ಬೆಂಗಳೂರು, ಜು.17- ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅಹಮದಾಬಾದ್‌ಗೆ ತೆರಳಬೇಕಿದ್ದ ಇಂಡಿಗೋ ವಿಮಾನಕ್ಕೆ ಹುಸಿ ಬಾಂಬ್ ಬೆದರಿಕೆ ಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಳೆದ ರಾತ್ರಿ 8 ಗಂಟೆಗೆ ಬೆಂಗಳೂರಿನಿಂದ ಅಹಮದಾಬಾದ್‌ಗೆ ಹೊರಡಬೇಕಿದ್ದ ಇಂಡಿಗೋ ಸಂಸ್ಥೆಯ 6ಇ-6423 ವಿಮಾನದಲ್ಲಿ ಈ ಘಟನೆ ನಡೆದಿದೆ.
ಪೊಲೀಸರ ಪ್ರಕಾರ, ಕಳೆದ ರಾತ್ರಿ 7.35ರ ವೇಳೆಗೆ ವಿಮಾನದ ಮುಂಭಾಗದ ಶೌಚಾಲಯದಲ್ಲಿ ಸಿಬ್ಬಂದಿಗೆ ಬಂಬ್ ಇದೆ ಹೋಗಬೇಡಿ ಎಂದು ಕೈಬರಹದಲ್ಲಿ ಬರೆದಿದ್ದ ಚೀಟಿ ಪತ್ತೆಯಾಗಿದೆ.
ಇದನ್ನು ಗಮನಿಸಿದ ತಕ್ಷಣ ಭದ್ರತಾ ನಿಯಮಾವಳಿಗಳಂತೆ ಅಧಿಕಾರಿಗಳು ಕ್ರಮ ಕೈಗೊಂಡು, ವಿಮಾನದಲ್ಲಿ ಸಂಪೂರ್ಣ ತಪಾಸಣೆ ನಡೆಸಿದರು. ಆದರೆ ಯಾವುದೇ ಅನುಮಾನಾಸ್ಪದ ವಸ್ತು ಪತ್ತೆಯಾಗಿಲ್ಲ.
ಈ ಸಂಬಂಧ ಕೆಐಎಎಲ್ ವಿಮಾನ ನಿಲ್ದಾಣ ಪೊಲೀಸ್ ಠಾಣೆಗೆ ಇಂಡಿಗೋ ಸಂಸ್ಥೆ ದೂರು ನೀಡಿದ್ದು, ಈ ಹುಸಿ ಬೆದರಿಕೆಯಿಂದ ಪ್ರಯಾಣಿಕರು, ಸಿಬ್ಬಂದಿ ಹಾಗೂ ವಿಮಾನಯಾನ ಸಂಸ್ಥೆಯ ಸುರಕ್ಷತೆಗೆ ಸಂಬಂಧಿಸಿದ ಗಂಭೀರ ಆತಂಕ ಉಂಟಾಗಿದ್ದು, ಸೇವೆಯಲ್ಲೂ ವ್ಯತ್ಯಯ ಉಂಟಾಗಿದೆ ಎಂದು ತಿಳಿಸಿದೆ.
ಘಟನೆಗೆ ಕಾರಣರಾದ ವ್ಯಕ್ತಿಯನ್ನು ಪತ್ತೆಹಚ್ಚಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸಂಸ್ಥೆ ಪೊಲೀಸರನ್ನು ಕೋರಿದೆ.ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಿಕೊಂಡಿರುವ ಪೊಲೀಸರು, ಹುಸಿ ಬಾಂಬ್ ಬೆದರಿಕೆ ನೀಡಿದ ವ್ಯಕ್ತಿಯನ್ನು ಪತ್ತೆಹಚ್ಚಲು ಹಾಗೂ ಅದರ ಹಿಂದಿನ ಉದ್ದೇಶವನ್ನು ತಿಳಿದುಕೊಳ್ಳಲು ತನಿಖೆ ಮುಂದುವರಿಸಿದ್ದಾರೆ.
