Homeಬೆಂಗಳೂರುಜು.17ಕ್ಕೆ ನಿರ್ಧಾರವಾಗಲಿದೆ ಜಿಬಿಎ ಚುನಾವಣೆ ಭವಿಷ್ಯ

ಜು.17ಕ್ಕೆ ನಿರ್ಧಾರವಾಗಲಿದೆ ಜಿಬಿಎ ಚುನಾವಣೆ ಭವಿಷ್ಯ

ಬೆಂಗಳೂರು, ಜು.15- ಜಿಬಿಎ ಚುನಾವಣೆ ಭವಿಷ್ಯ ಜು.17 ರಂದು ನಿರ್ಧಾರವಾಗಲಿದೆ.ಎಸ್‌‍ಐಆರ್‌ ಕಾರ್ಯದೊತ್ತಡದ ಹಿನ್ನೆಲೆಯಲ್ಲಿ ಆ.31ರ ಬದಲಿಗೆ ಡಿ.31ರವರೆಗೆ ಕಾಲಾವಕಾಶ ನೀಡುವಂತೆ ಕರ್ನಾಟಕ ಸರ್ಕಾರ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಸುಪ್ರೀಂಕೋರ್ಟ್‌ ಜು. 17ರಂದು ವಿಚಾರಣೆಗೆ ಕೈಗೆತ್ತಿಕೊಳ್ಳಲಿರುವುದರಿಂದ ಪಂಚ ಪಾಲಿಕೆಗಳ ಚುನಾವಣಾ ಭವಿಷ್ಯ ಅಂದೇ ನಿರ್ಧಾರವಾಗುವ ಸಾಧ್ಯತೆಗಳಿವೆ.

ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್‌ ನೇತೃತ್ವದ ಪೀಠದ ಮುಂದೆ ಜಿಬಿಎ ಪರ ಹಿರಿಯ ವಕೀಲ ಕಪಿಲ್‌ ಸಿಬಲ್‌ ಅವರು ಜು. 17ರಂದು ನಿಗದಿಯಾಗಿರುವ ವಿಚಾರಣೆಯನ್ನು ಪಟ್ಟಿಯಿಂದ ಕೈಬಿಡದಂತೆ ಮನವಿ ಮಾಡಿರುವುದಕ್ಕೆ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್‌, ನ್ಯಾಯಮೂರ್ತಿಗಳಾದ ಜಾಯ್ಮಲ್ಯ ಬಾಗ್ಚಿ ಹಾಗೂ ವಿ.ಮೋಹನ ಅವರನ್ನೊಳಗೊಂಡ ಪೀಠ ಸಮ್ಮತಿಸಿರುವುದರಿಂದ ಅಂದೇ ವಿಚಾರಣೆ ನಡೆಯುವುದು ಬಹುತೇಕ ಖಚಿತಗೊಂಡಿದೆ.

ಯಾವುದೇ ಕಾರಣಕ್ಕೂ ಚುನಾವಣೆ ಮುಂದೂಡಿಕೆಗೆ ಮತ್ತೆ ಅವಕಾಶ ನೀಡುವುದಿಲ್ಲ ಹೀಗಾಗಿ ಆ.31 ರೊಳಗೆ ಚುನಾವಣಾ ಪ್ರಕ್ರಿಯೆ ಪೂರ್ಣಗೊಳಿಸುವಂತೆ ನ್ಯಾಯಲಯ ಕಟ್ಟುನಿಟ್ಟಿನ ಆದೇಶ ನೀಡಿದ್ದರೂ ಕರ್ನಾಟಕ ಸರ್ಕಾರ ಮತ್ತೆ ಅರ್ಜಿ ಸಲ್ಲಿಸಿರುವುದು ಸುಪ್ರೀಂ ಕೆಂಗಣ್ಣಿಗೆ ಗುರಿಯಾಗಿದೆ.

ಈ ಮಧ್ಯೆ ಸಂಘ ಪರಿವಾರದವರು ಜಿಬಿಎ ಚುನಾವಣೆ ಮುಂದೂಡಲು ಕರ್ನಾಟಕ ಸರ್ಕಾರ ಇಲ್ಲಸಲ್ಲದ ಸಬೂಬು ಹೇಳುತ್ತಿದೆ ಅವರ ಮಾತಿಗೆ ಮನ್ನಣೆ ನೀಡದೆ ಆ.31 ರೊಳಗೆ ಚುನಾವಣೆ ನಡೆಸಲು ಆದೇಶಿಸಬೇಕು ಎಂದು ಇಂಪ್ಲೀಡ್‌ ಅರ್ಜಿ ಸಲ್ಲಿಸಿರುವುದರಿಂದ ಶುಕ್ರವಾರದ ವಿಚಾರಣೆ ತೀವ್ರ ಕೂತುಹಲ ಕೆರಳಿಸಿದೆ.

ಕರ್ನಾಟಕ ಸರ್ಕಾರ ಸಲ್ಲಿಸಿರುವ ಅರ್ಜಿಯಲ್ಲಿ, ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆ ನಡೆಯುತ್ತಿರುವುದರಿಂದ ಆಡಳಿತಾತ್ಮಕ ಸವಾಲುಗಳು ಎದುರಾಗಿವೆ. ಮನೆಮನೆಗೆ ತೆರಳಿ ಮತದಾರರ ವಿವರ ಪರಿಶೀಲಿಸುವ ಕಾರ್ಯದಲ್ಲಿ ಸಿಬ್ಬಂದಿ ನಿರತರಾಗಿರುವ ಕಾರಣ, ಅದೇ ಸಮಯದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಅಗತ್ಯವಿರುವ ಭಾರೀ ಪ್ರಮಾಣದ ಸಿಬ್ಬಂದಿಯನ್ನು ನಿಯೋಜಿಸುವುದು ಸಾಧ್ಯವಾಗುತ್ತಿಲ್ಲ ಎಂದು ವಾದಿಸಿದೆ.

ಬೆಂಗಳೂರು ನಗರದಲ್ಲೇ ಸುಮಾರು 1.03 ಕೋಟಿ ಮತದಾರರು ಹಾಗೂ 40 ಲಕ್ಷ ಮನೆಗಳಿದ್ದು, ಐದು ನಗರ ಪಾಲಿಕೆಗಳ ಚುನಾವಣೆಗೆ ಮತದಾನದ ದಿನ ಮಾತ್ರವೇ ಭದ್ರತಾ ಸಿಬ್ಬಂದಿಯನ್ನು ಹೊರತುಪಡಿಸಿ ಸುಮಾರು 60 ಸಾವಿರ ಸಿಬ್ಬಂದಿ ಅಗತ್ಯವಿದೆ. ಹೀಗಾಗಿ ಎರಡೂ ಪ್ರಕ್ರಿಯೆಗಳನ್ನು ಏಕಕಾಲದಲ್ಲಿ ನಿರ್ವಹಿಸುವುದು ಅತ್ಯಂತ ಕಷ್ಟಕರವಾಗಿದೆ ಎನ್ನುವುದು ಸರ್ಕಾರದ ವಾದವಾಗಿದೆ.

ಕರ್ನಾಟಕ ಸರ್ಕಾರ ಹಾಗೂ ಸಂಘ ಪರಿವಾರದವರು ಸಲ್ಲಿಸಿರುವ ಅರ್ಜಿ ವಿಚಾರಣೆ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್‌ ಯಾವ ತೀರ್ಮಾನ ಕೈಗೊಳ್ಳಲಿದೆ ಎನ್ನುವುದರ ಮೇಲೆ ಜಿಬಿಎ ಚುನಾವಣಾ ಭವಿಷ್ಯ ನಿರ್ಧಾರವಾಗಲಿದೆ.

ಮರು ವಿಭಜನೆ ಸಾಧ್ಯತೆ: ಒಂದು ವೇಳೆ ಸುಪ್ರೀಂ ಕೋರ್ಟ್‌ ಡಿ.31 ರವರೆಗೆ ಅವಕಾಶ ನೀಡಿದರೆ ಕರ್ನಾಟಕ ಸರ್ಕಾರದವರು ಬರುವ ಅಧಿವೇಶನದಲ್ಲಿ ಪಂಚ ಪಾಲಿಕೆಗಳಲ್ಲಿ ಆರ್ಥಿಕ ಅಸಮತೋಲನ ಇರುವುದರಿಂದ ಐದು ಪಾಲಿಕೆಗಳ ಬದಲಿಗೆ ಎರಡು ಇಲ್ಲವೇ ಮೂರು ಪಾಲಿಕೆ ರಚಿಸಿ ಚುನಾವಣೆ ನಡೆಸುವ ಬಗ್ಗೆ ಅನುಮತಿ ಪಡೆದುಕೊಂಡು ಮತ್ತೆ ಎರಡು ವರ್ಷಗಳ ವರೆಗೆ ಜಿಬಿಎಗೆ ಚುನಾವಣೆ ನಡೆಸು ಸಾಧ್ಯತೆ ಇಲ್ಲ ಹೀಗಾಗಿ ಹೇಗಾದರೂ ಮಾಡಿ ಆ.31ರೊಳಗೆ ಚುನಾವಣೆ ಆಗುವಂತೆ ನೋಡಿಕೊಳ್ಳುವುದು ಇಂದಿನ ಅಗತ್ಯವಾಗಿದೆ ಎಂದು ಬಿಜೆಪಿ ಉನ್ನತ ಮೂಲಗಳು ಈ ಸಂಜೆಗೆ ತಿಳಿಸಿವೆ.

RELATED ARTICLES

Latest News