ಬೆಂಗಳೂರು, ಜು.15-ನೈಋತ್ಯ ಮುಂಗಾರು ದುರ್ಬಲಗೊಂಡಿದ್ದು ರಾಜ್ಯದಲ್ಲಿ ಇನ್ನೊಂದು ವಾರ ಕಾಲ ಒಣಹವೆ ಮುಂದುವರೆಯಲಿದೆ. ಆದರೆ, ಭಾಗಶಃ ಮೋಡ ಕವಿದ ವಾತಾವರಣ ಇರಲಿದ್ದು, ಆಗಾಗ್ಗೆ ಬಲವಾದ ಮೇಲೈ ಗಾಳಿ ಬೀಸಲಿದೆ.
ಸದ್ಯಕ್ಕೆ ರಾಜ್ಯದಲ್ಲಿ ಭಾರಿ ಮಳೆಯಾಗುವ ಲಕ್ಷಣಗಳು ಗೋಚರಿಸುತ್ತಿಲ್ಲ. ಕಳೆದ ನಾಲ್ಕೈದು ದಿನಗಳಿಂದ ಮಳೆಯಾಗುತ್ತಿಲ್ಲ. ಚದುರಿದಂತೆ ಒಂದೆರಡು ಕಡೆಗಳಲ್ಲಿ ಸಾಧಾರಣ ಮಳೆಯಾಗುತ್ತಿದೆ.
ಜು.21ರವರೆಗೆ ಉತ್ತಮ ಮಳೆಯಾಗುವ ಮುನ್ಸೂಚನೆಗಳಿಲ್ಲ. ಆದರೆ, ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಚದುರಿದಂತೆ ಅಲ್ಲಲ್ಲಿ ಸಾಧಾರಣ ಮಳೆ ಮುಂದುವರೆಯಲಿದೆ. ಒಳನಾಡಿನಲ್ಲಿ ಒಣಹವೆ ಮುಂದುವರೆಯಲಿದೆ.
ಜುಲೈ ಮೊದಲ ವಾರದಲ್ಲಿ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ರಾಜ್ಯದ ಪ್ರಮುಖ ಜಲಾಶಯಗಳಿಗೆ ಸ್ವಲ್ಪ ನೀರು ಬಂದಿದೆ. ಮಳೆ ನಿಂತ ಕೂಡಲೇ ಜಲಾಶಗಳ ಒಳಹರಿವು ದಿನದಿಂದ ದಿನಕ್ಕೆ ಇಳಿಕೆಯಾಗುತ್ತಿದೆ.
ಜೂನ್‌ನಲ್ಲೂ ವಾಡಿಕೆಗಿಂತ ಕಡಿಮೆ ಮಳೆಯಾಗಿತ್ತು. ಜುಲೈನಲ್ಲಿ ಮಳೆಯ ಅಭಾವ ಮುಂದುವರಿದಿರುವುದರಿಂದ ಮುಂಗಾರಿನ ಆರಂಭದಲ್ಲೇ ರಾಜ್ಯ ಬರಪರಿಸ್ಥಿತಿಯನ್ನು ಎದುರಿಸುವಂತಾಗಿದೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮಾಹಿತಿ ಪ್ರಕಾರ ಇನ್ನೊಂದು ವಾರಕಾಲ ಮುಂಗಾರು ಮಳೆ ದುರ್ಬಲವಾಗಲಿದೆ. ಬಿಸಿಲಿನ ತೀವ್ರತೆ ಹೆಚ್ಚಾಗುವುದರಿಂದ ತಾಪಮಾನದಲ್ಲೂ ಹೆಚ್ಚಳವಾಗಲಿದೆ.
