ಬೆಂಗಳೂರು, ಜು. 15: ಕಾವೇರಿ ನೀರು ಸರಬರಾಜು ಯೋಜನೆಯ 4ನೇ ಹಂತದ 2ನೇ ಘಟ್ಟದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ನಾಳೆ ನಗರದ ಹಲವು ಪ್ರದೇಶಗಳಲ್ಲಿ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ 2700 ಮಿ.ಮೀ. ವ್ಯಾಸದ ಕೊಳವೆ ಮಾರ್ಗದಲ್ಲಿರುವ ಸ್ಕೌರ್ ವಾಲ್ವ್ ಸೋರಿಕೆ ದುರಸ್ತಿಗಾಗಿ ತುರ್ತು ಕಾಮಗಾರಿ ಕೈಗೊಂಡಿದೆ. ಹೀಗಾಗಿ ನಾಳೆ ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ 12 ಗಂಟೆಗಳ ಕಾಲ ಜಲರೇಚಕ ಯಂತ್ರಾಗಾರಗಳನ್ನು ಸ್ಥಗಿತಗೊಳಿಸಲಾಗುತ್ತದೆ.
ಇದರಿಂದ ಕಾವೇರಿ ನೀರು ಸರಬರಾಜು ಯೋಜನೆಯ 4ನೇ ಹಂತದ 2ನೇ ಘಟ್ಟದ ವ್ಯಾಪ್ತಿಯ ಪ್ರದೇಶಗಳಲ್ಲಿ ನೀರು ಪೂರೈಕೆಯಲ್ಲಿ ತಾತ್ಕಾಲಿಕ ವ್ಯತ್ಯಯ ಉಂಟಾಗಲಿದೆ ಎಂದು ಮಂಡಳಿ ತಿಳಿಸಿದೆ.
ಸಾರ್ವಜನಿಕರು ಮುನ್ನೆಚ್ಚರಿಕೆ ಕ್ರಮವಾಗಿ ಅಗತ್ಯ ಪ್ರಮಾಣದ ನೀರನ್ನು ಮುಂಚಿತವಾಗಿ ಸಂಗ್ರಹಿಸಿಟ್ಟುಕೊಳ್ಳಬೇಕು ಹಾಗೂ ಈ ಅವಧಿಯಲ್ಲಿ ಮಂಡಳಿಯೊಂದಿಗೆ ಸಹಕರಿಸುವಂತೆ ಮನವಿ ಮಾಡಿಕೊಳ್ಳಲಾಗಿದೆ.
