ಬೆಂಗಳೂರು, ಜು.14- ಚುನಾವಣಾ ಆಯೋಗ ನಡೆಸುತ್ತಿರುವ ಮತದಾರರ ಪಟ್ಟಿ ತೀವ್ರ ಪರಿಷ್ಕರಣೆಯ ಹೆಸರಿನಲ್ಲಿ ಸೈಬರ್ ವಂಚಕರು ಜನ ಸಾಮಾನ್ಯರನ್ನು ದೋಚಲು ಯತ್ನಿಸುವ ಸಾಧ್ಯತೆಗಳ ಕುರಿತು ಜನ ಜಾಗೃತಿ ಆರಂಭವಾಗಿದೆ.ಈಗಾಗಲೇ ಹಲವಾರು ವಿಷಯಗಳಲ್ಲಿ ಜನ ಸಾಮಾನ್ಯರಿಗೆ ಸೈಬರ್ ವಂಚಕರು ಹಣವನ್ನು ದೋಚಿ ದೋಖಾ ಮಾಡಿದ್ದಾರೆ. ಪ್ರಸ್ತುತ ಕರ್ನಾಟಕವೂ ಸೇರಿದಂತೆ ಹಲವು ರಾಜ್ಯಗಳಲ್ಲಿ ನಡೆಯುತ್ತಿರುವ ಎಸ್‌ಐಆರ್‌ನಲ್ಲಿ ಕೈಚಳಕ ಆರಂಭಿಸಿದ್ದಾರೆ.
ಎಸ್‌ಐಆರ್ ಅರ್ಜಿಯನ್ನು ಭರ್ತಿ ಮಾಡಲು, 2002 ಮತ್ತು 2025ರ ಮತದಾರರ ಪಟ್ಟಿಯಲ್ಲಿ ತಮ ಹಾಗೂ ಕುಟುಂಬದ ಸದಸ್ಯರ ಹೆಸರು ಹುಡುಕಲು ಅಕ್ಷರಸ್ಥರೇ ಹೆಣಗಾಡುತ್ತಿದ್ದಾರೆ. ಇನ್ನೂ ಅನಕ್ಷರಸ್ಥರ ಪಾಡಂತು ಹೇಳ ತೀರದು. ಅನ್ಯರ ಬೆಂಬಲ ಇಲ್ಲದೆ ಎಸ್‌ಐಆರ್ ಅರ್ಜಿಯನ್ನು ಭರ್ತಿ ಮಾಡಲು ಸಾಧ್ಯವೇ ಇಲ್ಲ ಎಂಬಂತಿದೆ.
ಇದೇ ಸಂದರ್ಭದ ದುರ್ಲಾಭ ಪಡೆದಿರುವ ವಂಚಕರು ಚುನಾವಣಾ ಆಯೋಗದ ಹೆಸರಿನಲ್ಲಿ ಜನ ಸಾಮಾನ್ಯರಿಗೆ ಕರೆ ಮಾಡುತ್ತಿದ್ದಾರೆ. ಎಸ್‌ಐಆರ್‌ನ ಎನ್ಯುಮರೇಷನ್ ಅರ್ಜಿಗಳನ್ನು ಭರ್ತಿ ಮಾಡಲು ನಿಮ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಬ್ಯಾಂಕ್ ಪಾಸ್ ಬೇಕು ಮತ್ತು ಒಟಿಪಿ ಹೇಳಿಬೇಕು ಎಂದು ನಂಬಿಸುತ್ತಿದ್ದಾರೆ.
ಒಟಿಪಿ ಹೇಳಿದ ಬಳಿಕ ನಿಮ ಮೊಬೈಲ್‌ಗೆ ಒಂದು ಲಿಂಕ್ ಬಂದಿದೆ, ಅದನ್ನು ಕ್ಲಿಕ್ ಮಾಡಿ, ಆಧಾರ್ ಕಾರ್ಡ್. ಪ್ಯಾನ್ ನಂಬರ್ ಮತ್ತು ಬ್ಯಾಂಕ್ ಖಾತೆ ಸಂಖ್ಯೆ ಭರ್ತಿ ಮಾಡಿ ಸಲ್ಲಿಸಿ ಎಂದು ತಿಳಿಸಲಾಗುತ್ತಿದೆ. ವಂಚನೆಯ ಅರಿವಿಲ್ಲದವರು ಕೇಳಿದ ಅಷ್ಟು ಮಾಹಿತಿಗಳನ್ನು ಒದಗಿಸಿ ಬೇಸ್ತು ಬೀಳುತ್ತಿದ್ದಾರೆ.
ವಾಟ್‌್ಸ ಆ್ಯಪ್‌ಗೆ ಬಂದ ಎಪಿಕೆ ಫೈಲ್ಸ್ ಇರುವ ಲಿಂಕ್ ಅನ್ನು ಒಮೆ ಡೌನ್ ಲೋಡ್ ಮಾಡಿಕೊಂಡರೆ ಸಾಕು ವಂಚಕರಿಗೆ ಮೊಬೈಲ್‌ನ ದತ್ತಾಂಶಗಳಿಗೆ ಕನ್ನ ಹಾಕಲು ಬಾಗಿಲು ತೆರೆದಂತೆ. ಯಾವುದೇ ಕಾರಣಕ್ಕೂ ಈ ರೀತಿಯ ಲಿಂಕ್‌ಗಳನ್ನು ತೆರೆಯದೇ ಇರುವುದು ಕ್ಷೇಮ.
ಎಸ್‌ಐಆರ್ ಸಂಬಂಧ ಪಟ್ಟಂತೆ ಚುನಾವಣಾ ಆಯೋಗದ ಯಾವ ಅಧಿಕಾರಿಯೂ ಕರೆ ಮಾಡಿ ಒಟಿಪಿ ಅಥವಾ ಇತರ ದತ್ತಾಂಶಗಳನ್ನು ಕೇಳುವುದಿಲ್ಲ. ಅದರಲ್ಲೂ ಎಸ್‌ಐಅರ್‌ಗೆ ಪ್ಯಾನ್ ಕಾರ್ಡ್ ಮತ್ತು ಬ್ಯಾಂಕ್ ಖಾತೆಯ ಮಾಹಿತಿಗಳು ಅಗತ್ಯವೇ ಇಲ್ಲ ಎಂದು ತಿಳಿಸಲಾಗಿದೆ.
ಎಸ್‌ಐಆರ್ ಬಗ್ಗೆ ಯಾವುದೇ ಸಹಾಯ ಬೇಕಿದ್ದರೂ ಅಥವಾ ಗೊಂದಲಗಳಿದ್ದರೂ ಬಿಎಲ್‌ಒ ಅಥವಾ ಬಿಎಲ್‌ಎಗಳನ್ನು ಸಂಪರ್ಕಿಸಿ ಬಗೆಹರಿಸಿಕೊಳ್ಳಬಹುದು. ಇಲ್ಲವಾದರೆ ತಮದೇ ಪ್ರದೇಶದಲ್ಲಿ ಕಾರ್ಯಾಚರಿಸುತ್ತಿರುವ ಬಿಎಲ್‌ಒಗಳನ್ನು ಸಾಧ್ಯವಾದಷ್ಟು ಖುದ್ದು ಭೇಟಿ ಮಾಡುವುದು ಉತ್ತಮ ಎಂದು ಉನ್ನತ ಮೂಲಗಳು ತಿಳಿಸಿವೆ.
ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದೇ ಇದ್ದರೆ ಮುಂದೆ ಸರ್ಕಾರಿ ಸೌಲಭ್ಯಗಳು ಸಿಗುವುದಿಲ್ಲ ಎಂದು ಸರ್ಕಾರ ಹೆದರಿಸುತ್ತಿದೆ. ಇದಕ್ಕಾಗಿ ಮತದಾರರ ಪಟ್ಟಿಗೆ ಸೇರಲು ಪ್ರತಿಯೊಬ್ಬರೂ ದುಂಬಾಲು ಬಿದ್ದಿದ್ದಾರೆ. ಆದರೆ ಎಸ್‌ಐಆರ್ ಪ್ರಕ್ರಿಯೆಗಳು ಕ್ಲಿಷ್ಟಕರವಾಗಿವೆ. ಈ ಸಂದರ್ಭವನ್ನು ಸೈಬರ್ ವಂಚಕರು ತಮ ಲಾಭಕ್ಕಾಗಿ ಬಳಸಿಕೊಳ್ಳುತ್ತಿರುವುದು ಕಂಡು ಬರುತ್ತಿದೆ.
ಎಸ್‌ಐಆರ್ ಹೆಸರಿನಲ್ಲಿ ಕರೆ ಮಾಡಿ ಯಾರಾದರೂ ಒಟಿಪಿ ಹಾಗೂ ಇತರ ಖಾಸಗಿ ವಿವರಗಳನ್ನು ಕೇಳಿದರೇ ಅದಕ್ಕೆ ಸಹಮತ ವ್ಯಕ್ತಪಡಿಸಬೇಡಿ. ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿ ಎಂದು ಮನವಿ ಮಾಡಲಾಗುತ್ತಿದೆ.
