Homeರಾಜ್ಯಬೆಳಗಾವಿ : ರಮ್ಮಿ ಆಡುತ್ತಿದ್ದ ವ್ಯಕ್ತಿ ಮೇಲೆ ಗುಂಡು ಹಾರಿಸಿ ಕೊಲೆಗೆ ಯತ್ನ

ಬೆಳಗಾವಿ : ರಮ್ಮಿ ಆಡುತ್ತಿದ್ದ ವ್ಯಕ್ತಿ ಮೇಲೆ ಗುಂಡು ಹಾರಿಸಿ ಕೊಲೆಗೆ ಯತ್ನ

Belgaum: Attempted murder after shooting at a man playing rummy

ಬೆಳಗಾವಿ,ಜು.15- ನಗರದಲ್ಲಿ ಮತ್ತೆ ರೌಡಿಪಡೆಯ ಅಟ್ಟಹಾಸ ಮರುಕಳಿಸಿದ್ದು, ಪೊಲೀಸ್‌‍ ಕಮಿಷನರ್‌ ಕಚೇರಿಯಿಂದ ಕೆಲವೇ ಅಂತರದಲ್ಲಿರುವ ಪ್ರತಿಷ್ಠಿತ ಜಿಮ್ಖಾನಾ ಕ್ಲಬ್‌ನಲ್ಲಿ ಗುಂಡಿನ ದಾಳಿ ನಡೆದು ವ್ಯಕ್ತಿಯೊಬ್ಬ ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಕಳೆದ ರಾತ್ರಿ ನಡೆದ ಈ ಘಟನೆ ಯಿಂದ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿ ಸಾರ್ವಜನಿಕರು ಬೆಚ್ಚಿಬಿದ್ದಿದ್ದಾರೆ.

ರಮಿ ಆಟದಲ್ಲಿ ತೊಡಗಿದ್ದ ಸುರೇಶ್‌ ಜಾಲಗಾರ ಎಂಬಾತನನ್ನು ಗುರಿಯಾಗಿಸಿಕೊಂಡು ಐವರು ದುಷ್ಕರ್ಮಿಗಳು ಜಿಮ್ಖಾನಾ ಕ್ಲಬ್‌ಗೆ ನುಗ್ಗಿ ಹಲ್ಲೆ ನಡೆಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ನಗರದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿರುವುದಕ್ಕೆ ಈ ಘಟನೆ ಮತ್ತೊಂದು ಉದಾಹರಣೆಯಾಗಿದೆ. ಮಾಹಿತಿ ಪ್ರಕಾರ, ಐವರು ದುಷ್ಕರ್ಮಿಗಳು ಎರಡು ಬೈಕ್‌ಗಳಲ್ಲಿ ಕ್ಲಬ್‌ಗೆ ಬಂದಿದ್ದು, ಅವರಲ್ಲಿ ಇಬ್ಬರು ಹೊರಗೆ ಕಾವಲು ನಿಂತಿದ್ದರು. ಉಳಿದ ಮೂವರು ಮಾರಕಾಸ್ತ್ರಗಳು ಹಾಗೂ ಗನ್‌ಗಳೊಂದಿಗೆ ಕ್ಲಬ್‌ ಒಳಗೆ ನುಗ್ಗಿದ್ದಾರೆ.

ಅಲ್ಲಿ ರಮಿ ಆಡುತ್ತಿದ್ದ ಸುರೇಶ್‌ ಜಾಲಗಾರ ಎಂಬಾತನ ಮೇಲೆ ಏಕಾಏಕಿ ದಾಳಿ ನಡೆಸಿದ ಆರೋಪಿಗಳು ಮೊದಲು ಗನ್‌ನಿಂದ ತಲೆಗೆ ಬಲವಾಗಿ ಹೊಡೆದಿದ್ದಾರೆ. ಬಳಿಕ ಗುಂಡು ಹಾರಿಸಲು ಮುಂದಾಗಿದ್ದಾರೆ. ಆದರೆ ಪರಿಸ್ಥಿತಿಯನ್ನು ಅರಿತ ಸುರೇಶ್‌, ದುಷ್ಕರ್ಮಿಯನ್ನು ತಳ್ಳಿ ಅಲ್ಲಿಂದ ತಪ್ಪಿಸಿಕೊಂಡು ಪ್ರಾಣ ಉಳಿಸಿಕೊಂಡಿದ್ದಾನೆ.

ಗಾಳಿಯಲ್ಲಿ ಗುಂಡು ಹಾರಿಸಿ ಪರಾರಿ :
ಗುರಿ ತಪ್ಪಿದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ದುಷ್ಕರ್ಮಿಗಳು ಸುರೇಶ್‌ನನ್ನು ಬೆನ್ನಟ್ಟಿದ್ದಾರೆ. ಆತ ಸಿಗದಿದ್ದಾಗ ಕ್ಲಬ್‌ನಿಂದ ಹೊರಬಂದು ಭೀತಿಯ ವಾತಾವರಣ ಸೃಷ್ಟಿಸಲು ಗಾಳಿಯಲ್ಲಿ ಎರಡು ಸುತ್ತು ಗುಂಡು ಹಾರಿಸಿ ಬಳಿಕ ಐವರು ದುಷ್ಕರ್ಮಿಗಳು ಬೈಕ್‌ಗಳಲ್ಲಿ ಸ್ಥಳದಿಂದ ಪರಾರಿಯಾಗಿದ್ದಾರೆ.

ಘಟನೆಯ ಸಂಪೂರ್ಣ ದೃಶ್ಯ ಕ್ಲಬ್‌ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇಬ್ಬರು ಆರೋಪಿಗಳು ಕೈಯಲ್ಲಿ ಗನ್‌ ಹಿಡಿದು ಸುರೇಶ್‌ನನ್ನು ಬೆನ್ನಟ್ಟುವ ದೃಶ್ಯಗಳು ಹಾಗೂ ಸುರೇಶ್‌ ಚಾಣಾಕ್ಷತನದಿಂದ ತಪ್ಪಿಸಿಕೊಳ್ಳುವ ದೃಶ್ಯಗಳು ವಿಡಿಯೊದಲ್ಲಿ ದಾಖಲಾಗಿದ್ದು, ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ.

ಘಟನೆ ನಡೆದ ತಕ್ಷಣವೇ ಬೆಳಗಾವಿ ನಗರ ಪೊಲೀಸ್‌‍ ಆಯುಕ್ತ ಭೂಷಣ್‌ ಬೊರಸೆ ಅವರು ಹಿರಿಯ ಅಧಿಕಾರಿಗಳೊಂದಿಗೆ ಕ್ಲಬ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಕರಣದ ಸಂಪೂರ್ಣ ಮಾಹಿತಿ ಪಡೆದು ಆರೋಪಿಗಳ ಬಂಧನಕ್ಕಾಗಿ ವಿಶೇಷ ತಂಡಗಳನ್ನು ರಚಿಸಲಾಗಿದೆ.

ಕಮಿಷನರ್‌ ಕಚೇರಿಯಿಂದ ಅತಿ ಸಮೀಪದಲ್ಲೇ ಇಂತಹ ಗುಂಡಿನ ದಾಳಿ ನಡೆದಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ್ದು, ಪೊಲೀಸರ ಕಾರ್ಯವೈಖರಿಯ ಬಗ್ಗೆ ಪ್ರಶ್ನೆಗಳು ಎದ್ದಿವೆ. ಪ್ರಸ್ತುತ ಘಟನಾ ಸ್ಥಳದಲ್ಲಿ ಬಿಗಿ ಪೊಲೀಸ್‌‍ ಬಂದೋಬಸ್ತ್‌ ಮಾಡಲಾಗಿದ್ದು, ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಹಳೆಯ ವೈಷಮ್ಯ ಅಥವಾ ಹಣಕಾಸಿನ ವ್ಯವಹಾರವೇ ದಾಳಿಗೆ ಕಾರಣವೇ ಎಂಬೆಲ್ಲಾ ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

RELATED ARTICLES

Latest News