ಬೆಂಗಳೂರು,ಜು.15- ಕರ್ನಾಟಕದಲ್ಲಿ ವಾಡಿಕೆ ಯಂತೆ ಈ ಬಾರಿ ಕಾವೇರಿ ಜಲಾಯನ ಪ್ರದೇಶದಲ್ಲಿ ಮಳೆಯಾಗದ ಹಿನ್ನೆಲೆಯಲ್ಲಿ ತಮಿಳುನಾಡಿಗೆ ಸದ್ಯಕ್ಕೆ ಕೆಆರ್ಎಸ್ ಅಣೆಕಟ್ಟಿನಿಂದ ನೀರು ಹರಿಸದೆ ಯಥಾಸ್ಥಿತಿ ಕಾಪಾಡಿಕೊಳ್ಳಬೇಕೆಂದು ಉಭಯ ರಾಜ್ಯಗಳಿಗೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ(ಸಿಡಬ್ಲ್ಯುಎಂಎ) ಸೂಚನೆ ನೀಡಿದೆ. ನವದೆಹಲಿಯಲ್ಲಿಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ವ್ಯಾಪ್ತಿಗೆ ಬರುವ ಕರ್ನಾಟಕ ತಮಿಳುನಾಡು ಮತ್ತು ಪುದುಚೇರಿ ರಾಜ್ಯಗಳ ಜಲಸಂಪನೂಲ ಇಲಾಖೆಯ ಉನ್ನತ ಅಧಿಕಾರಿಗಳ ಸಭೆ ಜರುಗಿತು.
ರಾಜ್ಯದ ಪರವಾಗಿ ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಹೇಶ, ಜಲಸಂಪನೂಲ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಾದ ಗೌರವ್ ಗುಪ್ತ, ಬಿಶ್ವನಾಥ್ ಸಿನ್ನಾ, ತಮಿಳುನಾಡು ಪರವಾಗಿ ನೀರಾವರಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಸತ್ಯಪ್ರಭ ಸಾಹು, ಲೋಕೋಪಯೋಗಿ ಇಲಾಖೆಯ ಕಾರ್ಯದರ್ಶಿ ಡಾ.ಎ.ಮುತ್ತಮ, ಕೇಂದ್ರ ಜಲಶಕ್ತಿಯ ಜಂಟಿ ಆಯುಕ್ತರು, ತಮಿಳುನಾಡಿನ ತಿರುಚಿ ಪ್ರದೇಶದ ಮುಖ್ಯ ಅಭಿಯಂತರ ಡಾ.ಎಸ್.ಶಿವಶಂಕರ್, ಕೇರಳ ಸರ್ಕಾರದ ನೀರಾವರಿ ಇಲಾಖೆಯ ಮುಖ್ಯ ಅಭಿಯಂತರ ಪ್ರಿಯೇಶ್.ಆರ್, ಪುದುಚೇರಿ ಲೋಕೋಪಯೋಗಿ ಇಲಾಖೆಯ ಮುಖ್ಯ ಎಂಜಿನಿಯರ್ ಕೆ.ವೀರಸೆಲ್ವಂ , ಹವಾಮಾನ ಇಲಾಖೆಯ ವಿಜ್ಞಾನಿಗಳು, ಕೊಯಮತ್ತೂರಿನ ಕೇಂದ್ರ ಜಲ ಆಯೋಗದ ಮುಖ್ಯ ಅಭಿಯಂತರ ಆರ್.ತಂಗಮಣಿ, ತೋಟಗಾರಿಕೆ ಇಲಾಖೆ ಆಯುಕ್ತ ಪ್ರಭಾತ್ಕುಮಾರ್ ಮತ್ತಿತರರು ಭಾಗವಹಿಸಿದ್ದರು.
ರಾಜ್ಯದ ಪರವಾಗಿ ಮಾತನಾಡಿದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ, ಕರ್ನಾಟಕದಲ್ಲಿ ಈ ಬಾರಿ ಜುಲೈ ತಿಂಗಳ ಮಧ್ಯ ಭಾಗ ಸಮೀಪಿಸಿದ್ದರೂ ನಮಗೆ ವಾಡಿಕೆಯಂತೆ ಮಳೆ ಬಂದಿಲ್ಲ. ಕಾವೇರಿ ಜಲಾನಯನ ಪ್ರದೇಶಗಳ ವ್ಯಾಪ್ತಿಗೆ ಒಳಪಡುವ ಕೆಆರ್ಎಸ್, ಕಬಿನಿ, ಹಾರಂಗಿ ಮತ್ತು ಹೇಮಾವತಿ ಜಲಾಶಕ್ತಿ ಇಲಾಖೆಗಳಲ್ಲಿ ನೀರಿನ ಸಂಗ್ರಹ ಅತ್ಯಂತ ಕಡಿಮೆ ಪ್ರಮಾಣದಲ್ಲಿದೆ ಎಂದು ಸಭೆಗೆ ವಿವರಿಸಿದರು.
ಒಂದು ವಾರದ ಹಿಂದೆ ಅಲ್ಪಪ್ರಮಾಣದ ಮಳೆಯಾದ ಪರಿಣಾಮ ಜಲಾಶಯಗಳಿಗೆ ಕೊಂಚಮಟ್ಟಿನ ನೀರು ಹರಿದುಬಂದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಇದು ಏನೇನೂ ಸಾಲದು. ಹೀಗಾಗಿ ಪ್ರಸ್ತುತ ಸಂದರ್ಭದಲ್ಲಿ ನಾವು ತಮಿಳುನಾಡಿಗೆ ನೀರು ಹರಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಜಲಾಶಯಗಳಲ್ಲಿ ನೀರು ಸಂಗ್ರಹವಾಗಿದ್ದರೆ ನಾವು ತಮಿಳುನಾಡಿಗೆ ಬೇಡಿಕೆಗೂ ಮುನ್ನವೇ ನೀರು ಹರಿಸುತ್ತಿದ್ದೆವು. ಆದರೆ ನಮ ಜಲಾಶಯಗಳಲ್ಲೇ ನೀರು ಸಂಗ್ರಹವಾಗಿಲ್ಲ. ಬಹುತೇಕ ಕಡೆ ಡೆಡ್ ಸ್ಟೋರೇಜ್ಗೆ ತಲುಪಿದೆ. ಈ ಹಂತದಲ್ಲಿ ನಾವು ನೀರು ಹರಿಸುವುದಾದರೂ ಹೇಗೆ? ಎಂದು ಪ್ರಶ್ನೆ ಮಾಡಿದರು.
ಈ ನಾಲ್ಕು ಜಲಾಶಯಗಳಲ್ಲಿ ನೀರನ್ನು ಕೃಷಿ ಚಟುವಟಿಕೆಗಳಿಗೆ ಬಳಸದೆ ಕುಡಿಯುವ ಉದ್ದೇಶಕ್ಕೆ ಮಾತ್ರ ಬಳಸಿಕೊಳ್ಳುತ್ತಿದ್ದೇವೆ. ರೈತರು ಕೃಷಿ ಚಟುವಟಿಕೆಗಳಿಗೆ ನೀರು ಹರಿಸಬೇಕೆಂದು ಮನವಿ ಮಾಡಿಕೊಂಡರೂ ಭವಿಷ್ಯದ ದೃಷ್ಟಿಯಿಂದ ನಾವು ಈವರೆಗೂ ನಾಲೆಗಳಿಗೆ ನೀರನ್ನು ಹರಿಸಿಲ್ಲ. ಮುಂದೆ ಮಳೆಯಾದರೆ ಸಂಕಷ್ಟ ಸೂತ್ರದ ಪ್ರಕಾರ ನೆರೆಯ ರಾಜ್ಯಕ್ಕೆ ನೀರು ಹರಿಸಲು ನಮ ಅಭ್ಯಂತರವಿಲ್ಲ ಎಂದು ಸ್ಪಷ್ಟಪಡಿಸಿದರು.
ಮಳೆಯ ಕೊರತೆಯಿಂದಾಗಿ ಜಲಾಶಯಗಳಲ್ಲಿ ನೀರಿನ ಮಟ್ಟ ಕಡಿಮೆಯಾಗಿದೆ. ನಾವು ಕುಡಿಯುವ ನೀರಿಗೆ ಆದ್ಯತೆ ನೀಡಿದರೆ ತಮಿಳುನಾಡು ಕೃಷಿ ಚಟುವಟಿಕೆಗಳಿಗೆ ನೀರು ಹರಿಸಬೇಕೆಂಬ ಬೇಡಿಕೆ ಇಟ್ಟಿದೆ. ಇದು ಹೇಗೆ ಸಾಧ್ಯ? ಎಂದು ಗೌರವ ಗುಪ್ತ ಪ್ರಶ್ನಿಸಿದರೆಂದು ತಿಳಿದುಬಂದಿದೆ.
ಕರ್ನಾಟಕದ ವಾದವನ್ನು ಒಪ್ಪದ ತಮಿಳುನಾಡು ಅಧಿಕಾರಿಗಳು ಸಂಕಷ್ಟ ಸೂತ್ರದ ಪ್ರಕಾರ ನಮಗೆ ಈ ವರ್ಷದ ನೀರನ್ನು ಹರಿಸಲು ಸೂಕ್ತ ನಿರ್ದೇಶನ ನೀಡಬೇಕೆಂದು ಸಭೆಯಲ್ಲಿ ತಮ ವಾದವನ್ನು ಮಂಡಿಸಿದರು.
ಸಂಕಷ್ಟ ಸೂತ್ರದ ಪ್ರಕಾರ ಕರ್ನಾಟಕ ಹರಿಸಬೇಕಾದ ನೀರನ್ನು ಹರಿಸಿಲ್ಲ. ಹೀಗಾಗಿ ನೀರು ಬಿಡಲು ನಿರ್ದೇಶನ ನೀಡಿ ಎಂದು ಸಭೆಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದರು.
ಅಂತಿಮವಾಗಿ ಎರಡು ಕಡೆ ವಾದ-ಪ್ರತಿವಾದವನ್ನು ಆಲಿಸಿದ ಪ್ರಾಧಿಕಾರದ ಅಧಿಕಾರಿಗಳು ಯಥಾಸ್ಥಿತಿ ಕಾಪಾಡಿಕೊಳ್ಳಲು ಕರ್ನಾಟಕ, ತಮಿಳುನಾಡು ಮತ್ತು ಪಾಂಡಿಚೇರಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
