ಬೆಂಗಳೂರು,ಜು.15- ಚಾಲಾಕಿ ಖೈದಿಗಳು ಬ್ಯಾರಕ್ನ ಕಿಟಕಿಯ ಸರಳು ಮುರಿದು ನಂತರ ತಾವು ಧರಿಸಿದ್ದ ಬಟ್ಟೆಯನ್ನೇ ಹಗ್ಗವನ್ನಾಗಿ ಮಾಡಿಕೊಂಡು ಕಾರಾಗೃಹದಿಂದ ಗೋಡೆ ಹಾರಿರುವುದು ಸಿನಿಮಾ ಶೈಲಿಯಂತಿದೆ.
ಕಲಬುರಗಿ ಕಾರಾಗೃಹ ಕೋಟೆಯಂತೆ ಭದ್ರಪಡಿಸಲಾಗಿದೆ. ಆದರೆ ಮೂವರು ಖೈದಿಗಳು ತಪ್ಪಿಸಿಕೊಂಡಿದ್ದಾದರೂ ಹೇಗೆ ಎಂಬ ಚರ್ಚೆ ಸಾರ್ವಜನಿಕರ ವಲಯದಲ್ಲಿ ವ್ಯಕ್ತವಾಗಿದೆ.
ಕಾರಾಗೃಹ ಸಿಸಿ ಟಿವಿಗಳನ್ನು ಜೈಲು ಅಧಿಕಾರಿಗಳು ಕೂಲಂಕುಶವಾಗಿ ಪರಿಶೀಲಿಸಿದಾಗ ಸಿನಿಮಾ ಶೈಲಿಯಂತೆ ಮಾಸ್ಟರ್ ಪ್ಲಾನ್ ಮಾಡಿಕೊಂಡು ಬ್ಯಾರಕ್ನ ಕಿಟಕಿಯ ಕಬ್ಬಿಣದ ರಾಡ್ಗಳನ್ನು ಮುರಿದು ಆ ಮೂಲಕ ಆವರಣದೊಳಗೆ ಜಿಗಿದಿದ್ದಾರೆ.
ನಂತರ ಅಲ್ಲಿದ್ದ ಏಣಿ ಸಹಾಯದಿಂದ ಕಾರಾಗೃಹದ ಎತ್ತರದ ಗೋಡೆ ಹತ್ತಿ ತಾವು ಧರಿಸಿದ್ದ ಬಟ್ಟೆಗಳನ್ನೇ ಒಟ್ಟಿಗೆ ಸೇರಿಸಿ ಹಗ್ಗದಂತೆ ಮಾಡಿಕೊಂಡು ಅದರ ಸಹಾಯದಿಂದ ಒಬ್ಬೊಬ್ಬರೆ ಕೆಳಗೆ ಇಳಿದು ಹೊರಗೆ ನಿಂತಿದ್ದ ಕಾರಿನಲ್ಲಿ ಪರಾರಿಯಾಗಿದ್ದಾರೆ.ಇಷ್ಟೆಲ್ಲಾ ಪ್ಲಾನ್ ಮಾಡಿರುವುದು ಕೇವಲ ಒಂದೆರಡು ದಿನಗಳಲ್ಲ. ಈ ಮೂವರು ಸೇರಿಕೊಂಡು ಹೊರಗೆ ತಪ್ಪಿಸಿಕೊಳ್ಳುವುದು ಹೇಗೆ ಎಂಬುವುದರ ಬಗ್ಗೆ ಮೊದಲೇ ಸಂಚು ರೂಪಿಸಿಕೊಂಡಿದ್ದಾರೆ.
ಆ ಸಂಚಿನಂತೆ ತಮ ಬ್ಯಾರಕ್ನಲ್ಲಿ ಆಗಾಗ್ಗೆ ಕಿಟಕಿಯ ಕಬ್ಬಿಣದ ರಾಡುಗಳನ್ನು ಹೇಗೆ ಮುರಿಯಬಹುದು ಎಂಬುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ. ಜೈಲು ಸಿಬ್ಬಂದಿ ಇವರ ಬ್ಯಾರಕ್ ಬಳಿ ಬಂದಾಗ ಅಮಾಯಕರಂತೆ ವರ್ತಿಸುತ್ತಿದ್ದರು. ಹಾಗಾಗಿ ಈ ಮೂವರು ಖೈದಿಗಳ ಮೇಲೆ ಅನುಮಾನ ಬಂದಿಲ್ಲ.
ಅಲ್ಲದೇ ಕಾರಾಗೃಹದ ಕಾಂಪೌಂಡ್ ಗೋಡೆಗೆ ಅಳವಡಿಸಿದ್ದ ಸೋಲಾರ್ ತಂತಿಗಳಲ್ಲಿ ವಿದ್ಯುತ್ ಸಂಪರ್ಕವಿಲ್ಲ ಎಂಬುವುದನ್ನೂ ಸಹ ಖೈದಿಗಳು ತಿಳಿದುಕೊಂಡಿದ್ದರು.ಹಾಗಾಗಿ ಅವರು ಮಾಡಿಕೊಂಡ ಸಂಚಿನಂತೆ ಮೂವರು ಖೈದಿಗಳು ಒಟ್ಟಾಗಿ ಸೇರಿಕೊಂಡು ಸಿನಿಮಾ ಶೈಲಿಯಲ್ಲಿ ಗೋಡೆ ಹತ್ತಿ ಸರಾಗವಾಗಿ ಹೊರಗೆ ಬಂದಿರುವುದು ಕಂಡು ಬಂದಿದೆ.
ಖೈದಿಗಳು ಈ ರೀತಿ ಪರಾರಿಯಾಗಿರುವುದನ್ನು ನೋಡಿದರೆ ಬಹಳ ದಿನಗಳಿಂದಲೇ ಯೊಜನೆಯೊಂದನ್ನು ರೂಪಿಸಿದ್ದರು ಎಂದು ಕಂಡು ಬಂದಿದೆ.ಗೃಹ ಸಚಿವರ ತವರು ಜಿಲ್ಲೆಯಲ್ಲೇ ಈ ರೀತಿಯ ಘಟನೆ ನಡೆದಿರುವುದು ರಾಜಕೀಯ ಟೀಕೆಗೆ ಗುರಿಯಾಗಿದೆ.
