HomeಬೆಂಗಳೂರುB ಟೂ A ಖಾತಾ ಪರಿವರ್ತನೆ ಅವಧಿ ವಿಸ್ತರಣೆ ಸಾಧ್ಯತೆ

B ಟೂ A ಖಾತಾ ಪರಿವರ್ತನೆ ಅವಧಿ ವಿಸ್ತರಣೆ ಸಾಧ್ಯತೆ

B to A Khata conversion period likely to be extended

ಬೆಂಗಳೂರು, ಜು.15- ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರ ಮಹತ್ವಾಕಾಂಕ್ಷೆಯ ನನ್ನ ಇ-ಖಾತೆ, ನನ್ನ ಹಕ್ಕು ಅಭಿಯಾನಕ್ಕೆ ಸಾರ್ವಜನಿಕರ ಸ್ಪಂದನೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಅಭಿಯಾನದ ಅವಧಿಯನ್ನು ಅಕ್ಟೋಬರ್‌ವರೆಗೆ ವಿಸ್ತರಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗಿದೆ.

ನಗರದಲ್ಲಿ ಜೂನ್‌ 29ರಿಂದ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಆರಂಭವಾಗಿದ್ದು, ಕಂದಾಯ ಮತ್ತು ನಗರಪಾಲಿಕೆ ಸಿಬ್ಬಂದಿಯನ್ನು ಆ ಕೆಲಸಕ್ಕೆ ನಿಯೋಜಿಸಿರುವುದರಿಂದ ಇ-ಖಾತೆ ಅಭಿಯಾನಕ್ಕೆ ಸಿಬ್ಬಂದಿ ಕೊರತೆ ಉಂಟಾಗಿದೆ. ಇದೇ ಕಾರಣದಿಂದ ಪ್ರತಿ ಶನಿವಾರ ಮತ್ತು ಭಾನುವಾರ ನಡೆಯುತ್ತಿದ್ದ ವಿಶೇಷ ಶಿಬಿರಗಳು ಕಳೆದ ಮೂರು ವಾರಗಳಿಂದ ನಡೆಯುತ್ತಿಲ್ಲ ಎಂಬ ಆರೋಪಗಳು ಕೇಳಿಬಂದಿವೆ.

ಈ ಅಭಿಯಾನದ ಮೂಲಕ ಸಾರ್ವಜನಿಕರು ಯಾವುದೇ ಲಂಚ ನೀಡದೆ ತಮ್ಮ ಆಸ್ತಿಗಳನ್ನು ಬಿ ಖಾತೆಯಿಂದ ಎ ಖಾತೆಗೆ ಪರಿವರ್ತಿಸಿಕೊಳ್ಳುವ ಹಾಗೂ ಮನೆ ಬಾಗಿಲಿಗೇ ಇ-ಖಾತೆ ಪಡೆಯುವ ಅವಕಾಶ ಕಲ್ಪಿಸಲಾಗಿತ್ತು. ಸುಮಾರು 7 ಲಕ್ಷ ಬಿ ಖಾತೆ ಆಸ್ತಿ ಮಾಲೀಕರಿಗೆ ಈ ಯೋಜನೆ ಪ್ರಯೋಜನವಾಗಲಿದೆ ಎಂದು ಸರ್ಕಾರ ಘೋಷಿಸಿತ್ತು.

ಡಿ.ಕೆ. ಶಿವಕುಮಾರ್‌ ಅವರು ಯೋಜನೆ ಆರಂಭಿಸಿದ ವೇಳೆ, ಕೆಳಮಟ್ಟದ ಅಧಿಕಾರಿಗಳ ಬಳಿ ಲಂಚ ನೀಡಿ ಖಾತೆ ಮಾಡಿಸಿಕೊಳ್ಳುವ ಪದ್ಧತಿಗೆ ಅಂತ್ಯ ಹಾಡುವ ಉದ್ದೇಶದಿಂದ ಈ ಅಭಿಯಾನ ಜಾರಿಗೆ ತರಲಾಗಿತ್ತು. ಪ್ರತಿ ಶನಿವಾರ ವಿಶೇಷ ಶಿಬಿರಗಳ ಮೂಲಕ ಅರ್ಜಿಗಳನ್ನು ಸ್ವೀಕರಿಸಿ ತ್ವರಿತವಾಗಿ ಇ-ಖಾತೆ ನೀಡಲಾಗುವುದು ಎಂದು ತಿಳಿಸಿದ್ದರು.

ಅಲ್ಲದೆ, ಖಾತೆ ದಾಖಲೆಯಲ್ಲಿ ಮಾಲೀಕರ ಹಾಗೂ ಮನೆಯ ಫೋಟೋ ಸೇರಿಸಲಾಗುವುದು, ಸಬ್‌‍-ರಿಜಿಸ್ಟ್ರಾರ್‌ ದಾಖಲೆಗಳೊಂದಿಗೆ ಲಿಂಕ್‌ ಮಾಡಲಾಗುವುದು, ನಕಲಿ ದಾಖಲೆಗಳ ಮೂಲಕ ಖಾತೆ ಪಡೆದರೆ ರದ್ದುಪಡಿಸುವ ವ್ಯವಸ್ಥೆಯೂ ಇರಲಿದೆ ಎಂದು ಭರವಸೆ ನೀಡಿದ್ದರು.ಇದೇ ವೇಳೆ, ಬಿ ಖಾತೆಯಿಂದ ಎ ಖಾತೆಗೆ ಪರಿವರ್ತನೆಗೆ ವಿಧಿಸಲಾಗುತ್ತಿದ್ದ ಶುಲ್ಕದಲ್ಲಿ 100 ದಿನಗಳ ವಿಶೇಷ ರಿಯಾಯಿತಿ ನೀಡಿ, ಆಸ್ತಿ ಮೌಲ್ಯದ ಶೇ.5ರ ಬದಲು ಶೇ.2ರಷ್ಟೇ ಶುಲ್ಕ ಪಾವತಿಸುವ ಅವಕಾಶ ಕಲ್ಪಿಸಲಾಗಿತ್ತು.

ಆದರೆ ಅಭಿಯಾನ ಸ್ಥಗಿತಗೊಂಡಿರುವುದರಿಂದ ಅರ್ಜಿಗಳ ಸ್ವೀಕೃತಿ ಕುಂಠಿತವಾಗಿದ್ದು, ಸರ್ಕಾರದ ಆದಾಯಕ್ಕೂ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.ಜಿಬಿಎ ಕಂದಾಯ ವಿಭಾಗದ ಅಧಿಕಾರಿಗಳ ಪ್ರಕಾರ, ಎಸ್‌‍ಐಆರ್‌ ಕಾರ್ಯ ಪೂರ್ಣಗೊಳ್ಳುವವರೆಗೆ ಅಭಿಯಾನವನ್ನು ವಿಸ್ತರಿಸುವ ಬಗ್ಗೆ ಚರ್ಚೆ ನಡೆಯುತ್ತಿದ್ದು, ಅಕ್ಟೋಬರ್‌ವರೆಗೆ ಅವಧಿ ವಿಸ್ತರಣೆಯಾಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ಪ್ರಸ್ತುತ ಗ್ರೇಟರ್‌ ಬೆಂಗಳೂರು ವ್ಯಾಪ್ತಿಯ ಐದು ನಗರಪಾಲಿಕೆಗಳಲ್ಲಿ ಸುಮಾರು 7 ಲಕ್ಷ ಬಿ ಖಾತೆ ಆಸ್ತಿಗಳಿದ್ದು, ಇದುವರೆಗೆ ಕೇವಲ 13 ಸಾವಿರ ಅರ್ಜಿಗಳು ಮಾತ್ರ ಸಲ್ಲಿಕೆಯಾಗಿವೆ ಎಂದು ಮೂಲಗಳು ತಿಳಿಸಿವೆ. ಹೀಗಾಗಿ ಅಭಿಯಾನಕ್ಕೆ ಮತ್ತಷ್ಟು ಕಾಲಾವಕಾಶ ನೀಡುವ ಅಗತ್ಯವಿದೆ ಎಂಬ ಅಭಿಪ್ರಾಯ ಅಧಿಕಾರಿಗಳ ವಲಯದಲ್ಲಿ ವ್ಯಕ್ತವಾಗಿದೆ.

RELATED ARTICLES

Latest News