ಬೆಂಗಳೂರು,ಫೆ.15- ಕೇಂದ್ರದಿಂದ ರಾಜ್ಯಕ್ಕೆ ನೀಡುವ ತೆರಿಗೆ ಪಾಲಿನಲ್ಲಿ ಭಾರೀ ಅನ್ಯಾಯವಾಗುತ್ತಿದ್ದು, ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ ಮಾತು ವಿಧಾನಪರಿಷತ್‍ನಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಭಾರೀ ಗದ್ದಲ, ಕೋಲಾಹಲ, ಮಾತಿನ ಚಕಮಕಿ, ಆರೋಪ-ಪ್ರತ್ಯಾ ರೋಪಗಳು ನಡೆದು ಸದನವನ್ನು ಕೆಲಕಾಲ ಮುಂದೂಡಿದ ಪ್ರಸಂಗ ಜರುಗಿತು. ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್‍ನ ಯು.ಬಿ.ವೆಂಕಟೇಶ್ ಅವರು ಕೇಂದ್ರದಿಂದ ರಾಜ್ಯಕ್ಕೆ ನೀಡುವ ತೆರಿಗೆ ಪಾಲಿನ ಮೊತ್ತದ ಬಗ್ಗೆ ಪ್ರಶ್ನೆ ಕೇಳಿದ್ದರು.
ಇದಕ್ಕೆ ಸದನದಲ್ಲಿ ಸುದೀರ್ಘ ಉತ್ತರ ನೀಡಿದ ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕೇಂದ್ರದಿಂದ ನಮಗೆ ಒಟ್ಟು 11,495 ಕೋಟಿ ಹಣ ಬರಬೇಕು. ಆದರೆ ಒಂದೇ ಒಂದು ರೂಪಾಯಿಯೂ ಕೊಡದಿರುವ ಕಾರಣ ಅಭಿವೃದ್ಧಿ ಕಾರ್ಯಗಳು ಸ್ಥಗಿತವಾಗಿದೆ ಎಂದು ಆರೋಪಿಸಿದರು.
ಈ ವೇಳೆ ಬಿಜೆಪಿ ಸದಸ್ಯ ರುದ್ರಗೌಡ ಅವರು ಎದ್ದುನಿಂತು ಮಾತನಾಡಲು ಮುಂದಾಗುತ್ತಿದ್ದಂತೆ ಸಿಡಿಮಿಡಿಗೊಂಡ ಸಿದ್ದರಾಮಯ್ಯ, ನಾನಿನ್ನು ಉತ್ತರವನ್ನೇ ಮುಗಿಸಿಲ್ಲ. ಏಯ್ ಕುಳಿತುಕೊಳ್ಳಿ ಎಂದು ಏರಿದ ಧ್ವನಿಯಲ್ಲಿ ಗದರಿಸಲು ಮುಂದಾದರು. ಇದರಿಂದ ಕೆರಳಿದ ಬಿಜೆಪಿ ಸದಸ್ಯರು ಈ ರೀತಿ ಮಾತನಾಡುವುದು ಸರಿಯಲ್ಲ. ಸದಸ್ಯರಿಗೆ ನಿರ್ದೇಶನ ನೀಡುವ ಅಧಿಕಾರ ಸಭಾಪತಿಗಳಿಗೆ ಮಾತ್ರ ಇರುತ್ತದೆ. ಈ ರೀತಿ ಮಾತನಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ಈ ಹಂತದಲ್ಲಿ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಮುಖ್ಯಮಂತ್ರಿ ಬೆಂಬಲಕ್ಕೆ ಕಾಂಗ್ರೆಸ್ ಸದಸ್ಯರು ನಿಂತರೆ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಒಂದಾಗಿ ಕಾಂಗ್ರೆಸ್ ವಿರುದ್ಧ ಮುಗಿಬಿದ್ದರು. ಪ್ರತಿಪಕ್ಷದ ನಾಯಕ ಕೋಟಾ ಶ್ರೀನಿವಾಸ್ ಮಾತನಾಡಿ, ಒಂದು ಪ್ರಶ್ನೆಗೆ 5ಕ್ಕಿಂತ ಹೆಚ್ಚು ನಿಮಿಷ ಸಮಯ ಉತ್ತರ ನೀಡುವಂತಿಲ್ಲ. ಇದು ಉತ್ತರವೋ ಇಲ್ಲ ಭಾಷಣವೋ, ಅವರ ಪ್ರತಿಯೊಂದು ಮಾತಿನಲ್ಲೂ ಕೇಂದ್ರ ಸರ್ಕಾರವನ್ನು ಗುರಿಯಾಗಿಟ್ಟುಕೊಂಡೇ ಮಾತನಾಡುತ್ತಿದ್ದಾರೆ. ನಮ್ಮ ಬಳಿಯೂ ದಾಖಲೆಗಳಿವೆ. ಮುಖ್ಯಮಂತ್ರಿಗಳು ಸುಳ್ಳು ಹೇಳಿ ಸದನದ ದಿಕ್ಕು ತಪ್ಪಿಸುವುದು ಬೇಡ ಎಂದು ಆಗ್ರಹಿಸಿದರು.
ಅಂತರ್ಧರ್ಮೀಯ ಸಾಮರಸ್ಯಕ್ಕೆ ಸಾಕ್ಷಿಯಾದ ಸ್ವಾಮಿ ನಾರಾಯಣ ದೇಗುಲ
ನಿಮ್ಮ ಬಳಿ ದಾಖಲೆಗಳಿದ್ದರೆ ಹಣಕಾಸು ಆಯೋಗಕ್ಕೆ ಕೊಡಿ. ನೀವು ಏಳು ಕೋಟಿ ಕನ್ನಡಿಗರ ಪರವಾಗಿ ಇದ್ದೀರೋ ಇಲ್ಲವೇ ಕನ್ನಡಿಗರ ವಿರೋಧಿಗಳೋ? ಮೊದಲು ಅದನ್ನು ಬಹಿರಂಗಪಡಿಸಿ. ಸತ್ಯ ಸತ್ಯವೇ. ಸುಳ್ಳು ಸುಳ್ಳೇ. ನೀವು ಎದ್ದು ನಿಂತು ಮಾತನಾಡಿದರೆ ನಾವು ಬಾಯಿಮುಚ್ಚಿಕೊಂಡು ಕೂರುವುದಿಲ್ಲ. ಇಂತಹ ಗೂಂಡಾಗಿರಿ ವರ್ತನೆಗೆ ನಾನು ಜಗ್ಗುವುದಿಲ್ಲ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ನಾವು ತೆರಿಗೆ ಪಾಲನಷ್ಟೇ ಕೇಳುತ್ತಿದ್ದೇವೆ. ಕೇಂದ್ರ ಸರ್ಕಾರದ ವಿರುದ್ಧ ನಾವು ಪ್ರತಿಭಟನೆ ಮಾಡುತ್ತಿಲ್ಲ. ಇದರಲ್ಲಿ ಯಾವುದೇ ರಾಜಕೀಯವೂ ಇಲ್ಲ. ನಮ್ಮ ತೆರಿಗೆ ಪಾಲಿನ ಹಣವನ್ನು ನಮಗೆ ಕೊಡಿ ಎಂದು ಕೇಳುವುದು ತಪ್ಪೇ? ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ಅನುದಾನ ಕೊಡುವುದಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭರವಸೆ ಕೊಟ್ಟಿದ್ದರು. ಸಾಲದಕ್ಕೆ ಮಾಜಿ ಸಿಎಂ ಬೊಮ್ಮಾಯಿ ಅವರು ಇದನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಣೆ ಮಾಡುತ್ತೇವೆ ಎಂದು ಹೇಳಿದ್ದರು. ಇದುವರೆಗೂ ಒಂದೇ ಒಂದು ರೂಪಾಯಿ ಕೂಡ ಬಂದಿಲ್ಲ. ಇದು ಅನ್ಯಾಯವಲ್ಲವೇ ಎಂದು ಪ್ರಶ್ನಿಸಿದರು.
ಕರ್ನಾಟಕದ ಜನತೆ ನಿಮಗೆ ಛೀ, ತೂ ಎಂದು ಉಗಿಯುತ್ತಿದ್ದಾರೆ. ನೀವು ಎಷ್ಟೇ ಸುಳ್ಳು ಹೇಳಿದರೂ ಜನ ನಂಬುವುದಿಲ್ಲ. ಸದನದಲ್ಲಿ ನೀವು ಜೋರು ಮಾಡಿದ ತಕ್ಷಣ ನಾನು ಬಾಯಿ ಮುಚ್ಚಿಕೊಂಡು ಕೂರುವುದಿಲ್ಲ. ಸತ್ಯವನ್ನು ಯಾರಿಂದಲೂ ಹಿಡಿದಿಟ್ಟುಕೊಳ್ಳಲು ಸಾಧ್ಯವಿಲ್ಲ. ಇನ್ನು ಎಷ್ಟು ದಿನ ಇಂಥ ಸುಳ್ಳು ಹೇಳಿಕೊಂಡು ತಿರುಗುತ್ತೀರಿ. ನಿಮ್ಮ ಗೂಂಡಾ ವರ್ತನೆಗೆ ನಾನು ಸುಮ್ಮನಿರಬೇಕೇ? ಎಂದು ಪ್ರಶ್ನಿಸಿದರು.
ರಾಜ್ಯಸಭೆಗೆ ಜೆಡಿಎಸ್ ಅಭ್ಯರ್ಥಿ ಕಣಕ್ಕೆ : ಅಡ್ಡ ಮತದಾನ ಭೀತಿ
ನಾವು ಯಾವುದೇ ವಿಷಯದಲ್ಲಿ ಚರ್ಚೆಗೆ ಸಿದ್ದರಿದ್ದೇವೆ. ಬಿಜೆಪಿಯವರಿಗೆ ಸತ್ಯ ಹೇಳಿದರೆ ಆಗುವುದಿಲ್ಲ. ಅವರದ್ದು ಸುಳ್ಳಿನ ಕಂತೆ ಎಂದು ಟೀಕಾ ಪ್ರಹಾರ ನಡೆಸಿದರು. ಈ ವೇಳೆ ಕೋಟಾ ಶ್ರೀನಿವಾಸ್ ಪೂಜಾರಿ, ಗೂಂಡಾಗಿರಿ ಎಂಬ ಪದ ಬಳಸಿದ್ದು ಸರಿಯಲ್ಲ. ವಿಧಾನಸೌಧದಲ್ಲಿ ತೊಡೆ ತಟ್ಟಿದವರು ಯಾರು ಎಂಬುದು ಗೊತ್ತಿದೆ. ನಮ್ಮ ಬಳಿಯೂ ದಾಖಲೆಗಳಿವೆ. ನಾವು ಚರ್ಚೆಗೆ ಸಿದ್ದ ಎಂದು ತಿರುಗೇಟು ನೀಡಿದರು.
ಈ ವೇಳೆ ಕಾಂಗ್ರೆಸ್ ಸದಸ್ಯರು ನಮ್ಮ ತೆರಿಗೆ ನಮ್ಮ ಹಕ್ಕು ಎಂದು ಘೋಷಣೆ ಕೂಗಿದರು. ಆಗ ಸಭಾಪತಿಯವರು ಪ್ರತಿಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್ ಅವರಿಗೆ ಮಾತನಾಡಲು ಅವಕಾಶ ಕೊಡುತ್ತಿದ್ದಂತೆ, ನಾನು ಇನ್ನು ಉತ್ತರ ಕೊಡಬೇಕು. ಪ್ರಶ್ನೆ ಕೇಳಿದವರು ಸುಮ್ಮನಿದ್ದಾರೆ. ನೀವು ಅದ್ಹೇಗೆ ಮಾತನಾಡಲು ಅವಕಾಶ ಕೊಡುತ್ತೀರಿ ಎಂದು ಸಭಾಪತಿಗಳನ್ನು ಪ್ರಶ್ನಿಸುತ್ತಿದ್ದಂತೆ ಸದನದಲ್ಲಿ ಮತ್ತೆ ಗದ್ದಲ ಉಂಟಾಯಿತು. ಬಳಿಕ ಸಭಾಪತಿ ಸದನವನ್ನು ಕೆಲಕಾಲ ಮುಂದೂಡಿದರು.