವರಾಗಿದ್ದ ಅವಧಿಯಲ್ಲಿ ಕರ್ನಾಟಕ ರಾಜ್ಯದಲ್ಲಿ ಸಂಪೂರ್ಣವಾಗಿ ಲಾಟರಿ ವ್ಯವಸ್ಥೆಯನ್ನು ನಿಷೇಧಿಸುವ ಮಹತ್ವದ ನಿರ್ಧಾರ ಕೈಗೊಂಡರು.
ದೀರ್ಘಕಾಲದವರೆಗೆ ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಹಾಗೂ ರಾಜ್ಯ ಯೋಜನಾ ಮಂಡಳಿಯ ಉಪಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು.

ಚುನಾವಣಾ ರಾಜಕೀಯದಿಂದ ನಿವೃತ್ತಿ:
ಯುವ ನಾಯಕರಿಗೆ ದಾರಿ ಮಾಡಿಕೊಡುವ ಉದ್ದೇಶದಿಂದ, ಜೂನ್‌ 2018 ರಲ್ಲಿ ತಮ ಐದನೇ ಅವಧಿ ಮುಗಿದ ನಂತರ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಸ್ವಯಂಪ್ರೀರಿತರಾಗಿ ಚುನಾವಣಾ ರಾಜಕೀಯದಿಂದ ದೂರ ಸರಿದರು.ಕರ್ನಾಟಕದ ಬಿಜೆಪಿಯ ಮುಂಚೂಣಿ ನಾಯಕರಾದ ಬಿ.ಎಸ್‌‍. ಯಡಿಯೂರಪ್ಪ ಅವರಿಗೆ ಹೆಗಲಿಗೆ ಹೆಗಲು ಕೊಟ್ಟು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದ ರಾಮಚಂದ್ರ ಗೌಡ ಅವರು ಸ್ವಚ್ಛ ಹಸ್ತದ ಮುತ್ಸದ್ದಿ ರಾಜಕಾರಣಿಯಾಗಿ ಗುರುತಿಸಿಕೊಂಡಿದ್ದರು.

ರಾಮಚಂದ್ರ ಗೌಡರ ನಿಧನಕ್ಕೆ ವಿಜಯೇಂದ್ರ ಸಂತಾಪ
ಬೆಂಗಳೂರು,ಜು.14- ಬಿಜೆಪಿಯ ಹಿರಿಯ ಮುಖಂಡ ಹಾಗೂ ಕರ್ನಾಟಕ ಸರ್ಕಾರದ ಮಾಜಿ ವೈದ್ಯಕೀಯ ಶಿಕ್ಷಣ ಸಚಿವ ಹಾಗೂ ವಿಧಾನ ಪರಿಷತ್ತಿನ ಮಾಜಿ ಸದಸ್ಯ ರಾಮಚಂದ್ರ ಗೌಡರ ನಿಧನಕ್ಕೆ ಶಾಸಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ.

ಅವರು ನಿಧನರಾದ ಸುದ್ದಿ ತಿಳಿದು ಅತೀವ ದುಃಖವಾಗಿದೆ ಎಂದು ತಿಳಿಸಿದ್ದಾರೆ. ರಾಮಚಂದ್ರ ಗೌಡ ಅವರ ಆತಕ್ಕೆ ದೇವರು ಸದ್ಗತಿಯನ್ನು ಕರುಣಿಸಲಿ. ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬ ಹಾಗೂ ಅಭಿಮಾನಿಗಳಿಗೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಅವರು ಹೇಳಿದ್ದಾರೆ.

RELATED ARTICLES

Latest News